‘ನೀವು ಕ್ಷಮೆಗೆ ಅರ್ಹರಲ್ಲ’ : ನಿರ್ಭಯಾ ‘ಹತ್ಯಾ’ಚಾರಿಗೆ ಗಲ್ಲು ಫಿಕ್ಸ್…

ನಿರ್ಭಯಾ ಪ್ರಕರಣದ ಅಪರಾಧಿ ಅಕ್ಷಯ್​ ಕುಮಾರ್​ ಸಿಂಗ್​ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದ್ದು, ಅಪರಾಧಿಗೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ.

2012 ರ ನಿರ್ಭಯ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಕ್ಷಯ್ ಠಾಕೂರ್ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದ್ದು, ತೀರ್ಪು ಪ್ರಕಟವಾಗಿದೆ.

ಈ ಪ್ರಕರಣದ ಮೂರನೇ ಅಪರಾಧಿ ಅಕ್ಷಯ್ ಸಲ್ಲಿಸಿದ್ದ ಕ್ಷಮದಾನ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಭಾನುಮತಿ, ಎಸ್.ಎ.ಭೋಪಣ್ಣ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಹೊಸ ತ್ರಿಸದಸ್ಯ ಪೀಠವು ಈ ಮನವಿಯನ್ನು ಸಾರಾ ಸಗಟಾಗಿ ತಳ್ಳಿ ಹಾಕಿ 2017ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿಯಿತು.

ಈಗಾಗಲೇ ಕೆಳನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ಆರೋಪಿಗಳಿಗೆ ಮರಣದಂಡನೆ ವಿಧಿಸಿದೆ. ಈ ಪ್ರಕರಣದಲ್ಲಿ ತನಿಖೆ ಸರಿಯಾಗಿ ನಡೆದಿಲ್ಲ ಎಂಬ ವಾದವನ್ನು ಒಪ್ಪಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕ್ಷಮಾದಾನ ಮನವಿ ಮರುಪರಿಶೀಲನೆಗೆ ಅರ್ಹವಲ್ಲ ಎಂದು ನ್ಯಾಯಪೀಠ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪಾದಿತರಲ್ಲಿ ಅಕ್ಷಯ್‍ಕುಮಾರ್ ಸಲ್ಲಿಸಿದ್ದ ಕ್ಷಮಾದಾನ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ವೇಳೆ ಭಾರೀ ವಾದ-ವಾಗ್ವಾದ ನಡೆಯಿತು. ಆಪಾದಿತ ಅಕ್ಷಯ್‍ಕುಮಾರ್ ಪರವಾಗಿ ಆರಂಭದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಎ.ಪಿ.ಸಿಂಗ್, ಈ ಪ್ರಕರಣದಲ್ಲಿ ಸಾಕಷ್ಟು ಹೊಸ ಅಂಶಗಳಿವೆ. ಅಕ್ಷಯ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಅಥವಾ ಪುರಾವೆಗಳಿಲ್ಲ. ಇವುಗಳನ್ನು ನಾನು ನ್ಯಾಯಾಲಯದ ಮುಂದೆ ಇಡುತ್ತೇನೆ ಎಂದರು.

ಈ ಪ್ರಕರಣದಲ್ಲಿ ಮಾಧ್ಯಮಗಳು ವಿನಾಕಾರಣ ಒತ್ತಡ ಹೇರುತ್ತಿವೆ. ಆರೋಪಿಗಳನ್ನು ಮುಗಿಸುವಂತೆ ಪೊಲೀಸರ ಮೇಲೆ ಒತ್ತಡವನ್ನೂ ಹೆಚ್ಚಿಸಲಾಗುತ್ತಿದೆ. ಈ ಪ್ರಕರಣದ ಆರೋಪಿಯೊಬ್ಬ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಎಂಬುದನ್ನು ಅವರು ತಮ್ಮ ವಾದದಲ್ಲಿ ಉಲ್ಲೇಖಿಸಿದರು. ಆರಂಭದಲ್ಲಿ ಅಕ್ಷಯ್ ಪರ ವಾದ ಮಂಡಿಸಿದ ಇದೇ ವಕೀಲ ಎ.ಪಿ.ಸಿಂಗ್ ಮರಣದಂಡನೆ ಒಂದೇ ಎಲ್ಲದಕ್ಕೂ ಪರಿಹಾರವಲ್ಲ. ಗಲ್ಲು ಶಿಕ್ಷೆಯಿಂದ ಏನನ್ನೂ ಸಾಧಿಸಲಾಗದು ಎಂದು ವಾದ ಮಂಡಿಸಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಮರಣ ದಂಡನೆ ಶಿಕ್ಷೆಯಿಂದ ವಿನಾಯ್ತಿ ನೀಡಲಾಗಿದೆ. ಪ್ರಮುಖ ಆಪಾದಿತೆ ನಳೀನಿಯ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿದೆ ಎಂಬ ಅಂಶವನ್ನು ಸಿಂಗ್ ತಮ್ಮ ವಾದದ ವೇಳೆ ಉಲ್ಲೇಖಿಸಿದರು. ಹಿಂದೂ ಧರ್ಮವು ಜೀವ ಹಾನಿ ಮತ್ತು ಕೊಲೆಯನ್ನು ಒಪ್ಪುವುದಿಲ್ಲ ಮಹಾತ್ಮಗಾಂಧಿಯವರು ಕೂಡ ಮರಣದಂಡನೆ ಶಿಕ್ಷೆ ಸಂದರ್ಭದಲ್ಲಿ ಬಡವರು ಮತ್ತು ದುರ್ಬಲರ ಮೇಲೆ ದಯೆ ತೋರಬೇಕೆಂಬ ಮಾತನ್ನು ಹೇಳಿದ್ದಾರೆ ಎಂದು ಅವರು ವಾದಿಸಿದರು.

ಮನುಷ್ಯನ ಆಯಸ್ಸೇ ಕ್ಷೀಣಿಸುತ್ತಿರುವಾಗ ಮರಣ ದಂಡನೆ ಶಿಕ್ಷೆ ವಿಧಿಸುವ ಅಗತ್ಯವೇನು? ದೆಹಲಿಯಲ್ಲಿ ಮಾರಕ ವಾಯುಮಾಲಿನ್ಯ ದುಷ್ಪರಿಣಾಮ ಇರುವಾಗ ಗಲ್ಲು ಶಿಕ್ಷೆ ವಿಧಿಸಬೇಕೇ ಎಂದು ಅವರು ಪ್ರಶ್ನಿಸಿದರು. ಅಪರಾಧಿಯನ್ನು ಕೊಲ್ಲಬಹುದೇ ಹೊರತು ಅಪರಾಧವನಲ್ಲ. ರಕ್ತಕ್ಕೆ ರಕ್ತ ಎಂಬ ನೀತಿಯನ್ನು ಒಪ್ಪಬಾರದು ಎಂದು ವಕೀಲರು ಉಲ್ಲೇಖಿಸಿದರು.

ಈ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರನ್ನು ನಂತರ ಸೇರಿಸಲಾಗಿದೆ. ಈತ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ಪೂರಕ ಸಾಕ್ಷಾಧಾರಗಳಿಲ್ಲ. ಪ್ರಮುಖ ಸಾಕ್ಷಿಯನ್ನು ಹಣ ಕೊಟ್ಟು ಖರೀದಿಸಲಾಗಿದೆ. ನಿರ್ಭಯಾ ಗೆಳಯನಿಗೆ ಸಾಕಷ್ಟು ಲಂಚ ಕೊಟ್ಟು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ ಎಂದು ವಾದ ಮಂಡಿಸಿದ ಅವರು, ಈ ಎಲ್ಲ ಕಾರಣಗಳಿಂದ ಅಕ್ಷಯ್‍ಕುಮಾರ್‍ಗೆ ಗಲ್ಲು ಶಿಕ್ಷೆಯಿಂದ ವಿನಾಯ್ತಿ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.

ನಂತರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಕ್ಷಯ್‍ಕುಮಾರ್ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂಬುದಕ್ಕೆ ನಿರ್ಭಯಾಳ ಉಂಗುರ ಮತ್ತು ಕೆಂಪು ಕಲರ್ ಬನಿಯನ್ ಆತನಲ್ಲಿ ಪತ್ತೆಯಾಗಿರುವುದಕ್ಕೆ ಸಾಕ್ಷಾಧಾರವಿದೆ. ಡಿಎನ್‍ಎ ಮತ್ತಿತರ ಪರೀಕ್ಷೆಗಳಲ್ಲೂ ಈ ಗಂಭೀರ ಅಪರಾಧ ಕೃತ್ಯವನ್ನು ಎಸಗಿರುವುದಕ್ಕೆ ಪುರಾವೆ ಒದಗಿಸಿವೆ ಎಂದರು.

ಈ ಹಿಂದೆ ಈ ಪ್ರಕರಣ ಸಂಬಂಧ ಈಗಾಗಲೇ ದೆಹಲಿ ನ್ಯಾಯಾಲಯ, ವಿಚಾರಣಾ ನ್ಯಾಯಾಲಯಗಳು ಮತ್ತು ಸುಪ್ರೀಂಕೋರ್ಟ್ ಆಪಾದಿತರ ಅರ್ಜಿಗಳನ್ನು ತಿರಸ್ಕರಿಸಿ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿವೆ. ಅಲ್ಲದೆ ರಾಷ್ಟ್ರಪತಿಯವರು ಕೂಡ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಅಕ್ಷಯ್‍ಕುಮಾರ್ ಸೇರಿದಂತೆ ಎಲ್ಲಾ ನಾಲ್ವರಿಗೂ ಮರಣದಂಡನೆಯೇ ಸೂಕ್ತ ಎಂದು ವಾದಿಸಿದರು.

ಆಪಾದಿತರು ಎಸಗಿರುವ ಅತ್ಯಂತ ಅಮಾನುಷ ಕೃತ್ಯದಿಂದ ಆ ಭಗವಂತನಿಗೆ ನಾಚಿಕೆಯಾಗಿರಬೇಕು. ಅಕ್ಷಯ್‍ಗೆ ಕ್ಷಮಾದಾನ ನೀಡುವಷ್ಟು ಹಗುರವಾದ ಪ್ರಕರಣ ಇದಲ್ಲ. ಇತರ ಮೂವರಿಗೆ ವಿಧಿಸಿರುವಂತೆ ಈತನಿಗೂ ಗಲ್ಲುಶಿಕ್ಷೆಯೇ ಸೂಕ್ತ. ಯಾವುದೇ ಕಾರಣಕ್ಕು ಕರುಣೆ ತೋರುವ ಪ್ರಕರಣ ಇದಲ್ಲ. ಹೀಗಾಗಿ ಅಕ್ಷಯ್‍ಗೆ ನೇಣುಗಂಬದ ಶಿಕ್ಷೆಯೇ ಅತ್ಯಂತ ಸಮಂಜಸವಾದುದು ಎಂದು ತುಷಾರ್ ಮೆಹ್ತಾ ವಾದ ಮಂಡಿಸಿದರು.

ಭಾರೀ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಮಧ್ಯಾಹ್ನ 1 ಗಂಟೆಗೆ ತೀರ್ಪು ಕಾಯ್ದಿರಿಸಿತ್ತು. ನಂತರ ಸಮಾವೇಶಗೊಂಡ ನ್ಯಾಯಾಲಯದಲ್ಲಿ ಅಂತಿಮ ತೀರ್ಪು ನೀಡಲಾಯಿತು.

ಹತ್ಯಾಚಾರಿಗಳಿಗೆ ಶೀಘ್ರ ಡೆತ್ ವಾರೆಂಟ್ ಹೊರಡಿಸಬೇಕೆಂದು ಕೋರಿ ಈ ಹಿಂದೆ ನಿರ್ಭಯಾ ಪೊಷಕರು ಅರ್ಜಿ ಸಲ್ಲಿಸಿದರು. ಆದರೆ ವಿಚಾರಣೆಯನ್ನು ಮುಂದೂಡಿದ ದೆಹಲಿ ಕೋರ್ಟ್ ಅಕ್ಷಯ್ ಕ್ಷಮಾದಾನ ಕುರಿತ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಡಿ.18ರಂದು ನಡೆಸಲಿದೆ. ಆ ತೀರ್ಪನ್ನು ಆಧರಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿತ್ತು. ಸುಪ್ರೀಂಕೋರ್ಟ್‍ನ ಇಂದಿನ ತೀರ್ಪಿನ ಬಗ್ಗೆ ಇಡೀ ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights