ಬೆಂಗಳೂರಿನಲ್ಲಿ ಇಂದಿನಿಂದ ಫೀವರ್ ಕ್ಲಿನಿಕ್​ ಕಾರ್ಯಾರಂಭ

ಕೊರೋನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರವು ಕೊರೋನಾ ನಿಗ್ರಹಕ್ಕಾಗಿ 21 ದಿನಗಳ ಕಾಲ ಲಾಕ್​ಡೌನ್​​ ಘೋಷಣೆ ಮಾಡಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ 3 ಮಂದಿ ವೈರಸ್​​ಗೆ ತುತ್ತಾಗಿದ್ದರೆ, 70ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಕೊರೋನಾ ವೈರಸ್​ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸೂಕ್ತ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಅದರಂತೆ ಇಂದಿನಿಂದ ಬೆಂಗಳೂರಿನಲ್ಲಿ ಫೀವರ್ ಕ್ಲಿನಿಕ್​ಗಳು ಆರಂಭವಾಗುತ್ತಿವೆ. ನಗರದ 31 ಕಡೆಗಳಲ್ಲಿ ಫೀವರ್ ಕ್ಲಿನಿಕ್​​ಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕ್ಲಿನಿಕ್​ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತವೆ. ಫೀವರ್ ಕ್ಲಿನಿಕ್​ಗಳಲ್ಲಿ ಜ್ವರ, ಕಫ ಹಾಗೂ ಸ್ಕ್ರೀನಿಂಗ್ ಟೆಸ್ಟ್​​ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೊಂದು ಕ್ಲಿನಿಕ್​ನಲ್ಲೂ ವೈದ್ಯಾಧಿಕಾರಿ, ಶುಶ್ರೂಶಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಫೀವರ್ ಕ್ಲಿನಿಕ್ ಗಳಲ್ಲಿ ನೇರವಾಗಿ ರೋಗಿಗಳ ಪರೀಕ್ಷೆ ಮಾಡುವವರಿಗೆ ಪಿಪಿಇ ಕಿಟ್ ನೀಡಲಾಗಿದೆ. ತಲೆಯಿಂದ ಕಾಲಿನವರಗೆ ರಕ್ಷಾ ಕವಚದಂತಿರುವ ದಿರಿಸು ಧರಿಸಿಯೇ ಇವರು ಜ್ವರ, ನೆಗಡಿ, ಕೆಮ್ಮು ಇರುವವರ ಪರೀಕ್ಷೆ ಮಾಡಲಿದ್ದಾರೆ. ಕೊರೋನಾ ಅಲ್ಲದೇ ಬೇರೆ ಸಣ್ಣ ಪುಟ್ಟ ಖಾಯಿಲೆಗಳಿಗೂ ಜನ ಫೀವರ್ ಕ್ಲಿನಿಕ್​​​ಗೆ ಬರಬಹುದು.

ಸ್ಯಾನಿಟೈಸರ್, ಒಬ್ಬರಿಂದ ಒಬ್ಬರು ಸಾಕಷ್ಟು ದೂರದಲ್ಲಿ ನಿಲ್ಲುವುದು, ಮುಂತಾದ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕ್ಲಿನಿಕ್​ಗೆ ಬರುವ ರೋಗಿಗಳಿಗೆ ಜ್ವರ ಇದ್ದಾಗ ಅವರಿಗೆ ಅಗತ್ಯವಾದ ಪ್ಯಾರಾಸಿಟಮಾಲ್, ಓಆರ್​​​ಎಸ್ ಮತ್ತು ನೆಗಡಿಯ ಔಷಧಗಳನ್ನು ಸಿದ್ದ ಮಾಡಿಟ್ಟುಕೊಳ್ಳಲಾಗಿದೆ. ಸಾಮಾನ್ಯ ಜ್ವರವಾದರೆ ಈ ಔಷಧಗಳನ್ನು ನೀಡಿ ಸ್ವಲ್ಪ ಸಮಯ ಕಾದು ನೋಡುವಂತೆ ತಿಳಿಸಲಾಗುತ್ತದೆ. ಪ್ರತಿಯೊಬ್ಬ ರೋಗಿಯ ಸಂಪೂರ್ಣ ವಿವರ ಪಡೆಯಲಾಗುತ್ತದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎರಡು ದಿನಗಳ ಹಿಂದೆ ಫೀವರ್​ ಕ್ಲಿನಿಕ್​ ಆರಂಭಿಸುವ ಬಗ್ಗೆ ಮಾತನಾಡಿದ್ದರು. ಫೀವರ್ ಕ್ಲಿನಿಕ್​​ಗಳನ್ನು ಇನ್ನೆರಡು ದಿನಗಳಲ್ಲಿ ಪ್ರಾರಂಭ ಮಾಡುತ್ತೇವೆ ಎಂದಿದ್ದರು. 31 ಹರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ ಗುರುತಿಸಲಾಗಿದೆ. ಅಗತ್ಯ ವಸ್ತುಗಳಿಗಾಗಿ ಸೂಪರ್ ಮಾರ್ಕೆಟ್, ದಿನಸಿ ಅಂಗಡಿಗಳಿಗೆ ಅನುಮತಿ ಕೊಟ್ಟಿದ್ದೇವೆ. ಜನರು ಬದುಕಬೇಕು. ಹೀಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಸೂಪರ್ ಮಾರ್ಕೆಟ್​​​ಗಳಿಗೆ ಅನುಮತಿ ನೀಡಲಾಗಿದೆ. ಸೂಪರ್ ಮಾರ್ಕೆಟ್​​ಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಸಲಾಗಿದೆ. ಜನರಿಗೆ ತೊಂದರೆಯಾಗಬಾರದು ಎಂದು ಈ ಕ್ರಮ ತೆಗೆದುಕೊಂಡಿದ್ದೇವೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕಾರ ನೀಡಬೇಕು ಎಂದು ಸುಧಾಕರ್ ಮನವಿ ಮಾಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights