ಹಿರಿಯ ಸಾಹಿತಿ, ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ವಿಧಿವಶ!

ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ(67) ಚಿಕಿತ್ಸೆ ಫಲಕಾರಿಯಾಗದೇ, ಸಾವನ್ನಪ್ಪಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತೆ ಆಗಿದೆ.

ಕಳೆದ ಮೇ.2ರಂದು ಕೆಮ್ಮ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಂತ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಹೀಗಾಗಿ ಚಿಕಿತ್ಸೆಗಾಗಿ ರಂಗದೊರೆ ಆಸ್ಪತ್ರೆ, ಅಪೋಲೋ ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳಿಗೆ ಸುತ್ತಾಡಿದ್ದರೂ ಬೆಡ್ ಸಿಕ್ಕಿರಲಿಲ್ಲ. ಅಂತಿಮವಾಗಿ ಡಿಸಿಎಂ ಡಾ.ಸಿಎನ್ ಅಶ್ವತ್ಥ್ ನಾರಾಯಣಗೆ ವಿಷಯ ತಿಳಿಯುತ್ತಿದ್ದಂತೆ ಕರೆ ಮಾಡಿ, ಬೆಡ್ ವ್ಯವಸ್ಥೆ ಮಾಡಿದ್ದರಿಂದಾಗಿ ಮೇ.3ರಂದು ರಂಗದೊರೆ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ಬೆಡ್ ದೊರೆತು ಚಿಕಿತ್ಸೆ ಪಡೆಯುತ್ತಿದ್ದರು.

ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ರಂಗದೊರೆ ಆಸ್ಪತ್ರೆಯಿಂದ ಕಳೆದ ಸೋಮವಾರದಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾ ಸೋಂಕಿನಿಂದ ಗುಣಮುಖರಾಗಿ ಚೇತರಸಿಕೊಂಡರು ಎನ್ನುತ್ತಿರುವಾಗಲೇ, ಇಂದು ಚಿಕಿತ್ಸೆ ಫಲಕಾರಿಯಾಗೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲವಾಗಿದ್ದಾರೆ. ಈ ಮೂಲಕ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತೆ ಆಗಿದೆ.

ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೋಟ

ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.

ಜನನ, ಜೀವನ

ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

ಕೃತಿಗಳು

ಪಿ.ಎಚ್ ಡಿ ಸಂಶೋಧನಾಪ್ರಬಂಧ – ಗ್ರಾಮ ದೇವತೆಗಳು, 1997
ಕವನ ಸಂಕಲನಗಳು

ಹೊಲೆ ಮಾದಿಗರ ಹಾಡು, 1975
ಮೆರವಣಿಗೆ, 2000
ಸಾವಿರಾರು ನದಿಗಳು, 1979
ಕಪ್ಪು ಕಾಡಿನ ಹಾಡು, 1983
ಆಯ್ದಕವಿತೆಗಳು, 1997
ಅಲ್ಲೆಕುಂತವರೆ
ನನ್ನ ಜನಗಳು ಮತ್ತು ಇತರ ಕವಿತೆಗಳು, 2005
ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003
ವಿಮರ್ಶನಾ ಕೃತಿಗಳು

ಹಕ್ಕಿ ನೋಟ, 1991
ರಸಗಳಿಗೆಗಳು
ಎಡಬಲ
ಉರಿಕಂಡಾಯ, 2009
ಲೇಖನಗಳ ಸಂಕಲನ

ಅವತಾರಗಳು, 1991
ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1, 1996
ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, 2004
ಜನಸಂಸ್ಕೃತಿ, 2007
ನಾಟಕಗಳು

ಏಕಲವ್ಯ, 1986
ನೆಲಸಮ, 1980
ಪಂಚಮ, 1980
ಆತ್ಮಕಥೆ

ಊರುಕೇರಿ- ಭಾಗ-1, 1997
ಊರುಕೇರಿ- ಭಾಗ-2, 2006
ಗೌರವ, ಪ್ರಶಸ್ತಿಗಳು

ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
ಜಾನಪದ ತಜ್ಞ ಪ್ರಶಸ್ತಿ -2001
2 ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.
ಸಂದೇಶ್ ಪ್ರಶಸ್ತಿ -2001
ಡಾ.ಅಂಬೇಡ್ಕರ್ ಪ್ರಶಸ್ತಿ -2002
ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
ಬಾಬುಜಗಜೀವನರಾಮ್ ಪ್ರಶಸ್ತಿ -2005
ನಾಡೋಜ ಪ್ರಶಸ್ತಿ -2007
ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
ನೃಪತುಂಗ ಪ್ರಶಸ್ತಿ -2018
ಪಂಪ ಪ್ರಶಸ್ತಿ – 2019

ಹೀಗೆ ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದಂತ ಕೊಡುಗೆಯನ್ನು ನೀಡಿದ್ದಂತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲವಾಗಿದ್ದಾರೆ. ಈ ಮೂಲಕ ಸಾಹಿತ್ಯಲೋಕದ ಕೊಂಡಿಯೊಂದು ಕಳಚಿದಂತೆ ಆಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾದಂತೆ ಆಗಿದೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights