ಶರತ್ ಬಚ್ಚೇಗೌಡರ ಕುಟುಂಬ 229 ಎಕರೆ ಭೂಮಿ ಕಬಳಿಸಿದೆ: ಸಚಿವ ಎಂಟಿಬಿ ನಾಗರಾಜ್ ಆರೋಪ

ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವಿನ ಜಗಳ ತಾರಕಕ್ಕೇರಿದೆ. ಬಡವರ ಕೃಷಿ ಜಮೀನು ಮತ್ತು ಸ್ಮಶಾನದ ಜಮೀನುಗಳನ್ನು ಶರತ್ ಬಚ್ಚೇಗೌಡರ ತಂದೆ ಕಬಳಿಸಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.

ಅಧಿಕಾರ ದುರುಪಯೋಗಪಡಿಸಿಕೊಂಡು ಬಡವರನ್ನು ಬೆದರಿಸಿ, ಹೆದರಿಸಿ ಜಮೀನುಗಳನ್ನು ಕಿತ್ತುಕೊಂಡಿದ್ದಾರೆ. ಸ್ಮಶಾನದ ಜಾಗವನ್ನು ಕೂಡ ಕಿತ್ತುಕೊಂಡಿದ್ದಾರೆ. ಜನರ ಸೇವೆ ಎಂದು ಹೇಳಿಕೊಂಡು ಜನಪ್ರತಿನಿಧಿಗಳಾಗಿ ಬಡವರನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ, ನಾನು ನೀಡುತ್ತೇನೆ, ತಂದೆ-ಮಕ್ಕಳಿಗೆ ಮನುಷ್ಯತ್ವ ಇದ್ದರೆ, ರಾಜಕೀಯದಲ್ಲಿ ಇನ್ನೂ ಮುಂದುವರಿಯಬೇಕು ಎಂದಿದ್ದರೆ ಬಡವರ ಜಮೀನುಗಳನ್ನು ತಕ್ಷಣವೇ ವಾಪಸ್ ನೀಡಲಿ ಎಂದು ಸಚಿವ ನಾಗರಾಜ್ ಸವಾಲು ಹಾಕಿದ್ದಾರೆ.

ರಾಜಕಾರಣಿಗಳು ರಾಜಕೀಯಕ್ಕೆ ಬರುವುದು, ಅಧಿಕಾರ ಕೊಟ್ಟ ಜನಕ್ಕೆ ಸೇವೆ ಮಾಡಲು, ನ್ಯಾಯ ಒದಗಿಸಲು, ನಾಲ್ಕು ಜನಕ್ಕೆ ಸಹಾಯ ಮಾಡಲು ರಾಜಕೀಯಕ್ಕೆ ಬಂದವನು ನಾನು. ನನ್ನ ವಿರುದ್ಧ ಏನೂ ಆರೋಪ ಮಾಡುವುದಿದ್ದರೂ ಸಾಬೀತು ಮಾಡಲಿ ಎಂದಿದ್ದಾರೆ.

ನಾನು ಅಕ್ರಮ ಆಸ್ತಿ ಮಾಡಿದ್ದೇನೆ, ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದೇನೆ, ಭ್ರಷ್ಟಾಚಾರವೆಸಗುತ್ತಿದ್ದೇನೆ ಎಂದು ಶರತ್ ಬಚ್ಚೇಗೌಡ ಮಾಡಿರುವ ಆರೋಪವನ್ನು ಸಾಬೀತು ಮಾಡಿದರೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights