ಶತಕ ಬಾರಿಸಿದ ಪೆಟ್ರೋಲ್‌ ಬೆಲೆ; ಸಿಹಿ ಹಂಚಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ!

ರಾಜ್ಯದ ಹಲವಾರು ನಗರಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ ದಾಟಿದ್ದು, ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್‌ ಐದು ದಿನಗಳ ಕಾಲ 100 ನಾಟೌಟ್‌ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಕಾರ್ಯಕರ್ತರು ಪೆಟ್ರೋಲ್‌ ಬೆಲೆ ಶತಕ ಬಾರಿಸಿದೆ ಎಂದು ಸಿಹಿ ಹಂಚಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಶುಕ್ರವಾರ ಕೊಪ್ಪಳ ನಗರದ ಕಿಶೋರಿ ಪೆಟ್ರೋಲ್‌ ಪಂಪ್‌ ಬಳಿ  ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು ಪೆಟ್ರೋಲ್‌, ಡೀಸೆಲ್‌ ಹಾಕಿಸಿಕೊಳ್ಳಲು ಬರುವ ಗ್ರಾಹಕರಿಗೆ ಸಿಹಿ ಹಂಚಿ ‘100 ನಾಟೌಟ್’ ಕಂಗ್ರಾಟ್ಸ್‌ ಎಂದು ಹೇಳಿ ಬೆಲೆ ಏರಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲೇ ಜನರು ಕೊರೊನಾ, ಲಾಕ್‌ಡೌನ್‌ನಿಂದ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಅಂಥದರಲ್ಲಿ ಅಗತ್ಯ ವಸ್ತುಗಳ ಬೆಲೆ ದಿನ ಕಳೆದಂತೆ ಗಗನಕ್ಕೇರುತ್ತಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100ಕ್ಕೆ ಏರಿಕೆಯಾಗಿದೆ. ಇದೇ ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಅಸಮಾಧಾನ ಹೊರಹಾಕಿದ್ದಾರೆ.

ಸುಳ್ಳು ಹೇಳುತ್ತಲೇ ಬಿಜೆಪಿ ನಾಯಕರು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಚ್ಛೆ ದಿನ್ ಎಂದು ಹೇಳುತ್ತಾ, ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿದ್ದಾರೆ. ಇಂಧನ ಬೆಲೆ ಏರಿಕೆ ಖಂಡಿಸಿ ಇದೇ ಬಿಜೆಪಿ ನಾಯಕರು ಸೈಕಲ್ ಯಾತ್ರೆ ಮಾಡಿದ್ದರು. ಇವರ ಜನ್ಮಕ್ಕೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಅದೇ ರೀತಿಯಲ್ಲಿ ಕುಷ್ಟಗಿಯಲ್ಲಿಯೂ ಕಾಂಗ್ರೆಸ್‌ ಕಾರ್ಯಕರ್ತರು ಸಿಹಿ ಹಂಚಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಶರತ್ ಬಚ್ಚೇಗೌಡರ ಕುಟುಂಬ 229 ಎಕರೆ ಭೂಮಿ ಕಬಳಿಸಿದೆ: ಸಚಿವ ಎಂಟಿಬಿ ನಾಗರಾಜ್ ಆರೋಪ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights