ಪಂಜಾಬ್‌ ಕಾಂಗ್ರೆಸ್‌ನಲ್ಲೂ ಆಂತರಿಕ ಬಿಕ್ಕಟ್ಟು; ಅಮರಿಂದರ್‌ ಮತ್ತು ಸಿಧು ನಡುವೆ ನಾಯಕತ್ವದ ಕುಸ್ತಿ!

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ಶಮನಕ್ಕಾಗಿ ಪಕ್ಷದ ಹೈಕಮಾಂಡ್‌ ಕಸರತ್ತು ನಡೆಸುತ್ತಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚಿಸಿದ್ದ ಕಾಂಗ್ರೆಸ್ ಸಮಿತಿಯು ಪಕ್ಷದ ಶಾಸಕರು ಮತ್ತು ರಾಜ್ಯದ ಮುಖಂಡರ ಜೊತೆ ಕೆಲವು ದಿನಗಳ ಹಿಂದೆ ಸಭೆ ನಡೆಸಿತ್ತು. ಆದರೂ, ಕಾಂಗ್ರೆಸ್‌ನೊಳಗಿನ ಕಿತ್ತಾಟ ಇನ್ನೂ ಮುಗಿದಿಲ್ಲ.

ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಶಾಸಕ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು, ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಪೋಸ್ಟರ್ ಯುದ್ಧ ಭುಗಿಲೆದ್ದಿದೆ. ಸಿಧು ಅವರನ್ನು ಒಳಗೊಂಡ ಹಲವಾರು ಪೋಸ್ಟರ್‌ಗಳನ್ನು ಅಮರಿಂದರ್ ಅವರ ತವರೂರಾದ ಪಟಿಯಾಲದಲ್ಲಿ ಹಾಕಲಾಗಿದ್ದು, ಮುಖ್ಯಮಂತ್ರಿಯ ಪೋಸ್ಟರ್‌ಗಳು ಅಮೃತಸರದಲ್ಲಿ ಅನೇಕ ಸ್ಥಳಗಳಲ್ಲಿ ಕಾಣಿಸಿಕೊಂಡಿವೆ.

ಈ ಇಬ್ಬರೂ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯವನ್ನು ತಾರ್ಕಿಕವಾಗಿ ಶಮನ ಮಾಡದಿದ್ದರೆ, ಮುಂದಿನ ಚುನಾವಣೆಯಲ್ಲಿ ಅಮರಿಂದರ್‌ ನೇತೃತ್ವದ ಸರ್ಕಾರ ಸಾರ್ವಜನಿಕರನ್ನು ಎದುರಿಸುವುದು ಕಷ್ಟವಾಗುತ್ತಿದೆ ಎಂದು ಪಕ್ಷದ ಒಂದು ವಿಭಾಗ ಹೇಳುತ್ತಿದೆ.

ಅಲ್ಲದೆ, ಅಧಿಕಾರಕ್ಕೆ ಬರುವ ಮೊದಲು ನೀಡಿದ ಹಲವು ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ವಿದ್ಯುತ್ ಖರೀದಿ ಒಪ್ಪಂದಗಳ ಬಗ್ಗೆ ಮರು ಮಾತುಕತೆ ನಡೆಸುವುದು ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಡ್ರಗ್ ಮಾಫಿಯಾ ಕುರಿತ ವರದಿಯನ್ನು ಸಾರ್ವಜನಿಕರಿಗೆ ನೀಡುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವು ವಿಫಲತೆಯನ್ನು ಪ್ರದರ್ಶಿಸಿದೆ ಎಂದು ಆ ವಿಭಾಗ ಒಪ್ಪಿಕೊಂಡಿದೆ.

ಅಸಮಾಧಾನಗೊಂಡ ಬಣವು ರಾಜ್ಯದಲ್ಲಿ ಪಕ್ಷದ ನಾಯಕತ್ವವನ್ನು ಬದಲಿಸಲು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿದ್ದಾರೆ.

ಪೋಸ್ಟರ್ ಯುದ್ಧವು ಪಕ್ಷದೊಳಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಪಟಿಯಾಲದಲ್ಲಿ ‘ಇಡೀ ಪಂಜಾಬ್ ಸಿಧು ಜೊತೆ ಇದೆ’ ಎಂದು ಹೇಳುವ ಪೋಸ್ಟರ್‌ಗಳು ಬಂದಿವೆ. ಅವರನ್ನು ‘ರೈತರ ಧ್ವನಿ’ ಎಂದು ಕರೆಯುವ ಪೋಸ್ಟರ್‌ಗಳು ಸಹ ಹೆಚ್ಚು ರಾರಾಜಿಸುತ್ತಿವೆ.

ಏತನ್ಮಧ್ಯೆ, ಅಮರೀಂದರ್ ಬೆಂಬಲಿಗರು ಪವಿತ್ರ ನಗರವಾದ ಅಮೃತಸರದ ಅನೇಕ ಪ್ರದೇಶಗಳಲ್ಲಿ ‘2022 ರ ಕ್ಯಾಪ್ಟನ್’ ಮತ್ತು ‘ಏಕೈಕ ಕ್ಯಾಪ್ಟನ್’ ಎಂಬ ಸಂದೇಶಗಳೊಂದಿಗೆ ಪೋಸ್ಟರ್‌ಗಳನ್ನು ಹಾಕಿದ್ದಾರೆ.

ಈ ಎಲ್ಲದರ ಮಧ್ಯೆ, ಅಮರಿಂದರ್ ಅವರನ್ನು ಟೀಕಿಸಿದ ರಾಜ್ಯ ತಾಂತ್ರಿಕ ಶಿಕ್ಷಣ ಸಚಿವ ಚರಣಜಿತ್ ಸಿಂಗ್ ಚನ್ನಿ ಅವರು ತಮ್ಮದೇ ಆದ ಪೋಸ್ಟರ್ ಅನ್ನು ಹಾಕಿಕೊಂಡಿದ್ದು, ಅದರಲ್ಲಿ “ಪ್ರತಿ ಮನೆಯಲ್ಲೂ ಎಲ್ಲರ ಸಮಸ್ಯೆಗಳನ್ನು ಚನ್ನಿ ಪರಿಹರಿಸುತ್ತಾರೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶರತ್ ಬಚ್ಚೇಗೌಡರ ಕುಟುಂಬ 229 ಎಕರೆ ಭೂಮಿ ಕಬಳಿಸಿದೆ: ಸಚಿವ ಎಂಟಿಬಿ ನಾಗರಾಜ್ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights