ಕೋವಿಡ್ ಕೇರ್‌ನಲ್ಲಿ ಹೋಮ; ಶಾಸಕ ರೇಣುಕಾಚಾರ್ಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ತಹಶೀಲ್ದಾರ್ ವಿರುದ್ಧವೇ ಆಕ್ರೋಶ!
ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಮತ್ತು ಅವರ ಪತ್ನಿ ಹೊನ್ನಾಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಪ್ರಕರಣ ದಾಖಲಿಸಲು ಅಲ್ಲಿನ ತಹಶೀಲ್ದಾರ್ ಮುಂದಾಗಿದ್ದರು. ಆದರೆ, ಕೋವಿಡ್ ಕೇರ್‌ನಲ್ಲಿದ್ದ ಕೊರೊನಾ ಸೋಂಕಿತರು ರೇಣುಕಾಚಾರ್ಯ ವಿರುದ್ದ ಪ್ರಕರಣ ದಾಖಲಿಸದಂತೆ ತಹಶೀಲ್ದಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ.
ಕೋವಿಡ್ ಸೆಂಟರ್‌ನಲ್ಲಿಯೇ ಪ್ರತಿಭಟನೆ ನಡೆಸಿರುವ ಸೋಂಕಿರು, ಕೋವಿಡ್ ಕೇರ್ ಸೆಂಟರ್‌ನಲ್ಲಿ ನಮಗೆಲ್ಲ ಒಳ್ಳೆಯ ತಿಂಡಿ, ಊಟ, ಉತ್ತಮ ವಾತಾವರಣ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕ ರೇಣುಕಾಚಾರ್ಯ ಸಹ ಇಲ್ಲೇ ತಂಗಿದ್ದಾರೆ. ಉಸ್ತುವಾರಿಯನ್ನು ಉತ್ತಮವಾಗಿಯೇ ನಿಭಾಯಿಸುತ್ತಿದ್ದಾರೆ. ಅವರ ವಿರುದ್ದ ಪ್ರಕರಣ ದಾಖಲಿಸಿದರೆ ನಾವು ಸುಮ್ಮನಿರುವುದಿಲ್ಲ. ತಹಶೀಲ್ದಾರ್ ಈ ಕೂಡಲೇ ಇಲ್ಲಿಗೆ ಬರಬೇಕು. ಅವರು ಬರುವವರೆಗೂ ನಾವು ಊಟ-ತಿಂಡಿ ತಿನ್ನುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ, ತಾವು ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಮಾಡಿಸಿದ್ದಕ್ಕಾಗಿ ತಮ್ಮ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಸ್ವತಃ ಶಾಸಕ ರೇಣುಕಾಚಾರ್ಯ ಪಟ್ಟು ಹಿಡಿದಿದ್ದರು. ತಾಲೂಕು ಆಡಳಿತ ನನ್ನ ಮೇಲೆ ಕೇಸ್ ಹಾಕಲಿ. ಇಂತ ನೂರಾರು ಪ್ರಕರಣ ಎದುರಿಸಿದ್ದೇನೆ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ತಾಕತ್ತಿದ್ದರೆ ಎಸ್ಪಿನೇ ಬಂದು ಕೇಸ್ ಹಾಕಲಿ ನೋಡಿಕೊಳ್ಳುತ್ತೇನೆ. ನನ್ನನ್ನು ಹೆದರಿಸ್ತೀರಾ. ಇದಕ್ಕೆ ಜಗ್ಗುವುದಿಲ್ಲ” ಎಂದು ರೇಣುಕಾಚಾರ್ಯ ಹೇಳೀದ್ದಾರೆ.
ಇದನ್ನೂ ಓದಿ: ಶರತ್ ಬಚ್ಚೇಗೌಡರ ಕುಟುಂಬ 229 ಎಕರೆ ಭೂಮಿ ಕಬಳಿಸಿದೆ: ಸಚಿವ ಎಂಟಿಬಿ ನಾಗರಾಜ್ ಆರೋಪ