ಬ್ರಸಲ್ಸ್, ಆಸ್ಟ್ರಿಯ, ಕೇರಳ, ಇಂಡಿಯ – ಎಲ್ಲೆಲ್ಲೂ ‘ಕಾಂಟಾಕ್ಟ್ ಟ್ರ್ಯಾಕರ್’ ಆಪ್ ಗಳ ಬಗ್ಗೆ ಸಂಶಯ

ವಿಶ್ವದಾದ್ಯಂತ ಹಲವು ರಾಷ್ಟ್ರಗಳು, ಹಲವು ರಾಜ್ಯಗಳು ಕೋವಿಡ್-19 ಸೋಂಕಿತ ಮತ್ತು ಶಂಕಿತ ವ್ಯಕ್ತಿಗಳ ಸಂಪರ್ಕವನ್ನು ಪತ್ತೆ ಹಚ್ಚಿ ಜನರನ್ನು ಎಚ್ಚರಿಸುವ ಟ್ರ್ಯಾಕರ್ ಮೊಬೈಲ್ ಆಪ್ ಗಳನ್ನು ಸಿದ್ಧಪಡಿಸಿ ಬಳಕೆಗೆ ಬಿಟ್ಟಿವೆ. ಕೆಲವು ಖಾಸಗಿ ಸಂಸ್ಥೆಗಳು ಕೂಡ ಈ ಕೆಲಸಕ್ಕೆ ಮುಂದಾಗಿವೆ. ಕೆಲವು ದೇಶಗಳು ಇಂತಹ ಆಪ್ ಅನ್ನು ಮೊಬೈಲ್ ನಲ್ಲಿ ಅಳವಡಿಸಿಕೊಳ್ಳಲು ನಾಗರಿಕರಿಗೆ ಆಯ್ಕೆಯ ಮುಕ್ತ ಅವಕಾಶ ನೀಡಿ, ಅದರ ಬಗ್ಗೆ ಪ್ರಚಾರ ಮಾಡಲು ನಿಂತಿದ್ದರೆ, ಚೈನಾದಂತಹ ಕೆಲವು ದೇಶಗಳು ಪರೋಕ್ಷವಾಗಿ ಅದನ್ನು ಕಡ್ಡಾಯಗೊಳಿಸಿವೆ. ಆದರೆ ಈ ಎಲ್ಲ ಕಡೆಗಳಲ್ಲೂ ನಾಗರಿಕರ ಖಾಸಗಿತನ, ಅದರ ದುರ್ಬಳಿಕೆ, ಮುಂದೆಂದೋ ಈ ಮಾಹಿತಿ ಸಂಗ್ರಹ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸುವುದಕ್ಕೆ ತಿರುಗಿಕೊಳ್ಳುವ ಆತಂಕವೂ ಹೆಚ್ಚಿನ ನಾಗರಿಕರಲ್ಲಿ ಮನೆಮಾಡುತ್ತಿದೆ.

ಈ ಟ್ರ್ಯಾಕರ್ ಆಪ್ ಗಳ ಕೆಲಸ ಏನು?

ಈ ವಿವಿಧ ಕೋವಿಡ್-19 ಕಾಂಟಾಕ್ಟ್ ಟ್ರ್ಯಾಕರ್ ಆಪ್ ಗಳು ಹಲವು ಕೆಲಸಗಳನ್ನು ಮಾಡಬಲ್ಲವಾಗಿವೆ. ಕೊರೊನ ಸೋಂಕು ತಗುಲಿದ ಅಥವಾ ಶಂಕಿತ ವ್ಯಕ್ತಿಯ ಮಾಹಿತಿಯನ್ನು ಕಲೆ ಹಾಕುವುದು, ಜಿ ಪಿ ಎಸ್ ಮೂಲಕ ಆ ವ್ಯಕ್ತಿಯ ಚಲನ ವಲನಗಳನ್ನು ವೀಕ್ಷಿಸಿ ಪತ್ತೆಹಚ್ಚುವುದು, (ಇದು ಆ ವ್ಯಕ್ತಿಯ ಸಂಪರ್ಕಗಳನ್ನು ಗೊತ್ತು ಮಾಡಿಕೊಳ್ಳುವುದಕ್ಕೆ ಸಹಕರಿಸುತ್ತದೆ), ಕೊರೊನ ಸೋಂಕಿತ/ಶಂಕಿತ ವ್ಯಕ್ತಿ ಬಳಿ ಬಂದಾಗ ಜಿಪಿಎಸ್ ಅಥವಾ ಬ್ಲೂಟೂತ್ ತಂತ್ರಜ್ಞಾನದ ಮೂಲಕ ಅಂತಹ ವ್ಯಕ್ತಿಯ ಬಳಿಯಿದ್ದವರು ಅದೇ ಆಪ್ ಹೊಂದಿದ್ದಲ್ಲಿ ಅದರ ಮೂಲಕ ಎಚ್ಚರಿಕೆ ಸಂದೇಶ ಕಳುಹಿಸುವುದು ಹೀಗೆ ಕೊರೊನ ಸಾಂಕ್ರಾಮಿಕವನ್ನು ತಹಬದಿಗೆ ತರಲು ಸಹಕರಿಸಬಲ್ಲದು. ಅಷ್ಟು ಗಂಭೀರವಲ್ಲದ ಕೊರೊನ ಶಂಕಿತ ವ್ಯಕ್ತಿಗಳ ಚಲನವಲನಗಳನ್ನು ನಿರ್ಬಂಧಿಸಲು ಇದು ಸಹಕರಿಸುತ್ತದೆ.

ಅನುಮಾನ – ಆಕ್ಷೇಪಗಳು ಏನು?

ಇಂತಹ ಟ್ರ್ಯಾಕರ್ ಆಪ್ ಗಳ ಬಗ್ಗೆ ಹತ್ತು ಹಲವು ಸಂಶಯಗಳು ಮತ್ತು ಆಕ್ಷೇಪಗಳು ಸಾಮಾನ್ಯ ಜನರಲ್ಲಿ ಮನೆಮಾಡಿವೆ.

  1. ಇಂತಹ ಆಪ್ ಗಳು ಸಂಗ್ರಹಿಸುವ ಮಾಹಿತಿಯನ್ನು ಆರೋಗ್ಯ ಬಿಕ್ಕಟ್ಟಿನಲ್ಲಿ ಮಾತ್ರ ಬಳಸಿ ಆನಂತರ ಅದನ್ನು ಡಿಲೀಟ್ ಮಾಡುವುದನ್ನು ಮಾನಿಟರ್ ಮಾಡುವುದು ಹೇಗೆ?
  2. ಈ ಆಪ್ ಗಳನ್ನು ಅಬಿವೃದ್ಧಿಪಡಿಸಲು/ ಮಾಹಿತಿ ಸಂಗ್ರಹಿಸಲು ಖಾಸಗಿ ಸಂಸ್ಥೆಗಳ ಸಹಯೋಗ ಇದ್ದಾಗ, ಇಂತಹ ಸೂಕ್ಷ್ಮ ಮಾಹಿತಿಗಳು ಅಂತಹ ಸಂಸ್ಥೆಗೆ ಸೋರಿಕೆ ಆಗಿ ಅದು ದುರುಪಯೋಗ ಆಗದ ಹಾಗೆ ನೋಡಿಕೊಳ್ಳುವುದು ಹೇಗೆ?
  3. ಜಿ ಪಿ ಎಸ್ ತಂತ್ರಜ್ಞಾನ ಬಳಸಿದಾಗ ವ್ಯಕ್ತಿಗಳ ಚಲನವಲನಗಳ ಮಾಹಿತಿಯನ್ನು ಸರ್ಕಾರಿ ಆಗಲೀ ಅಥವಾ ಖಾಸಗಿ ಸಂಸ್ಥೆಗಳಾಗಲಿ ಬೇರೆ ಯಾವುದೇ ಕಾರಣಕ್ಕೆ ಆ ವ್ಯಕ್ತಿಗಳ ಒಪ್ಪಿಗೆ ಇಲ್ಲದೆ ಬಳಸಿಕೊಳ್ಳದಂತೆ ತಡೆಯುವುದು ಹೇಗೆ?
  4. ಭಾರತದಲ್ಲಿ ಹಲವು ಪ್ರದೇಶಗಳು ಕೋಮು ಸೂಕ್ಷ್ಮತೆ ಅಥವಾ ಘರ್ಷಣೆಗಳಿಗೆ ಪೀಡಿತವಾಗಿದ್ದು, ಅಂತಹ ಪ್ರದೇಶಗಳಲ್ಲಿ ಇಂತಹ ಎಚ್ಚರಿಕೆ ನೀಡುವ ಸಂದೇಶಗಳು, ರೋಗ ಇರುವ ಸಂತ್ರಸ್ತನಿಗೆ ಅಥವಾ ಶಂಕಿತನಿಗೆ ಇನ್ನಷ್ಟು ಹಾನಿ ಮಾಡುವ ಸಂದರ್ಭ ಒದಗುವುದಿಲ್ಲವೇ?
  5. ಈಗ ಸಾಮಾನ್ಯವಾಗಿ ಕೋವಿಡ್-19 ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ ಇದೆ. ರೋಗ ಸಂಪೂರ್ಣ ಗುಣಮುಖ ಆದ ನಂತರವಷ್ಟೇ ಸಾರ್ವಜನಿಕವಾಗಿ ಓಡಾಡುವ ಅವಕಾಶ ಇರುತ್ತದೆ. ಇಂತಹ ಸಮಯದಲ್ಲಿ ಈ ಆಪ್ ನ ಉಪಯುಕ್ತತೆ ಏನು? ಕೋವಿಡ್-19 ಶಂಕಿತನ ಕ್ವಾರಂಟೈನ್ ಸಮಯ ಮುಗಿದ ನಂತರ ಆತನ ಮೊಬೈಲ್ ನಿಂದ ಎಚ್ಚರಿಕೆ ಸಂದೇಶ ಹೋಗದಂತೆ ತಡೆಯುವುದು ಪರಿಣಾಮಕಾರಿಯಾಗಿ ಮತ್ತು ತಪ್ಪಿಲ್ಲದೆ ಆಗುವುದೇ?
  6. ಎಷ್ಟೋ ಕೋಟಿ ಜನರ ಬಳಿ ಸ್ಮಾರ್ಟ್ ಫೋನ್ ಗಳು ಅಲಭ್ಯ ಇರುವಾಗ, ಒಂದು ಪಕ್ಷ ಕೊರೊನ ವ್ಯಾಪಕವಾದರೆ ಇಂತಹ ಆಪ್ ಗಳು ನಿಜವಾಗಿಯೂ ಉಪಯೋಗಕ್ಕೆ ಬರುತ್ತವೆಯೇ?

ಇಂತಹ ಹತ್ತು ಹಲವಾರು ಸಂಶಯ ಮತ್ತು ಆತಂಕಗಳ ನಡುವೆಯೇ ಭಾರತ ಸರ್ಕಾರ ಆರೋಗ್ಯ ಸೇತು ಆಪ್ ಅನ್ನು ಡೌನ್ಲೋಡ್ ಮಾಡಿ ಹಾಕಿಕೊಳ್ಳುವಂತೆ ಪ್ರಚಾರ ಮಾಡುತ್ತಿದೆ ಹಾಗೆಯೇ ಕೇರಳ ಒಂದು ಖಾಸಗಿ ಸಂಸ್ಥೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅವರ ಸಾಫ್ಟ್ ವೇರ್ ಮೂಕ ಕೊರೊನ ಸೋಂಕಿತ ವ್ಯಕ್ತಿಗಳ ಮಾಹಿತಿಯನ್ನು ನಿಭಾಯಿಸಿ ಕೊರೊನ ಸೋಂಕು ವ್ಯಾಪಕವಾಗಿ ಹರಡುವುದನ್ನು ಯಶಸ್ವಿಯಾಗಿ ತಡೆಯಲು ರಾಜ್ಯಕ್ಕೆ ಸಾಧ್ಯವಾಗಿದೆ ಎಂಬ ವರದಿಗಳು ಬರುತ್ತಿವೆ.

ಕೇರಳ ಮತ್ತು ಸ್ಪ್ರಿಂಕ್ಲರ್ ಸಂಸ್ಥೆ – ವಿವಾದಗಳು 

ಅಮೆರಿಕಾದ ಖಾಸಗಿ ಸಂಸ್ಥೆ ಸ್ಪ್ರಿಂಕ್ಲರ್ ಜೊತೆಗೆ ಒಪ್ಪಂದ ಮಾಡಿಕೊಂಡು ಕೋವಿಡ್-19 ಮಾಹಿತಿಯನ್ನು ಸಂಸ್ಕರಣ ಮಾಡುತ್ತಿರುವ ಕೇರಳ ಸರ್ಕಾರದ ನಡೆ ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಕೇರಳ ಸರ್ಕಾರ ಆ ಸಂಸ್ಥೆಯ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಆರೋಗ್ಯ ಬಿಕ್ಕಟ್ಟಿನಲ್ಲಿ ಸಂಗ್ರಹಿಸಿರುವ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಯಾವುದೇ ಷರತ್ತು ಇಲ್ಲ. ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿರುವ ಕೇರಳ ಹೈಕೋರ್ಟ್, ಯಾವುದೇ ವ್ಯಕ್ತಿಯ ವೈದ್ಯಕೀಯ ಮಾಹಿತಿ ಸೂಕ್ಷ್ಮ ಖಾಸಗಿ ಮಾಹಿತಿಯಾಗಿದ್ದು ಅದರ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸುವಂತೆ ಕೇರಳ ಸರ್ಕಾರಕ್ಕೆ ಕೇಳಿದೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಇಬ್ಬರು ಸದಸ್ಯರ ಸಮಿತಿಯೊಂದನ್ನು ರಚಿಸಿ ಕೇರಳ ಸರ್ಕಾರ ಮತ್ತು ಸ್ಪ್ರಿಂಕ್ಲರ್ ಸಂಸ್ಥೆಯ ಜೊತೆಗೆ ಆಗಿರುವ ಒಪ್ಪಂದಗಳ ಷರತ್ತಿನಲ್ಲಿ ಖಾಸಗಿ ಮಾಹಿತಿಯನ್ನು ರಕ್ಷಿಸುವ ಅಂಶಗಳು ಇವೆಯೇ ಎಂಬುದರ ಬಗ್ಗೆ ಮತ್ತು ಇತರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಒಂದು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಿದೆ.

ಸರ್ಕಾರಗಳ ಉದ್ದೇಶ ಒಳ್ಳೆಯದಾದರೂ ಕೊನೆಗೆ ಖಾಸಗಿ ಸಂಸ್ಥೆಗಳು ಲಾಭದ ಉದ್ದೇಶಗಳಿಗೆ ಇಂತಹ ಮಾಹಿತಿಯನ್ನು ದುರುಪಯೋಗ ಮಾಡಿಕೊಳ್ಳದಂತೆ ತಡೆಯುವುದು ಕೂಡ ಆದ್ಯತೆಯಾಗಬೇಕಾಗಿದೆ. ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳ ಸರ್ವರ್ ಗಳಲ್ಲಿ ಮಾಹಿತಿ ಶೇಖರ ಆಗದಂತೆ ನೋಡಿಕೊಳ್ಳುವುದು, ಶೇಖರಿಸುವ ಅಗತ್ಯ ಬಿದ್ದರೆ ಸರ್ಕಾರಿ ಸ್ವಾಮ್ಯದ ಸರ್ವರ್ ಗಳಲ್ಲಿಯೇ ಎಲ್ಲ ಡಾಟಾ ಶೇಕರಿಸುವ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕಿದೆ.

ಖಾಸಗಿತನದ ಬಗ್ಗೆ ಸುಪ್ರೀಂ ಕೋರ್ಟ್ ಹೇಳುವುದೇನು?

ಆಗಸ್ಟ್ 2017 ರಂದು ಯಾವುದೇ ನಾಗರಿಕ ಖಾಸಗಿತನ ಮೂಲಭೂತ ಹಕ್ಕು ಎಂದು ಒಂಭತ್ತು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಒಮ್ಮತ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವಂತಹ ಯಾವುದೇ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳುವಹಾಗಿಲ್ಲ ಮತ್ತು ಸರ್ಕಾರಗಳು ತೆಗೆದುಕೊಂಡ ಕ್ರಮಗಳಿಂದ ಮುಂದೆ ಅಂತಹ ಖಾಸಗಿ ಮಾಹಿತಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಕೇಂದ್ರ ಸರ್ಕಾರದ ಆರೋಗ್ಯ ಸೇತು – ಅದರ ಯಶಸ್ಸು ಮತ್ತು ಸಮಸ್ಯೆಗಳು

ಭಾರತದ ಪ್ರಧಾನಾಮಂತ್ರಿ ನರೇಂದ್ರ ಮೋದಿಯವರು ತಾವೇ ಖುದ್ದಾಗಿ ಪ್ರಚಾರ ಮಾಡುತ್ತಿರುವ ಕೊರೊನ ಸೋಂಕು ತಡೆಗಟ್ಟಲು ಅಭಿವೃದ್ಧಿಪಡಿಸಲಾಗಿರುವ ಆರೋಗ್ಯ ಸೇತು ಆಪ್ ಡೌನ್ ಲೋಡ್ ವಿಷಯದಲ್ಲಿ ಭಾರಿ ಯಶಸ್ಸು ಪಡೆದಿದೆ ಎನ್ನಬಹುದು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು 5 ಕೋಟಿ ಜನ ಇದನ್ನು ತಮ್ಮ ಮೊಬೈಲ್ ಗಳಲ್ಲಿ ಇಳಿಸಿಕೊಂಡು ಅಳವಡಿಸಿಕೊಂಡಿದ್ದಾರೆ. ಈ ಆಪ್ ಬಳಸಿ ತೆಲಂಗಾಣದಲ್ಲಿ ಕೋವಿಡ್ ಶಂಕಿತರು ಓಡಾಡುತ್ತಿರುವುದನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದಿರುವುದು ಕೂಡ ವರದಿಯಾಗಿದೆ.

ಲಾಕ್ ಡೌನ್ ಅನಿರ್ಧಿಷ್ಟವಾಗಿ ಮುಂದುವರೆಸಿದರೆ ಎಷ್ಟೋ ವಲಯದ ಜನಗಳಿಗೆ ಆಗಿರುವ ದಿನನಿತ್ಯದ ಬದುಕಿನ ಸಮಸ್ಯೆಗಳನ್ನು ಉಲ್ಬಣವಾಗುವ ಸಾಧ್ಯತೆ ಇದೆ. ಆದುದರಿಂದ ಶೀಘ್ರದಲ್ಲಿ ಲಾಕ್ ಡೌನ್ ತೆರವುಗೊಳಿಸಿದಾಗ ಆರೋಗ್ಯ ಸೇತು ಹೆಚ್ಚು ಉಪಯೋಗಕ್ಕೆ ಬರಲಾಗುತ್ತದೆ ಎಂಬ ವಾದವಿದೆ. ಆದರೆ ಇದನ್ನು ಡೌನ್ ಲೋಡ್ ಮಾಡಿ ಹಾಕಿಕೊಳ್ಳುವಾಗ ಬಳಕೆದಾರರು ಒಪ್ಪಿಕೊಳ್ಳುವ ನಿಯಮಗಳು ಖಾಸಗಿತನದ ವಿಚಾರದಲ್ಲಿ ಅಷ್ಟು ಕರಾರುವಕ್ಕಾಗಿ ಇಲ್ಲ. ಈ ನಿಯಮಗಳನ್ನು ಬಳಕೆದಾರರ ಗಮನಕ್ಕೆ ತರದೆ ಕೇಂದ್ರ ಸರ್ಕಾರ ಬದಲಿಸಿಕೊಳ್ಳುವ ಅಧಿಕಾರವನ್ನು ಇಟ್ಟುಕೊಂಡು ಬಳಕೆದಾರರ ಒಪ್ಪಿಗೆ ಪಡೆಯುತ್ತಿದೆ.

ಇಂಟರ್ ನೆಟ್ ಫ್ರೀಡಂ ಫೌಂಡೇಶನ್ ಎಂಬ ಸಂಸ್ಥೆಗೆ ಸೇರಿದ ಸಿದ್ದಾರ್ಥ್ ದೇಬ್ ಅವರು ಆರೋಗ್ಯ ಸೇತು ಆಪ್ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ, ಈ ಆಪ್ ಖಾಸಗಿತನವನ್ನು ರಕ್ಷಿಸುವುದನ್ನು ತನ್ನ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡಿಲ್ಲ ಎಂದಿದ್ದಾರೆ. ಸಿಂಗಾಪುರ್ ಸರ್ಕಾರ ಮಾಡಿರುವ ನಿಯಮದಂತೆ, ಸಂಗ್ರಹಿಸಿದ ಮಾಹಿತಿಯನ್ನು ಆರೋಗ್ಯ ಸಚಿವಾಲಯ ಹೊರತುಪಡಿಸಿ ಬೇರೆ ಯಾರೂ ಬಳಸಿಕೊಳ್ಳುವಂತಿಲ್ಲ ಎಂಬಂತಹ ಯಾವುದೇ ನಿಯಮ ಆರೋಗ್ಯ ಸೇತುವಿನ ಪ್ರಕಟಣೆಯಲ್ಲಿ ಇಲ್ಲ.

ಸಂಗ್ರಹಿಸಿದ ಮಾಹಿತಿಯನ್ನು ಕೇಂದ್ರೀಕರಿಸಿದ ಸರ್ವರ್ ಒಂದರಲ್ಲಿ ಸಂಗ್ರಹಿಸಲಾಗುತ್ತದೆ. ಯಾವುದೇ ಬಳಕೆದಾರನ ಕ್ಷಣ-ಕ್ಷಣದ ಚಲನವಲನದ ಮಾಹಿತಿಯನ್ನು 30 ದಿನಗಳ ಒಳಗೆ ಡಿಲೀಟ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಆದರೆ ಎನ್ಕ್ರಿಪ್ಟ್ ಮಾಡಲಾದ ಮಾಹಿತಿಯನ್ನು ಅದಕ್ಕೂ ಹೆಚ್ಚಿನ ಕಾಲ ಉಳಿಸಿಕೊಳ್ಳಬಹುದಾಗಿದೆ. ಅದು ಮುಂದೆ ಹೇಗೆ ಡಿಲೀಟ್ ಆಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ವಿವರಗಳು ಸರ್ಕಾರ ನೀಡಬೇಕಾಗಿದೆ.

ಈ ಆಪ್ ಅನ್ನು ಸದ್ಯಕ್ಕೆ ಸ್ವಯಂಪ್ರೇರಣೆಯಿಂದ ಮೊಬೈಲ್ ಗೆ ಹಾಕಿಕೊಳ್ಳುವ ಸೌಲಭ್ಯ ನೀಡಿದ್ದರೂ, ಮುಂದಿನ ದಿನಗಳಲ್ಲಿ ಚೈನಾದಲ್ಲಿ ಮಾಡಿದಂತೆ, ಮುಕ್ತವಾಗಿ ಓಡಾಡುವ ಸೌಲಭ್ಯಕ್ಕಾಗಿ ಈ ಆಪ್ ಬಳಕೆಯನ್ನು ಕಡ್ಡಾಯ ಮಾಡುವ ಸಂದರ್ಭ ಬಂದರೆ? ಈ ಆಪ್ ಸೂಚಿಸಿದರೆ ಮಾತ್ರ ಚೆಕ್ ಪೋಸ್ಟ್ ಗಳಿಂದ ಮುಂದಕ್ಕೆ ಹೋಗಲು ಪೊಲೀಸರು ಅವಕಾಶ ನೀಡಬೇಕು ಎಂಬ ನಿಯಮ ಬಂದರೆ? ಆಗ ಇದು ಖಾಸಗಿತನದ ಮೂಲಭೂತ ಹಕ್ಕುನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ? ನಾಗರಿಕನ ಮುಕ್ತ ಚಲನವಲನ ಮತ್ತು ಖಾಸಗಿತನದ ಹಕ್ಕುಗಳನ್ನು ನಿರ್ಬಂಧಿಸಿದಂತೆ ಯಾವ ಕ್ರಮಗಳನ್ನೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಇಲ್ಲಿಯವರೆಗೂ ಸ್ಪಷ್ಟಪಡಿಸಿಲ್ಲ.

ಸದ್ಯಕ್ಕೆ ಸಾಂಕ್ರಾಮಿಕ ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಈ ಆಪ್ ಬಳಕೆ ಬಹಳ ಉಪಯುಕ್ತವಾದರೂ, ಖಾಸಗಿ ಮಾಹಿತಿಯ ವಿಚಾರ ಮತ್ತು ಅದನ್ನು ಉಳಿದ ಯಾವುದೇ ಕಾರಣಕ್ಕೆ ಬಳಸಿಕೊಳ್ಳದ ನಿಯಮಗಳ ಬಗ್ಗೆ ಸರ್ಕಾರ ಹೆಚ್ಚು ಪಾರದರ್ಶಕತೆಯನ್ನು ತೋರಿಸಬೇಕಿದೆ.

ಯೂರೋಪ್ ದೇಶಗಳು ಮತ್ತು ಇತರ ಖಾಸಗಿ ಸಂಸ್ಥೆಗಳ ಆಪ್ ಗಳು

ಸಾಮಾನ್ಯವಾಗಿ ಖಾಸಗಿ ಮಾಹಿತಿ ಬಗ್ಗೆ ಜನ ಬಹಳ ಎಚ್ಚರಿಕೆಯಿಂದ ಇರುವ ಯೂರೋಪಿಯನ್ ರಾಷ್ಟ್ರಗಳಲ್ಲಿ ಇಂತಹ ಆಪ್ ಗಳನ್ನು ಜನರ ಮೊಬೈಲ್ ಫೋನ್ ಗಳಲ್ಲಿ ಇನ್ಸ್ಟಾಲ್ ಮಾಡುವಂತೆ ನೋಡಿಕೊಳ್ಳುವುದು ಅಲ್ಲಿನ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅದುದರಿಂದಲೇ ಅಲ್ಲಿನ ಎಷ್ಟೋ ರಾಷ್ಟ್ರಗಳು ಆಪ್ ಅಭಿವೃದ್ಧಿಪಡಿಸುವಲ್ಲಿ ಪಾರದರ್ಶಕತೆ ತೋರಿಸಿವೆ. ಜರ್ಮನಿ, ಫ್ರಾನ್ಸ್ ನಂತಹ ದೇಶಗಳಲ್ಲಿ ಬ್ಲೂಟೂತ್ ನಿಂದ ಎಚ್ಚರಿಸುವ ಮತ್ತು ಜಿಪಿಎಸ್ ಮಾಹಿತಿಯನ್ನು ಸರ್ಕಾರವಾಗಲಿ, ಟೆಲಿಕಾಂ ಸಂಸ್ಥೆಯಾಗಲೀ ಶೇಖರಿಸದೆ ಇರುವಂತೆ ನಿಯಮಗಳನ್ನು ಮಾಡಿಕೊಂಡಿವೆ.

ಎರಡನೆ ವಿಶ್ವಯುದ್ಧಕ್ಕೂ ಮುಂಚಿತವಾಗಿ ನಾಜಿ ಸರ್ವಾಧಿಕಾರದ ಸ್ಮೃತಿ ಉಳಿಸಿಕೊಂಡಿರುವ ಜರ್ಮನಿ, ಆಷ್ಟ್ರಿಯದಂತಹ ದೇಶಗಳಲ್ಲಂತೂ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಅಲ್ಲಿನ ಜನರು ಇಂತಹ ಆಪ್ ಗಳನ್ನು ಬಹಳ ಅನುಮಾನದಿಂದ ಕಾಣುತ್ತಿರುವುದು ವರದಿಯಾಗಿದೆ. ಈ ದೇಶಗಳಲ್ಲೆಲ್ಲಾ ಆಪ್ ಹಾಕಿಕೊಳ್ಳುವುದನ್ನು ಜನರ ಆಯ್ಕೆಗೆ ಬಿಟ್ಟಿದ್ದು, ಆಪ್ ಕಡ್ಡಾಯವಾಗಿರುವ ಯಾವುದೇ ಸೇವೆಗಳನ್ನು ಸರ್ಕಾರಗಳು ಘೋಷಿಸಿಲ್ಲ. ಯುರೋಪಿಯನ್ ರಾಷ್ಟ್ರವಾದ ಪೋಲೆಂಡ್ ನಲ್ಲಿ ಮಾತ್ರ ಇಂತಹ ಟ್ರಾಕಿಂಗ್ ಆಪ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಮಾಡಲಾಗಿದ್ದು ಜನರಿಗೆ ಸೆಲ್ಫಿಗಳನ್ನು ಕೂಡ ಅಂತಹ ಆಪ್ ಗಳಿಗೆ ಅಪ್ಲೋಡ್ ಮಾಡುವಂತೆ ತಿಳಿಸಲಾಗಿದೆ. ಇಂತಹ ಸಮಯದಲ್ಲಿ ಮುಖ ಚಹರೆಯನ್ನು ಕೂಡ ಸಂಸ್ಕರಿಸಿ ಕಣ್ಗಾವಲು ಇಡುವ ಆತಂಕಗಳನ್ನು ಜನರು ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ಗೂಗಲ್ ಮತ್ತು ಆಪಲ್ ಸಂಸ್ಥೆಗಳು ಕೂಡ ಇಂತಹ ಕೋವಿಡ್-19  ಕಾಂಟಾಕ್ಟ್ ಟ್ರ್ಯಾಕರ್ ಆಪ್ ಅಭಿವೃದ್ಧಿಪಡಿಸಲು ಹೊಂದಾಣಿಕೆ ಮಾಡಿಕೊಂಡಿದ್ದು, ಬ್ಲೂಟೂತ್  ತಂತ್ರಜ್ಞಾನದ ಟ್ರ್ಯಾಕರ್ ಆಪ್ ಒಂದನ್ನು ಸಿದ್ಧಪಡಿಸುತ್ತಿವೆ. ಐ ಓ ಸ್ ಮತ್ತು ಆಂಡ್ರಾಯ್ದ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಾಗುವ ಈ ಆಪ್ ಗೆ, ವಿವಿಧ ರಾಷ್ಟ್ರಗಳ ನಾಗರಿಕರ ಆರೋಗ್ಯ ಮಾಹಿತಿಯನ್ನು ಯಾರು ಒದಗಿಸುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಅಲ್ಲದೆ ಈ ಹಿಂದೆ ಫೇಸ್ಬುಕ್ ಮತ್ತು ಕೇಂಬ್ರಿಜ್ ಅನಲಿಟಿಕ ಸಂಸ್ಥೆ ನಾಗರಿಕರ ಮಾಹಿತಿಯನ್ನು ಅವರಿಗೆ ಗೊತ್ತಿಲ್ಲದಂತೆ ಉಳಿಸಿಕೊಂಡ ಪ್ರಕರಣ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಇಂತಹ ಉಲ್ಲಂಘನೆಗಳು ಆಗದಂತೆ ಗೂಗಲ್ ಮತ್ತು ಆಪಲ್ ಯಾವ ಕ್ರಮ ತೆಗೆದುಕೊಳ್ಳಲಿವೆ?

ಒಟ್ಟಿನಲ್ಲಿ ನಾಗರಿಕರು ತಮ್ಮ ಖಾಸಗಿ ಮಾಹಿತಿಗಳನ್ನು ರಕ್ಷಿಸಿಕೊಳ್ಳಲು ಹೆಚ್ಚು ಜಾಗ್ರತರಾಗಿರುವ ಸಮಯದಲ್ಲಿ ವಿವಿಧ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಹೆಚ್ಚಿನ ಪಾರದರ್ಶಕತೆಯನ್ನು ಪ್ರದರ್ಶಿಸುವ ಅಗತ್ಯ ಬಂದೊದಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights