ಭಾರತದಲ್ಲಿನ ವಲಸೆ ಬಿಕ್ಕಟ್ಟಿಗೆ ಮೋದಿ ಸರ್ಕಾರ ಕಾರಣ: 06 ಅಂಶಗಳಿಂದ ಸಾಬೀತು

ಭಾರತದ ಅತ್ಯಂತ ಕೆಟ್ಟ ವಲಸೆ ಬಿಕ್ಕಟ್ಟಿಗೆ ಮೋದಿ ಸರ್ಕಾರವು ಕಾರಣವಾಗಲು ಆರು ಕಾರಣಗಳು

ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಗಳನ್ನು ನಿರ್ವಹಿಸುವ ದಶಕಗಳ ಅನುಭವವನ್ನು ಭಾರತೀಯ ಸರ್ಕಾರ ಹೊಂದಿದೆ. ಕೊರೊನಾ ಸೋಂಕನ್ನ ಮೋದಿ ಸರ್ಕಾರ ವಿಪತ್ತು ಎಂದು ಪರಿಗಣಿಸಿದೆ.

ಅದಕ್ಕಾಗಿಯೇ, ಒಕ್ಕೂಟ ಸರ್ಕಾರವು ಸಾಮಾನ್ಯವಾಗಿ ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುವ ಪ್ರದೇಶಗಳಲ್ಲಿಯೂ ಸಹ ವ್ಯಾಪಕ ಆದೇಶಗಳನ್ನು ನೀಡಲು ‘ವಿಪ್ಪತ್ತು ನಿರ್ವಹಣಾ ಕಾಯ್ದೆ’ಯ ಅಡಿಯಲಿ ಅಧಿಕಾರ ಬಳಸುತ್ತಿದೆ. ಆದರೆ, ಸಾಮಾನ್ಯ ಸಮಯದಲ್ಲಿಯೂ ಕೇಂದ್ರದ ವ್ಯಾಪ್ತಿಗೆ ಬರುವ ಹಲವಾರು ವಲಯಗಳ ಜವಾಬ್ದಾರಿಯನ್ನು ಮೋದಿ ಸರ್ಕಾರ ಕೈಬಿಟ್ಟಿದೆ (ಮರೆತಂತಿದೆ).

ಕೊರೊನಾ ಬಿಕ್ಕಿಟ್ಟಿನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸಾಗಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಇದು ಸದ್ಯಕ್ಕೆ ಅಮಾನವೀಯ ಬಿಕ್ಕಟ್ಟಿನಂತೆ ಗೋಚರಿಸುತ್ತಿದೆ: ಲಕ್ಷಾಂತರ ಕಾರ್ಮಿಕ ವರ್ಗದ ಬಡ ಭಾರತೀಯರು ತಮ್ಮೂರುಗಳಿಗೆ ನಡೆದುಕೊಂಡು, ಸೈಕ್ಲಿಂಗ್ ಮೂಲಕ ಸಾವಿರಾರು ಕಿ.ಮೀ ಪ್ರಯಾಣ ಬೆಳಿಸಿದ್ದಾರೆ. ಹಸಿವು, ಬಳಲಿಕೆ, ಬಿಸಿಲಿಗೆ ಬೇಗೆಯಿಂದ ಕಾರ್ಮಿಕರು ಆರೋಗ್ಯದ ಅಪಾಯಗಳನ್ನು ಎದುರಿಸುತ್ತಿದ್ದಾರೆ. 170ಕ್ಕೂ ಹೆಚ್ಚು ಕಾರ್ಮಿಕರು ರಸ್ತೆ ಅಪಘಾತದಲ್ಲಿ  ಸಾವನ್ನಪ್ಪಿದ್ದಾರೆ.

ಇತ್ತೀಚಿನ ಅಪಘಾತದಲ್ಲಿ 26 ಕಾರ್ಮಿಕರು ಸಾವನ್ನಪ್ಪಿದ್ದು, ಆ ಘಟನೆಯ ವರದಿ ಮಾಡುವಾಗ ಇಂಡಿಯನ್ ಎಕ್ಸ್‌ಪ್ರೆಸ್‌ನ ಮುಖಪುಟದಲ್ಲಿ “ದುರಂತ ಮತ್ತು ಅವಮಾನ” ಎಂದು ವರದಿ ಬರೆದಿತ್ತು.

1947ರ ರಾಷ್ಟ್ರ ವಿಭಜನೆಯ ಸಂದರ್ಭದಲ್ಲಿ ಎದುರಿಸಿದ ವಲಸೆ ಬಿಕ್ಕಟ್ಟನ್ನು, ಇಂದು ನಾವು ನೋಡುತ್ತಿದ್ದೇವೆ. ಇದನ್ನು ಮೋದಿ ಸರ್ಕಾರ ನಿಭಾಯಿಸುವಲ್ಲಿ ಮೋದಿ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು, ಹೊಣೆಗೇಡಿತನವನ್ನು ಪ್ರದರ್ಶಿಸಿದೆ.

ತನ್ನ ಜವಾಬ್ದಾರಿಯನ್ನು ಮರೆತಿರುವ ಮೋದಿ ಸರ್ಕಾರ, ಈ ಬಿಕ್ಕಟ್ಟಿಗೆ ಹೊಣೆಯಾಗುವ ಆರು ಕಾರಣಗಳು ಇಲ್ಲಿವೆ

 1.  ಕೇವಲ ನಾಲ್ಕು ಗಂಟೆಗಳ ಸಮಯದೊಂದಿಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿತು:

ಜನವರಿ 30 ರಂದು ಭಾರತದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ. ಮಾರ್ಚ್ ವರೆಗೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಲಾಕ್‌ಡೌನ್‌ ಮಾಡಲು ದೇಶವನ್ನು ಸಿದ್ದಗೊಳಿಸಲು ಬಹಳಷ್ಟು ಸಮಯವಿತ್ತು. ಆದರೆ, ಮಾರ್ಚ್‌ 13 ರಂದು ಅಧಿಕಾರಿಗಳು ಕೊರೊನಾ ಸಾಂಕ್ರಮಿಕವು “ತುರ್ತು ಪರಿಸ್ಥಿತಿ” ಅಲ್ಲ ಎಂದು ಹೇಳಿದ್ದರು. ಅದಾದ ಐದು ದಿನಗಳ ನಂತರ ಮಾರ್ಚ್‌ 18 ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿಯವರು ಜನರ ಕರ್ಫ್ಯೂ ಆಚರಿಸುವಂತೆ ಭಾರತೀಯರನ್ನು ಒತ್ತಾಯಿಸಿದರು.

ಈ ಘೋಷಣೆಯಿಂದಾಗಿ ಕಾರ್ಮಿಕರ ಕೆಲಸಗಳು ನಿಲ್ಲುವ ಸೂಚನೆಯಿಂದ ತಮ್ಮ ಊರುಗಳಿಗೆ ಹಿಂತಿರುಗಲು ಧಾವಿಸುತ್ತಿದ್ದಂತೆ, ಭಾರತೀಯ ರೈಲ್ವೆ ಹೆಚ್ಚಿನ ರೈಲುಗಳನ್ನು ರದ್ದುಗೊಳಿಸಿ, ಮಾರ್ಚ್ 21 ರಂದು ಇಡೀ ರೈಲು ಜಾಲವನ್ನೇ ಸ್ಥಗಿತಗೊಳಿಸಿತು. ಮಾರ್ಚ್ 24 ರಂದು ರಾತ್ರಿ 8 ಗಂಟೆಗೆ, ಪ್ರಧಾನಿ ಮೋದಿಯವರು ದೇಶಾದ್ಯಂತ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದರು. ಲಾಕ್‌ಡೌನ್ ಅಂದಿನ ಮಧ್ಯರಾತ್ರಿಯಿಂದಲೇ ಕೇವಲ ನಾಲ್ಕು ಗಂಟೆಗಳ ಸಮಯದೊಂದಿಗೆ ಜಾರಿಗೆ ಬಂದಿದ್ದರಿಂದಾಗಿ ಕಾರ್ಮಿಕರು ಅತಂತ್ರರಾದರು.

2. ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರಿಗೆ ಕನಿಷ್ಟ ಸಹಾಯವನ್ನೂ ಸರ್ಕಾರ ಮಾಡಲಿಲ್ಲ:

ಲಾಕ್‌ಡೌನ್‌ ಆದ ಕೆಲವೇ ದಿನಗಳಲ್ಲಿ, ವಲಸೆ ಕಾರ್ಮಿಕರು ಹಣ ಮತ್ತು ಆಹಾರವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರಿಂದ, ಮೋದಿ ಸರ್ಕಾರವು ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನವನ್ನು ಉದ್ಯೋಗದಾತರಿಂದ ಕೊಡಿಸುವಂತೆ ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಿತು. ಆದರೆ, ಅದಾವುದೂ ಕಾರ್ಯರೂಪಕ್ಕೆ ಬರಲಿಲ್ಲ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ದಾಖಲಾದ ಭಾರತೀಯರಿಗೆ ಆಹಾರ ಪಡಿತರವನ್ನು ದ್ವಿಗುಣಗೊಳಿಸುವುದಾಗಿ ಮಾರ್ಚ್ 26 ರಂದು ಸರ್ಕಾರ ಘೋಷಿಸಿತು. ಆದರೆ ಹೆಚ್ಚಿನ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಇಲ್ಲ ಎಂಬ ಅಂಶವನ್ನು ಅದು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಅಂತಿಮವಾಗಿ, ಲಾಕ್‌ಡೌನ್‌ಗೆ ಐವತ್ತು ದಿನಗಳು, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಭಾಗವಾಗಿಲ್ಲದ 80 ದಶಲಕ್ಷ ಭಾರತೀಯರಿಗೂ ಸರ್ಕಾರ ಆಹಾರ ಬೆಂಬಲವನ್ನು ಘೋಷಿಸಿತು. ಆದಾಗ್ಯೂ, ಆಹಾರ ಧಾನ್ಯಗಳು ಅಂತಹ ಜನರಿಗೆ ತಲುಪಲಿಲ್ಲ.

3.  ರೈಲುಗಳನ್ನು ಪುನರಾರಂಭಿಸಿತು. ಆದರೆ, ಹೊಣೆಗಾರಿಕೆಯನ್ನು ರಾಜ್ಯಗಳಿಗೆ ಕೊಟ್ಟಿತು:

ಏಪ್ರಿಲ್ 29 ರಂದು ಮೋದಿ ಸರ್ಕಾರವು ವಲಸೆ ಕಾರ್ಮಿಕರು ತಮ್ಮೂರುಗಳಿಗೆ ಹೋಗಲು ಅವಕಾಶ ನೀಡುವುದಾಗಿ ಘೋಷಿಸಿತು. ಕಾರ್ಮಿಕರಿಗಾಗಿ ಬಸ್‌ಗಳ ಸಂಚಾರವನ್ನು ಆರಂಭಿಸತು. ಆದರೆ, ಪ್ರಯಾಣದರವನ್ನು ದುಪ್ಪಟ್ಟು ಹೆಚ್ಚಿಸಿತು.

ನಂತರ ಅನ್ಯ ರಾಜ್ಯಗಳಿಗೆ ಶ್ರಮಿಕ್‌ ರೈಲು ವ್ಯವಸ್ಥೆ ಮಾಡಿ, ಅದನ್ನೂ ಉಚಿತವಾಗಿ ನೀಡಲಿಲ್ಲ. ಅಲ್ಲದೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬರುವ ಕಾರ್ಮಿಕರನ್ನು ಒಳಗೆ ಸೇರಿಸಲು ಕೆಲವು ರಾಜ್ಯ ಸರ್ಕಾರಗಳು ಹಿಂದೇಟು ಹಾಕಿದವು. ಕರ್ನಾಟಕ ಸರ್ಕಾರ ಬಿಲ್ಡರ್‌ಗಳ ಲಾಬಿಗೆ ಮಣಿದು ಕಾರ್ಮಿಕರ ರೈಲುಗಳನ್ನೇ ರದ್ದುಗೊಳಿಸಿತು.

ತೆಲಂಗಾಣ, ದೆಹಲಿ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು 13 ಅಧಿಕಾರಿಗಳನ್ನು ನೇಮಿಸಿತು.

ಪ್ರತಿ ರಾಜ್ಯವು ಇತರ ರಾಜ್ಯಗಳನ್ನು ಸಂಪರ್ಕಿಸಬೇಕಾಗಿತ್ತು ಮತ್ತು ಅವರ ನಡುವೆ ಎಷ್ಟು ವಲಸೆ ಕಾರ್ಮಿಕರು ಪ್ರಯಾಣಿಸಬಹುದು ಎಂಬುದನ್ನು ಅಂತಿಮಗೊಳಿಸಬೇಕಿತ್ತು. ಇದರಿಂದಾಗಿ ಪ್ರಕ್ರಿಯೆ ನಿಧಾನವಾಯಿತು. ರೈಲುಗಳಲ್ಲಿ ತಮ್ಮೂರು ತಲುಪಬಹುದು ಎಂಬ ಕಾರ್ಮಿಕರ ಭರವಸೆ ಕುಂದಿಹೋಯಿತು. ಅವರು ನಡೆದೇ ಹೊರಟರು.

ಇದನ್ನು ತಪ್ಪಿಸಬಹುದಿತ್ತು. ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ವಿಕೇಂದ್ರೀಕರಿಸುವ ಉದ್ದೇಶವಿದ್ದರೆ, ಕೇಂದ್ರವು ಅಂತರರಾಜ್ಯ ಮಂಡಳಿಯನ್ನು ರಚಿಸಬಹುದಾಗಿದ್ದು ಅದು ರಾಜ್ಯಗಳ ನಡುವೆ ಉತ್ತಮ ಸಂವಹನಕ್ಕೆ ಅವಕಾಶ ಮಾಡಬಹುದಿತ್ತು. ಆದರೆ, ಸರ್ಕಾರ ಮಾಡಲಿಲ್ಲ.

4. ಸರ್ಕಾರ ಕಾರ್ಮಿಕರನ್ನು ಶಿಕ್ಷಿಸುವ ಪ್ರಕ್ರಿಯೆಯನ್ನು ಸೃಷ್ಟಿಸಿತು:

ಮೋದಿ ಸರ್ಕಾರದ ಏಪ್ರಿಲ್ 29ರ ಆದೇಶವು ವಲಸೆ ಕಾರ್ಮಿಕರನ್ನು ಪರೀಕ್ಷಿಸಿದ ನಂತರ ಮತ್ತು ರೋಗಲಕ್ಷಣವಿಲ್ಲದರನ್ನು ಮಾತ್ರ ಪ್ರಯಾಣಿಸಲು ಅನುಮತಿಸುತ್ತದೆ ಎಂದು ಹೇಳಿದೆ. ಇದರಿಂದಾಗಿ, ಕೆಲವು ರಾಜ್ಯಗಳು ವಲಸೆ ಕಾರ್ಮಿಕರಿಗೆ ರೈಲುಗಳನ್ನು ಹತ್ತುವ ಮೊದಲು ವೈದ್ಯಕೀಯ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಿವೆ, ಅದನ್ನು ಅವರು ಪಡೆದುಕೊಂಡೇ ಪ್ರಯಾಣ ಆರಂಭಿಸಬೇಯಿತು.

ಪ್ರಕ್ರಿಯೆಯು ಶಿಕ್ಷಾರ್ಹವಾಗಿದೆ: ವಲಸೆ ಕಾರ್ಮಿಕನು ಮೊದಲು ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ತಮ್ಮ ಸ್ವಂತ ರಾಜ್ಯಗಳಲ್ಲಿ ನೋಂದಾಯಿಸಿಕೊಳ್ಳಬೇಕು, ಅವರು ಪ್ರಯಾಣಿಸಲು ಯೋಗ್ಯರು ಎಂದು ತೋರಿಸಲು ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು, ನಂತರ ರೈಲ್ವೆ ನಿಲ್ದಾಣವನ್ನು ತಲುಪಲು ಟ್ರಾವೆಲ್ ಪಾಸ್ ಪಡೆಯಲು ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮಾಡಬೇಕು.

ಆದರೆ, ಈ ಪ್ರಕ್ರಿಯೆಗಳ ನಡುವೆ ವೆಬ್‌ಸೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅನೇಕ ಕಾರ್ಮಿಕರಿಗೆ ಈ ಎಲ್ಲಾ ಮಾಹಿತಿಯೇ ಸಿಗುವುದಿಲ್ಲ. ಕಾರ್ಮಿಕರ ಬಳಿ ಸ್ಮಾರ್ಟ್‌ಫೋನ್‌ಗಳೂ ಇಲ್ಲ. ಹಾಗಾಗಿ ಅವರೆಲ್ಲರೂ ನೇರವಾಗಿ ರೈಲ್ವೆ ನಿಲ್ದಾಣಗಳಿಗೆ ಬರುತ್ತಿದ್ದಾರೆ. ಅಲ್ಲಿಯೂ ಅಧಿಕಾರಿಗಳು ಅವರಿಗೆ ಸಹಾಯ ಕೇಂದ್ರವನ್ನು ಸ್ಥಾಪಿಸುವ ಸಣ್ಣಕೆಲಸವನ್ನೂ ಮಾಡಲು ಮುಂದಾಗಿಲ್ಲ.

ತಮ್ಮ ರಾಜ್ಯಗಳಲ್ಲಿ ನೋಂದಾಯಿಸಲು ಸಮರ್ಥರಾದವರೂ ಸಹ ಅವರ ಅರ್ಜಿಗಳನ್ನು ಹುಡುಕಿಕೊಳ್ಳಲು ಯಾವುದೇ ಮಾರ್ಗವಿಲ್ಲ. ಊರುಗಳಿಗೆ ಪ್ರಯಾಣಿಸಲು ರೈಲಿನಲ್ಲಿ ಯಾವಾಗ ಬೆರ್ತ್ (ಸೀಟು ಮತ್ತು ಟಿಕೆಟ್‌) ಸಿಗಬಹುದೆಂದು ತಿಳಿಯಲು ಯಾವುದೇ ಮಾರ್ಗವಿಲ್ಲ.

ಆದರೆ, ವಿಶೇಚ ರೈಲುಗಳಲ್ಲಿ (ರಾಜಧಾನಿ ರೈಲು) ಮಧ್ಯಮ ವರ್ಗದ ಭಾರತೀಯರು ಪ್ರಯಾಣಿಸುತ್ತಿರುವುದು ಅತ್ಯಂತ ಸುಲಭವಾಗಿದೆ. ಅವರು ಮಾಡಬೇಕಾದುದೆಂದರೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವುದು ಮತ್ತು ಅವರು ರೈಲು ನಿಲ್ದಾಣವನ್ನು ಪ್ರವೇಶಿಸುವಾಗ ಉಷ್ಣ (ಟೆಂಪ್ರೇಚರ್‌) ಪರೀಕ್ಷೆಗೆ ಒಳಗಾಗುವುದು.

ಮನೆಗೆ ಹಿಂದಿರುಗುವ ಕಾರ್ಮಿಕ ವರ್ಗದ ಭಾರತೀಯರಿಗಾಗಿ ಮೋದಿ ಸರ್ಕಾರವು ಇದೇ ರೀತಿಯ ಪ್ರಕ್ರಿಯೆಯನ್ನು ಏಕೆ ರಚಿಸಲಿಲ್ಲ? ಎಂಬುದು ಗಮನಾರ್ಹ.

5. ಸರ್ಕಾರ ನಿರ್ಗತಿಕ ಕಾರ್ಮಿಕರಿಂದ ಪ್ರಯಾಣ ದರವನ್ನು ವಸೂಲಿ ಮಾಡಿತು:

ವಲಸೆ ಕಾರ್ಮಿಕರಿಗೆ ರೈಲು ಶುಲ್ಕದ 85% ಪಾವತಿಸುತ್ತಿರುವುದಾಗಿ ಮೋದಿ ಸರ್ಕಾರ ಹೇಳಿಕೊಂಡಿದೆ. ಇದು ನಿಜವಲ್ಲ. ಅನೇಕ ವಲಸೆ ಕಾರ್ಮಿಕರು ವಾರಗಟ್ಟಲೆ ಕೆಲಸವಿಲ್ಲದೆ ನಿರ್ಗತಿಕರಾಗಿದ್ದಾರೆಂದು ತಿಳಿದಿದ್ದರೂ ಸಹ, ಭಾರತೀಯ ರೈಲ್ವೆಯು ಶ್ರಮಿಕ್ ರೈಲುಗಳಲ್ಲಿ ಸಂಪೂರ್ಣ ದರವನ್ನು ಕಾರ್ಮಿಕರಿಂದಲೇ ಪಡೆದುಕೊಂಡಿದೆ.

2011 ರ ಜನಗಣತಿಯ ಪ್ರಕಾರ ಭಾರತದಲ್ಲಿ 5.6 ಕೋಟಿ ಅಂತರರಾಜ್ಯ ವಲಸಿಗರಿದ್ದಾರೆ. ಇದು ಇನ್ನೂ ಹೆಚ್ಚಾಗಿದೆ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರು ಇಂದಿನ ವಲಸಿಗರ ಸಂಖ್ಯೆ 6.5 ಕೋಟಿ ಎಂದು ಅಂದಾಜಿಸಿದ್ದಾರೆ.

ಈ ಎಲ್ಲ ಕಾರ್ಮಿಕರ ರೈಲು ದರಗಳ ಒಟ್ಟು ವೆಚ್ಚ ಸುಮಾರು 4,200 ಕೋಟಿ ರೂ.ಗಳು ಖರ್ಚಾಗಬಹುದು ಎಂದು ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ಸಂಶೋಧಕರು ಲೆಕ್ಕ ಹಾಕಿದ್ದಾರೆ.

ಈ ಮೌಲ್ಯದ ದೃಷ್ಟಿಕೋನದಿಂದ ಹೇಳುವುದಾದರೆ, ಗುಜರಾತ್‌ನಲ್ಲಿನ ಏಕತಾ ಪ್ರತಿಮೆಯ ಬೆಲೆ 3,000 ಕೋಟಿ ರೂ. ಏಪ್ರಿಲ್ ಆರಂಭದ ದಿನಗಳಲ್ಲಿ ಫಿಎಂ ಕೇರ್ಸ್‌ಗೆ ಬಂದ ಹಣದ ಮೊತ್ತ 6,500 ಕೋಟಿ ರೂ.

ಆದರೂ,  ನಿರ್ಗತಿಕ, ಕಾರ್ಮಿಕ ವರ್ಗದ ವಲಸಿಗರಿಗೆ ಪ್ರಯಾಣದ ವೆಚ್ಚವನ್ನು ಸರ್ಕಾರ ಏಕೆ ಭರಿಸಲಿಲ್ಲ?

6. ಸರ್ಕಾರ, ತಮ್ಮರೂಗಳಿಗೆ ನಡೆದುಕೊಂಡು ಹೋಗುತ್ತಿರುವ ವಲಸಿಗರನ್ನು ಕೈಬಿಟ್ಟಿದೆ:

ಶ್ರಮಿಕ್ ರೈಲುಗಳಲ್ಲಿ 15 ಲಕ್ಷ ವಲಸಿಗರನ್ನು ಸಾಗಿಸಿರುವುದಾಗಿ ರೈಲ್ವೆ ಸಚಿವಾಲಯ ಶನಿವಾರ ಪ್ರಕಟಿಸಿದೆ. ಈ ಸಂಖ್ಯೆ ಹೆಚ್ಚೆಂದು ಕಾಣಿಸಿದರೂ, ತಮ್ಮೂರುಗಳನ್ನು ಸೇರಲು ಪ್ರಯಾಣಿಸುತ್ತಿರುವರಲ್ಲಿಇದು ಕೇವಲ ಸಣ್ಣ ಭಾಗವಷ್ಟೇ. ಊರುಗಳಿಗೆ ತೆರಳಲು ಮುಂದಾಗಿರುವ ಕಾರ್ಮಿಕರ ಪ್ರಮಾಣದಲ್ಲಿ ಕಾಲು ಭಾಗವೆಂದರೂ 1.4 ಕೋಟಿಯಷ್ಟಾಗುತ್ತದೆ.

ಹೀಗಿರುವಾಗ 15 ಲಕ್ಷ ಎಂಬುದು ಎಷ್ಟು ಸಣ್ಣ ಸಂಖ್ಯೆ. ಅಂದರೆ, ದೇಶದಲ್ಲಿರುವ 6.5 ಕೋಟಿ ವಲಸೆ ಕಾರ್ಮಿಕರಲ್ಲಿ ಶೇ.50ಕ್ಕೂ ಹೆಚ್ಚು ಕಾರ್ಮಿಕರು ನಡೆದೇ ಹೋಗುತ್ತಿದ್ದಾರೆ. ಅವರನ್ನು ಸರ್ಕಾರ ಗಣನೆಗೇ ತೆಗೆದುಕೊಂಡಿಲ್ಲ.

ಕೆಲವರು ತಮ್ಮ ಮಕ್ಕಳೊಂದಿಗೆ ಬಹಳ ದೂರ ನಡೆದುಕೊಂಡು ಹೋಗುತ್ತಿದ್ದಾರೆ. ಇತರರು ಸೈಕಲ್‌ಗಳನ್ನು ತುಳಿಯುತ್ತಿದ್ದಾರೆ.  ಒಬ್ಬ ಕೆಲಸಗಾರನು ತನ್ನ ಬಳಿ ಹಣವಿಲ್ಲದ ಕಾರಣ ಕದಿಯಲು ಪ್ರಯತ್ನಿಸಿ ನಂತರ ಕ್ಷಮೆಯಾಚಿಸಿದ. ಕಾರಣ ಅವನ ಅಂಗವಿಕಲ ಮಗುವನ್ನು ಮನೆಗೆ ಕರೆದೊಯ್ಯುವ ಅಗತ್ಯವಿತ್ತು. ಕೆಲವರು ಕಂಟೇನರ್ ಟ್ರಕ್‌ಗಳಲ್ಲಿ ಹೋಗಲು ಸಾವಿರಾರು ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ.

ಆರಂಭಿಕ ವಾರಗಳಲ್ಲಿ, ಪೊಲೀಸರು ಕಾರ್ಮಿಕರನ್ನು ನಿಲ್ಲಿಸಿ ಅವರನ್ನು ಆಶ್ರಯಕ್ಕೆ ಸೇರಿಸಿಕೊಳ್ಳುತ್ತಿದ್ದರು, ಅವರನ್ನು ತಮ್ಮ ಹಳ್ಳಿಗಳಿಗೆ ಹೋಗದಂತೆ ತಡೆಯಲು ಬಲವಂತವಾಗಿ ಬಂಧಿಸುತ್ತಿದ್ದರು.

ಇತ್ತೀಚಿನ ವಾರಗಳಲ್ಲಿ, ಲಾಕ್‌ಡೌನ್ ಅನ್ನು ಪದೇ ಪದೇ ವಿಸ್ತರಿಸಲಾಗುತ್ತಿದ್ದಂತೆ, ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಲಸಿಗರನ್ನು ಪೊಲೀಸರು ಕಡೆಗಣಿಸಲು ಪ್ರಾರಂಭಿಸಿದರು. ನಡೆದು ಹೋಗುವವರು ತಮ್ಮ ಪಾಡಿಗೆ ಹೋಗಲು ಬಿಟ್ಟರು.

ಆದರೆ, ಪ್ರಯಾಣದ ನೋವನ್ನು ಕಡಿಮೆ ಮಾಡಲು ಅಧಿಕಾರಿಗಳು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ: ಹಸಿದ ವಲಸಿಗರಿಗೆ ಪೊಲೀಸರು ಬಿಸ್ಕತ್ತು ಮತ್ತು ನೀರನ್ನು ನೀಡುವ ವಿರಳ ನಿದರ್ಶನಗಳನ್ನು ಹೊರತುಪಡಿಸಿ, ದಾರಿಯಲ್ಲಿ ಅವರಿಗೆ ಆಹಾರವನ್ನು ನೀಡಲು ಯಾವುದೇ ಹೆದ್ದಾರಿ ಅಡಿಗೆಮನೆಗಳನ್ನು ಸರ್ಕಾರವಾಗಲೀ, ಅಧಿಕಾರಿಗಳಾಗಲೀ ಸ್ಥಾಪಿಸಲಾಗಿಲ್ಲ.

ರಸ್ತೆಯಲ್ಲಿ ನಡೆದು ಹೋಗುತ್ತಿರುವವರ ಅಳಲು ಕೇಳಲು ಯಾರೂ ಮುಂದಾಗಿಲ್ಲ. ಮೊನ್ನೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನೊಬ್ಬ ಜ್ವರ ಮತ್ತು ಬಳಲಿಕೆಯಿಂದ ರಸ್ತೆ ಮಧ್ಯದಲ್ಲೇ ಸ್ನೇಹಿತ ಮಡಿಲಲ್ಲಿ ಕೊನೆಯುಸಿರೆಳೆದ. ಸ್ನೇಹಿತನ್ನು ಬದುಕಿಸಿಕೊಳ್ಳಲು ಎಷ್ಟೇ ಅಂಗಲಾಚಿದರೂ ಯಾರೂ ಆತನ ನೆರವಿಗೆ ಬರಲಿಲ್ಲ. 170 ಮಂದಿ ಕಾರ್ಮಿಕರು ರಸ್ತೆಯಲ್ಲಿ ತಮ್ಮ ಜೀವನವನ್ನು ಕಳೆದುಕೊಂಡು ಅಸುನೀಗಿದ್ದಾರೆ. ಅದರ ಪರಿವೇ ಇಲ್ಲದಂತೆ ಸರ್ಕಾರವಿದೆ. ಕಾರ್ಮಿಕರ ಸಂಕಷ್ಟವನ್ನು ಬಗೆಹರಿಸುವ ಇಚ್ಛಾಸಕ್ತಿ ಸರ್ಕಾರಕ್ಕಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights