ಭಾರತ ಮತ್ತು ಚೀನಾದಲ್ಲಿ ಸರಿಯಾಗಿ ಪರೀಕ್ಷೆಗಳನ್ನು ನಡೆಸಿದರೆ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ: ಟ್ರಂಪ್‌

ಕೊರೊನಾ ವೈರಸ್‌ನ ಹಾವಳಿ ಆರಂಭಗೊಂಡ ದಿನಗಳಲ್ಲಿ ಚೀನಾ ಸೋಂಕನ್ನು ನಿಯಂತ್ರಿಸಲಾಗದೆ ತತ್ತರಿಸಿತ್ತು. ಆದರೆ, ಕ್ರಮೇಣ ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಇದೇ ಸಂದರ್ಭದಲ್ಲಿ ಅಮೆರಿಕಾದಲ್ಲಿ ಸಂಕಿತರ ಪ್ರಕರಣಗಳೂ ಹಾಗೂ ಸಾವುಗಳು ಏರುತ್ತಲೇ ಇವೆ.

ಅಮೆರಿಕಾದಲ್ಲಿ ಈವರೆಗೆ ಒಟ್ಟು 18,97,239 ಸೋಂಕಿತರ ಪ್ರಕರಣಗಳು ದಾಖಲಾಗಿದ್ದು, 1,09,127 ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ಮಧ್ಯೆ ಕೊರೊನಾ ಹಾವಳಿಯ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಹಾಗೂ ಚೀನಾದಲ್ಲಿ ಸರಿಯಾದ ರೀತಿಯಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದ್ದೇ ಆದಲ್ಲಿ, ಅಮೆರಿಕಾಗಿಂತಲೂ ಹೆಚ್ಚಿನ ಕೊರೊನಾ ಸೋಂಕಿತರು ಪತ್ತೆಯಾಗುತ್ತಾರೆ ಎಂದು ಹೇಳಿದ್ದಾರೆ.

ಅಮೆರಿಕಾದಲ್ಲಿ ಇದುವರೆಗೆ 20 ದಶಲಕ್ಷ (2 ಕೋಟಿ) ಪರೀಕ್ಷೆಗಳನ್ನು ನಡೆಸಲಾಗಿದೆ. ಹೆಚ್ಚು ಪರೀಕ್ಷೆಗಳನ್ನು ಮಾಡಿದರೆ, ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ ಎಂದು ಟ್ರಂಪ್‌ ಹೇಳಿದ್ದಾರೆ..

ಭಾರತೀಯ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಇದುವರೆಗೆ 40 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೆ, ಗುಜರಾತ್‌ನಲ್ಲಿ ಕೊರೊನಾ ಪರೀಕ್ಷೆಗಳನ್ನು ನಡೆಸುವುದನ್ನೇ ಭಾಗಶಃ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಗುಜರಾತ್‌ನ ಒಟ್ಟು ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಅಹಮದಾಬಾದ್‌ನಲ್ಲಿಯೇ ಪತ್ತೆಯಾಗಿವೆ. ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸಿದರೆ, ಇನ್ನೂ ಹೆಚ್ಚು ಸೋಂಕಿತರು ಪತ್ತೆಯಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹಾಗಾಗಿ ದೇಶಾದ್ಯಂತ ಇನ್ನೂ ವ್ಯಾಪಕವಾದ ರೀತಿಯಲ್ಲಿ ಪರೀಕ್ಷೆಗಳು ನಡೆಸಿದ್ದೇ ಆದಲ್ಲಿ, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ.

ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 2,36,657 ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ 84,177 ಪ್ರಕರಣಗಳು ದಾಖಲಾಗಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights