ಎಚ್ಚೆನ್ ನೂರರ ನೆನಪು: ಪ್ರಶ್ನೆಯಿಂದ ಆಶ್ಚರ್ಯದೆಡೆಗೆ….; ದಿ. ಜಿ ಎಸ್ ಎಸ್ ನೆನಪಿನ ಎಚ್ಚೆನ್

[ಇಂದು ಎಚ್ಚೆನ್ ಅವರ ಜನ್ಮಶತಾಬ್ಧಿ. ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ, ನ್ಯಾಶನಲ್ ಕಾಲೇಜು ಸಂಸ್ಥೆಯನ್ನು ಮತ್ತು ಬೆಂಗಳೂರು ವಿಶ್ವವಿದ್ಯಾಲಯವನ್ನು ಅತಿ ಎತ್ತರಕ್ಕೆ ಬೆಳೆಸಲು ಶ್ರಮಿಸಿದ ಶಿಕ್ಷಣತಜ್ಞ, ವಿಚಾರವಾದಿ ಡಾ. ಎಚ್ ನರಸಿಂಹಯ್ಯನವರ ಬಗ್ಗೆ ರಾಷ್ಟ್ರಕವಿ ದಿವಗಂತ ಜಿ ಎಸ್ ಶಿವರುದ್ರಪ್ಪ ಅವರ ಒಂದು ಆಪ್ತ ಬರಹ]

ಕಳೆದ ಶತಮಾನದ ಪೂರ್ವಾರ್ಧದಲ್ಲಿ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಂತ ಕುಗ್ರಾಮದ ಹಿಂದುಳಿದ ವರ್ಗಕ್ಕೆ ಸೇರಿದ  ಬಡ ಕುಟುಂಬ ವರ್ಗದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ, ಸ್ವಯಂ ಸಂಕಲ್ಪದಿಂದ ಮತ್ತು ಜನ್ಮಜಾತವಾದ ಪ್ರತಿಭೆಯಿಂದ, ತನ್ನ ಬದುಕಿನ ಪ್ರತಿಕೂಲವಾದ ಪರಿಸ್ಥಿತಿಗಳನ್ನು ಎದುರಿಸುತ್ತ, ತಮ್ಮ ಸರಳತೆ ದಕ್ಷತೆ ಪ್ರಾಮಾಣಿಕತೆಗಳಿಂದ ಅನಾಯಾಸವಾಗಿ ಬಂದ ಅನೇಕ ಎತ್ತರವಾದ ಜವಾಬ್ದಾರಿಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತ ಕರ್ನಾಟಕದ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಅಮೂಲ್ಯವಾದ ಕೊಡುಗೆಗಳನ್ನು ಕೊಟ್ಟರೆನ್ನುವುದು ಒಂದು ಆಶ್ಚರ್ಯದ ಸಂಗತಿಯಾಗಿದೆ. ಈ ಆಶ್ಚರ್ಯದ ವ್ಯಕ್ತಿಯೇ ಡಾ. ಎಚ್.ನರಸಿಂಹಯ್ಯನವರು.

ಅವರ ಬದುಕಿನ ನಡೆ ಒಂದು ಆಶ್ಚರ್ಯದಂತೆ ಮೇಲು ನೋಟಕ್ಕೆ ತೋರಿದರೂ ಮೂಲತಃ ಅವರು ತಮ್ಮ ಮನೋಧರ್ಮದಲ್ಲಿ ನನಗೆ ನಡೆದಾಡುವ ಪ್ರಶ್ನಾರ್ಥಕ ಚಿಹ್ನೆಯಂತೆ ತೋರುತಿದ್ದರು. ಇದನ್ನು ಸಮರ್ಥಿಸುವಂತೆ ಅವರು ಕೂತ ಕುರ್ಚಿಯ ಹಿಂದೆ ದೊಡ್ಡದೊಂದು ಕ್ವಶ್ಚನ್ ಮಾರ್ಕ್ ಎದ್ದು ಕಾಣುತಿತ್ತು. ಅದರರ್ಥ ನಾವು ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬಾರದು ಎನ್ನುವ ಮನೋಧರ್ಮವನ್ನು ರೂಢಿಸಿಕೊಳ್ಳಬೇಕು ಎನ್ನುವುದು. ಈ ಮನಃಸ್ಥಿತಿಯನ್ನು ಎಚ್ಚೆನ್ ಅವರು ’ತೆರೆದ ಮನ’ ಎಂದು ಬೇರೊಂದೆಡೆ ವರ್ಣಿಸುತ್ತಾರೆ. ಅವರ ಪ್ರಕಾರ ತೆರೆದ ಮನ ಎಂದರೆ ಖಾಲಿ ಮನಸ್ಸಲ್ಲ; ಅವಿಚಾರಕವಾಗಿ ಯಾವುದನ್ನೂ ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲ; ವಿವೇಚನೆಯಿಲ್ಲದೆ ಯಾವುದನ್ನೂ ಬರಮಾಡಿಕೊಳ್ಳುವ ಜಡವಾದ ಮನಸ್ಸೂ ಅಲ್ಲ. ಯಾವುದೇ ಬಗೆಯ ಪೂರ್ವಗ್ರಹಗಳಿಲ್ಲದೆ, ಎಲ್ಲವನ್ನೂ ಪ್ರಶ್ನಿಸುತ್ತ, ಪ್ರಯೋಗ ಪರೀಕ್ಷೆಗಳ ಮೂಲಕ ನಿಜವನ್ನು ಅರಿಯುವ ಒಂದು ಮುಕ್ತ ಮನಸ್ಸು. ಈ ದೇಶದ ಚರಿತ್ರಯಲ್ಲಿ ಪ್ರಶ್ನೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳಬೇಡ ಎಂಬ ಮಾತನ್ನು ಮೊದಲು ಹೇಳಿದವನೇ ಭಗವಾನ್ ಬುದ್ಧ. ಕವಿ ಕುವೆಂಪು, ಯುವಕರು ’ನಿರಂಕುಶಮತಿಗಳಾಗಬೇಕು’ ಎಂದು ಕರೆಕೊಡುತ್ತಾರೆ. ಡಾ. ಎಚ್ಚೆನ್ ಇದನ್ನೆ ತೆರೆದ ಮನ ಅಥವಾ ಯಾವುದರಿಂದಲೂ ಅನಿಯಂತ್ರಿತವಾದ ಒಂದು ಚಿತ್ತಸ್ಥಿತಿ ಎನ್ನುತ್ತಾರೆ. ಈ ಬಗಯ ’ತೆರೆದ ಮನ’ ಅವರಿಗೆ ಎಳೆಯಂದಿನಿಂದಲೇ ಬಂದ ಒಂದು ಪ್ರವೃತ್ತಿಯಾಗಿದೆ. ಅವರು ಹೇಳುತ್ತಾರೆ ’ಈ ಮನೋಧರ್ಮ ನಾನು ಮಿಡಲ್ ಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೆ ಮೊದಲಾಯಿತು’ ಎಂದು. ಅವರು ಹೈಸ್ಕೂಲಿನಲ್ಲಿ ಓದುತ್ತಿರುವಾಗ ಅವರ ತಂದೆ ತೀರಿಹೋದರು. ಆಗ ಅವರ ತಾಯಿ ಹೇಳಿದರು ’ಈಗ ನೀನು ನಮ್ಮ ಕುಲಪದ್ಧತಿಯಂತೆ ತಲೆ ಬೋಳಿಸಿಕೊಳ್ಳಬೇಕಪ್ಪ”. ಆಗ ಬಾಲಕನಾದ ಎಚ್ಚೆನ್ ಕೇಳಿದರು “ನನ್ನ ಅಪ್ಪ ಸತ್ತರೆ ನಾನೇಕೆ ತಲೆ ಬೋಳಿಸಿಕೊಳ್ಳಬೇಕಮ್ಮ”?

ಈ ಮನೋಧರ್ಮದ ಪರಿಣಾಮವಾಗಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ, ಪವಾಡ ಪುರುಷ ಸಾಯಿಬಾಬಾ ಅವರೊಂದಿಗೆ ಮುಖಾಮುಖಿಯಾಗುವ ಪ್ರಸಂಗ ಅವರನ್ನು ಜಗತ್ ವಿಖ್ಯಾತರನ್ನಾಗಿ ಮಾಡಿತು. ಎಚ್ಚೆನ್ ಮೊಟ್ಟಮೊದಲಿಗೆ ಸಾಯಿಬಾಬಾ ಅವರ ಪವಾಡಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ನೋಡಲು ತನಿಖಾ ಸಮಿತಿಯೊಂದನ್ನು ರಚಿಸಿ ಆ ಮೂಲಕ ಇಂಥ ಸುಳ್ಳು ದೇವಮಾನವರ ಪೊಳ್ಳುತನವನ್ನು ಬಯಲಿಗೆ ಎಳೆದರು. ಈ ಕುರಿತು ತಮ್ಮನ್ನು ಸಮರ್ಥಿಸಿಕೊಂಡ ಎಚ್ಚೆನ್ ‘ಇದು ದೇವರ ಅಥವಾ ಧರ್ಮದ ವಿರುದ್ಧ ಅಲ್ಲ. ಧರ್ಮ ಮತ್ತು ದೇವರು ಇವೆರಡನ್ನೂ ಬಳಸಿಕೊಂಡು, ಮೂಢನಂಬಿಕೆಗಳನ್ನು ಸೃಷ್ಟಿಸುತ್ತ ಅವೈಚಾರಿಕತೆಯಲ್ಲಿ ಸಾಮಾನ್ಯ ಜನರನ್ನು ಶೋಷಿಸುವವರ ವಿರುದ್ಧ’ ಎಂದು ಘೋಷಿಸಿದರು. ಎಚ್.ಎಮ್.ಟಿ ಗಡಿಯಾರಗಳನ್ನು, ಚಿನ್ನದ ಉಂಗುರಗಳನ್ನು, ಸರಗಳನ್ನು ಪವಾಡಗಳ ಮೂಲಕ ಭಕ್ತಾದಿಗಳಿಗೆ ಸೃಷ್ಟಿ ಮಾಡಿಕೊಡುವ ಭಗವಾನ್ ಸತ್ಯ ಸಾಯಿಬಾಬಾ ಅವರು ತಮಗೊಂದು ಕುಂಬಳಕಾಯಿ ಸೃಷ್ಟಿಸಿ ಕೊಟ್ಟರೆ ಸಾಕೆಂದು ಸವಾಲು ಹಾಕಿದರು. ಅಷ್ಟೆ ಅಲ್ಲ ಎಚ್.ಎಂ.ಟಿ ಫ್ಯಾಕ್ಟರಿಯವರೂ, ಒಡವೆ ಅಂಗಡಿಗಳವರೂ ಸಾಯಿಬಾಬಾ ಅವರ ಮೇಲೆ ಕಳವಿನ ಕೇಸು ಹಾಕಬೇಕೆಂದೂ ಕರೆ ನೀಡಿದರು!

’ತೆರೆದ ಮನ’ದ ವೈಚಾರಿಕ ಬುಧ್ಧಿಯ ಡಾ.ನರಸಿಂಹಯ್ಯನವರ ವ್ಯಕ್ತಿತ್ವ ಬಹುಮುಖಿಯಾದದ್ದು. ಅವರ ಬದುಕಿನ ಒಂದಷ್ಟು ಭಾಗ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತೀಯ ಸ್ವಾತಂತ್ರ ಚಳುವಳಿಯ ಜೊತೆಗೆ, ನ್ಯಾಷನಲ್ ಎಜುಕೇಷನ್ ಸೊಸೈಟಿಯ ಶೈಕ್ಷಣಿಕ ಪ್ರಯೋಗಗಳ ಜತೆಗೆ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯ ಜವಾಬ್ದಾರಿಗಳ ಜೊತೆಗೆ ಬೆರೆತುಕೊಂಡಿದೆ. ಇದರ ಜೊತೆಗೆ ಕರ್ನಾಟಕ ಸರ್ಕಾರದ ಮೇಲ್ಮನೆಯ ಸದಸ್ಯರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆಯೂ ಗಣನೀಯವಾದದ್ದು. ಅದರಲ್ಲೂ ಬೆಂಗಳೂರಿನ ನ್ಯಾಷನಲ್ ಎಜುಕೇಷನ್ ಸೊಸೈಟಿಯಂಥ ಪ್ರತಿಷ್ಟಿತ ಸಂಸ್ಥೆಯ ಅಧ್ಯಕ್ಷರಾಗಿ ಗ್ರಾಮಾಂತರ ಪರಿಸರಗಳಲ್ಲಿ ಅವರು ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿದ್ದು ಮಹತ್ವದ ಹೆಜ್ಜೆಯಾಗಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದುಕೊಂಡು ಶಿಕ್ಷಣದ ಜತೆಗೆ ರಂಗಭೂಮಿಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಆಧುನಿಕ ರಂಗಭೂಮಿ ಮತ್ತು ಚಲನಚಿತ್ರ ಜಗತ್ತಿಗೆ ಶ್ರೇಷ್ಠ ನಟರು ಸಿದ್ಧವಾಗುವಂತೆ ನೋಡಿಕೊಂಡರು. ಅಧ್ಯಾಪಕರು ದಿನವೂ ಕಾಲೇಜಿಗೆ ಬಂದಾಗ ಕಡ್ಡಾಯವಾಗಿ ತಮ್ಮ ಹಾಜರಾತಿ ರಿಜಿಸ್ಟರಿನಲ್ಲಿ ರುಜು ಹಾಕುವ ಪದ್ಧತಿಯನ್ನು ರದ್ದು ಪಡಿಸಿ ಅವರು ತಮ್ಮ ಅಂತಃಸಾಕ್ಷಿಗೆ ಬದ್ಧವಾಗುವುದನ್ನು ಕಲಿಸಿದರು. ಅಷ್ಟೇ ಅಲ್ಲ, ಉಸ್ತವಾರಿಯಿಲ್ಲದೆ ಪರೀಕ್ಷೆಗಳನ್ನು ನಡೆಯಿಸುವ ಮಹತ್ ಪ್ರಯೋಗವನ್ನು ಜಾರಿಗೆ ತಂದರು. ಮೊದಲ ಬಾರಿಗೆ ಟ್ಯುಟೋರಿಯಲ್ ವ್ಯವಸ್ಥೆಯನ್ನು ರೂಢಿಗೆ ತಂದು ಯಾವೆಲ್ಲ ಸಾಮಾನ್ಯ ವಿಧ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದರೋ ಅವರೆಲ್ಲ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗುವಂತೆ ಮಾಡಿದರು. “ನಾಗರಭಾವಿ”ಯಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯವನ್ನು “ಜ್ಞಾನಭಾರತಿ”ಯನ್ನಾಗಿ ಮಾಡಿದ್ದು ಅವರ ಮತ್ತೊಂದು ಸಾಧನೆ. ಇವೆಲ್ಲ ಸಾಮಾನ್ಯವಾದ ಸಂಗತಿಗಳಲ್ಲ.

ಶಿಕ್ಷಣ ಕ್ಷೇತ್ರದ ಬಗ್ಗೆ ಎಚ್.ನರಸಿಂಹಯ್ಯನವರಂತೆ ವಿಚಾರ ಮಾಡಿದವರು ಬಹಳ ಜನ ಇಲ್ಲ. ವೈಜ್ಞಾನಿಕ ಮನೋಧರ್ಮ ಮತ್ತು ಮಾನವೀಯತೆಯ ಜತೆಗೆ ಸಮಾಜಿಕ ಕಾಳಜಿಗಳನ್ನು ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡುವುದು ಹೇಗೆ ಎನ್ನುವುದು ಅವರ ನಿರಂತರ ತುಡಿತವಾಗಿತ್ತು. ಅವರೊಂದೆಡೆ ಹೇಳುತ್ತಾರೆ : ’ನಾವು ವಿದ್ಯಾರ್ಥಿಗಳಿಗೆ ಕಲೆ, ವಿಜ್ಞಾನ ಇತ್ಯಾದಿಗಳನ್ನು ಬೋಧಿಸುತ್ತೇವೆ. ಆದರೆ, ಜೀವನಕ್ಕೆ ಉಪಯುಕ್ತವಾದ ಪ್ರಾಮಾಣಿಕತೆ, ಜಾತ್ಯಾತೀತ ಮನೋಧರ್ಮ, ವೈಚಾರಿಕತೆಗಳನ್ನು ಹೇಳಿಕೊಡುವುದಿಲ್ಲ’.

ನಮ್ಮ ಮಕ್ಕಳಲ್ಲಿ ವೈಚಾರಿಕತೆಯನ್ನು ಪ್ರಚೋದಿಸುವುದೇ ಶಿಕ್ಷಣದ ಗುರಿಯಾಗಬೇಕು ಎಂದು ಪ್ರತಿಪಾದಿಸಿದ ನರಸಿಂಹಯ್ಯನವರು, ಮಗುವಿನ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಅದರ ಶಿಕ್ಷಣ ಮಾಧ್ಯವಾಗಿರಬೇಕು ಅನ್ನುವುದನ್ನು ಪ್ರತಿಪಾಸಿದವರು. ಬೆಂಗಳೂರಿನಂಥ ಇಂಗ್ಲಿಶ್‌ಮಯವಾದ ವಾತಾವರಣದಲ್ಲಿ, ನರಸಿಂಹಯ್ಯನವರು ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯನ್ನು ಸುಮಾರು ೬ ದಶಕಗಳಿಗೂ ಮೀರಿದ ಕಾಲಮಾನದಲ್ಲಿ ಅಪ್ಪಟ ಕನ್ನಡ ಮಾಧ್ಯಮದಲ್ಲಿ ನಡೆಯಿಸಿದರೆನ್ನುವುದು ಸಾಮಾನ್ಯವಾದ ಸಂಗತಿಯಲ್ಲ. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕಾಲದಲ್ಲಿ ದೂರದರ್ಶನದ ಮೂಲಕ ಪ್ರಸಾರವಾಗುತ್ತಿದ್ದ ಜಾಹೀರಾತೊಂದು ಹೀಗಿತ್ತು : ’ಆಆಇಈ ಮೊದಲು ಎಬಿಸಿಡಿ ಆಮೇಲೆ’! ಈ ಜಾಹೀರಾತಿನ ರೂವಾರಿ ಡಾ. ಎಚ್ಚೆನ್.

– ದಿವಂಗತ ಡಾ. ಜಿ. ಎಸ್ ಶಿವರುದ್ರಪ್ಪ, ಕನ್ನಡದ ಪ್ರಖ್ಯಾತ ಕವಿ ಜಿ ಎಸ್ ಎಸ್, ಎಚ್ಚೆನ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದಾಗ, ಅಲ್ಲಿ ಕನ್ನಡ ವಿಭಾಗ ಮತ್ತು ಪ್ರಸಾರಾಂಗದ ಮುಖ್ಯಸ್ಥರಾಗಿದ್ದವರು. ಎಚ್ಚೆನ್ ಒಡನಾಡಿಗಳಾಗಿದ್ದ ಅವರು ಎಚ್ಚೆನ್ ಬಗ್ಗೆ ತಮ್ಮ ನೆನಪುಗಳನ್ನು ಬಹಳ ಆಪ್ತವಾಗಿ ದಾಖಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights