ಮೋಕ್ಷವನ್ನು ಹುಡುಕುತ್ತ ಪ್ರೀತಿಯ ಬಂಧನದಲ್ಲಿ – ಬುದ್ದನ ಕುರಿತ ಪಿ.ಲಂಕೇಶ್ ಲೇಖನ

ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೆ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲುಗಳಿಂದ ದೊರೆಗಳು, ಸೇನಾನಿಗಳು ಬಂದು ಈತನನ್ನು ನೋಡಿ ಗೌರವಿಸುತ್ತಿದ್ದರು. ಈತ ಜನಕ್ಕೆ ಉಪದೇಶ ನೀಡುತ್ತಿದ್ದ. ಹಾಗೆ ನೋಡಿದರೆ ಈತನಿಗೆ ದಿನದ ವೇಳೆಯೇ ಸಾಕಾಗುತ್ತಿರಲಿಲ್ಲ. ಆದರೆ ಎಂದೋ ನೋಡಿದ ಸಾಮಾನ್ಯನೊಬ್ಬನಿಗೆ ಕಾಯಿಲೆಯಾದರೆ, ಯಾವುದೇ ತೊಂದರೆಯಾದರೆ ಈತ ಹತ್ತಾರು ಮೈಲಿ ನಡೆದುಹೋಗಿ ಆತನನ್ನು ಕಂಡು ಆರೈಕೆ ಮಾಡುತ್ತಿದ್ದ; ಅವನ ತೊಂದರೆಗಳಿಗೆ ಪರಿಹಾರ ಹುಡುಕುತ್ತಿದ್ದ. ಒಮ್ಮೆ ಈತನ ಆಶ್ರಮದ ಮುದಿ ರೋಗಿಯೊಬ್ಬನನ್ನು ಯಾರೂ ಸರಿಯಾಗಿ ನೋಡಿಕೊಳ್ಳಲಿಲ್ಲ. ತನ್ನ ಕೆಲಸಗಳ ನಡುವೆ ಆ ಕಡೆ ಗಮನ ಹರಿಸದಿದ್ದಕ್ಕೆ ಗುರುವಿಗೆ ತನ್ನ ಬಗ್ಗೆ ಬೇಸರವಾಯಿತು. ಆ ಮುದಿ ರೋಗಿಯನ್ನು ತಾನೇ ಉಪಚರಿಸಿ ನೋಡಿಕೊಂಡ. ಅದು ತನ್ನೆಲ್ಲಾ ಉಪದೇಶಕ್ಕಿಂತ ಮುಖ್ಯವಾದದ್ದೆಂದು ಈ ಮನುಷ್ಯ ತಿಳಿದಿದ್ದ.

ನೀವು ಊಹಿಸಿರಬಹುದಾದಂತೆ ಈತ ಗೌತಮ. ಈತನ ಬಗ್ಗೆ ಕತೆಗಳನ್ನು ಕೇಳುತ್ತಾ ಈತನ ಉಪದೇಶಗಳನ್ನು ಓದುತ್ತಾ ನಾವೆಲ್ಲ ಈ ಗೌತಮ ಅಥವಾ ಸಿದ್ಧಾರ್ಥ ಎಂಬ ಮನುಷ್ಯನ ಬಗ್ಗೆ ದಡ್ಡುಗಟ್ಟಿದ್ದೇವೆ; ಈತ ಇನ್ನೊಬ್ಬ ಮಹಾತ್ಮ ಎಂದು ತಿಳಿದು ನಿರ್ಲಕ್ಷಿಸಲು ಬೇಕಾದ ಗೌರವವನ್ನು ಮಾತ್ರ ಇಟ್ಟುಕೊಂಡು ಸುಮ್ಮನಾಗುತ್ತೇವೆ. ಆದರೆ ಕೇವಲ ಮನುಷ್ಯನಾಗಿ ಈತನ ನಡವಳಿಕೆ ಅಚ್ಚರಿ ಹುಟ್ಟಿಸುತ್ತದೆ; ನನ್ನ ಅಚ್ಚರಿಯನ್ನು ಮಾತ್ರ ಇಲ್ಲಿ ವಿವರಿಸುತ್ತೇನೆ.

ವೈಶಾಖ ಶುದ್ಧ ಪೂರ್ಣಿಮೆಯಂದು ಚೆನ್ನನೊಂದಿಗೆ ಈತ ಅರಮನೆಯನ್ನು ಬಿಟ್ಟಿದ್ದು ಓದಿದ್ದೇವೆ. ಹೀಗೆ ಅರಮನೆ, ಅದರ ಸಂಪತ್ತು ಸುಖವನ್ನೆಲ್ಲ ಬಿಟ್ಟು ಹೊರಟಿದ್ದು ಈತನ ಉನ್ನತ ಗುಣ ತೋರುತ್ತದೆ ಎಂದು ಹೇಳುತ್ತಾರೆ. ಆದರೆ ನನಗೆ ಈ ಗೌತಮನ ಸಾಮಾನ್ಯತೆಯೇ ಇಲ್ಲಿ ಕಂಡುಬರುತ್ತದೆ. ಯಾಕೆಂದರೆ ಈತ ಹುಟ್ಟಿದಾಗಲೇ ಈತನ ತಂದೆ ಶುದ್ಧೋದನನ ಪುರೋಹಿತರು ಗೌತಮನೊಬ್ಬ ಮಹಾತ್ಮನಾಗುವ ಬಗ್ಗೆ, ಮಹಾನ್ ಗುರುವಾಗುವ ಬಗ್ಗೆ ಹೇಳಿದ್ದರಂತೆ; ಒಳಗೊಳಗೇ ಗೌತಮನ ಬಗ್ಗೆ ಭಕ್ತಿಯನ್ನಿಟ್ಟುಕೊಂಡಿದ್ದ ದೊರೆ ಗೌತಮ ಸಂನ್ಯಾಸಿಯಾದಾನೆಂದು ಹೆದರಿ ಆತನನ್ನು ರಾಜಭೋಗದಲ್ಲಿ ಇಟ್ಟಿದ್ದನಂತೆ. ಇದು ನಿಜವಾದರೆ ಗೌತಮ ಅರಮನೆ ಬಿಡುವ ಅಗತ್ಯವಿರಲಿಲ್ಲ; ಆತನು ಮಹಾನ್ ಗುರುವಾಗುವುದು ಮೊದಲೇ ನಿಶ್ಚಿತವಾಗಿದ್ದರೆ ಅದಕ್ಕಾಗಿ ಗೌತಮ ಪ್ರಯತ್ನಿಸಬೇಕಾದ ಅಗತ್ಯವಿರಲಿಲ್ಲ. ಇಲ್ಲಿ ಗೌತಮನ ಸಹಜ ಕುತೂಹಲ, ಮನುಕುಲದ ದುರಂತದ ಬಗ್ಗೆ ಕಾಳಜಿ ಕಂಡುಬರುತ್ತದೆ. ಅರಮನೆ ಏನೂ ಗೊತ್ತಿಲ್ಲದ, ಏನೂ ಗೊತ್ತಾಗದಂತೆ ಇರುವ ಜಾಗವಾಗುತ್ತದೆ. ಆತ ಅರಿವು ಹುಡುಕಿ ಹೊರಡುತ್ತಾನೆ. ಇಲ್ಲಿ ಕೂಡ ಒಂದು ಪ್ರಶ್ನೆ ಏಳುತ್ತದೆ, ಗೌತಮ ದೊರೆಯಾಗಿ ಮನುಷ್ಯರಿಗೆ ನೆರವಾಗಲು ಆಗುತ್ತಿರಲಿಲ್ಲವೇ? ಆದರೆ ದೊರೆ ಮನುಷ್ಯರ ಯಾವುದೇ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ ಎಂಬುದು ಗೌತಮನಿಗೆ ಗೊತ್ತಾಗಿದೆ. ರೋಗ, ಮುಪ್ಪು , ಸಾವುಗಳಿಗೆ ಉತ್ತರ ಹುಡುಕಿ ಹೊರಟ ಗೌತಮನ ದಾರಿ ಮತ್ತು ಮುಟ್ಟಿದ ಗುರಿ ವಿಚಿತ್ರವಾದ ಅರ್ಥಗಳಿಂದ ಕೂಡಿದೆ.

ಗೌತಮ ಅರಮನೆಯನ್ನು ಬಿಟ್ಟವನು ಕಾಡಿಗೆ ಹೋಗಲಿಲ್ಲ; ಮನುಷ್ಯರಲ್ಲಿಗೆ ಹೋದ. ಅನೇಕ ವಿದ್ವಾಂಸರನ್ನು, ವಿದ್ಯಾಲಯಗಳನ್ನು ಎಡತಾಕಿದ. ಅವರೊಂದಿಗೆ ಚರ್ಚಿಸಿ ಕಲಿಯಲು ಯತ್ನಿಸಿದ. ಅಲ್ಲಿಂದ ಅಧ್ಯಾತ್ಮದ ಗುರುಗಳನ್ನು ಕಂಡು ವಿನಯಪೂರ್ವಕವಾಗಿ ಕಲಿಯಲು ಯತ್ನಿಸಿದ. ಅವರಲ್ಲಿ ಕಲಿತಾಗ ಅವರನ್ನು ‘ಮುಂದೇನು?’ ಎಂದು ಕೇಳಿದ. ಆ ಅಧ್ಯಾತ್ಮದ ಗುರುಗಳು ತಮ್ಮ ಸಾಧನೆ ಅಷ್ಟಕ್ಕೇ ಮುಗಿಯಿತು, ಗೌತಮ ಈಗ ಅವರ ಸಮಾನ ಎಂದು ಹೇಳಿದರು. ಗೌತಮನಿಗೆ ತೃಪ್ತಿಯಾಗಲಿಲ್ಲ. ಮತ್ತೆ ಹುಡುಕಿ ಹೊರಟ. ಯಾರೋ ಅವನಿಗೆ ಸತ್ಯವನ್ನು ಕಾಣಲು ದೇಹದಂಡನೆಯ ಅಗತ್ಯದ ಬಗ್ಗೆ ಹೇಳಿದರು. ಊಟ, ನಿದ್ರೆಗಳನ್ನು ತ್ಯಜಿಸಿ ಹಠವಾದಿಯಂತೆ ಧ್ಯಾನಿಸತೊಡಗಿದ. ಅನೇಕ ವರ್ಷಗಳ ಬಳಿಕ ಗೌತಮ ತನ್ನ ಈ ಹಂತದ ಬಗ್ಗೆ ತಣ್ಣಗೆ, ನಸು ಹಾಸ್ಯದಿಂದ, ವಿಷಾದದಿಂದ ಹೇಳುತ್ತಿದ್ದ:

“ಆ ದಿನಗಳಲ್ಲಿ ನನ್ನ ಕೈಕಾಲುಗಳೆಲ್ಲ ಒಣಗಿದ ಬಳ್ಳಿಯಂತೆ, ಗಂಟುಗಂಟಾದ ಪುರಲೆಗಳಂತೆ ಆಗಿದ್ದವು; ನನ್ನ ಪುಷ್ಠ ಎಮ್ಮೆಯ ಗೊರಸಿನಂತೆ ಆಗಿತ್ತು; ನನ್ನ ಬೆನ್ನುಹುರಿ ಬಾಗಿದ ಚೆಂಡಿನ ಸರದಂತಾಗಿತ್ತು; ನನ್ನ ಎದೆಯ ಮೂಳುಗಳು ಪಾಳುಬಿದ್ದ ಗುಡಿಸಲಿನಂತಾಗಿದ್ದವು; ನನ್ನ ಕಣ್ಣುಗಳು ತಮ್ಮ ಗುಳಿಯಲ್ಲಿ ಆಳವಾದ ಬಾವಿಯ ನೀರಿನಂತೆ ಕಾಣುತ್ತಿದ್ದವು; ನನ್ನ ತಲೆ ಬಿಸಿಲುಗಾಳಿಗೆ ಒಣಗಿದ ಸೋರೆಕಾಯಿಯಂತೆ ಆಗಿತ್ತು.. ನನ್ನ ಹೊಟ್ಟೆಯ ಚರ್ಮ ಬೆನ್ನಿಗೆ ಅಂಟಿಕೊಂಡಿತ್ತು; ಬಹಿರ್ದೆಸೆಗೆ ಹೋಗಿ ಕೂತರೆ ಮುಖದ ಮೇಲೆ ನೆಲಕ್ಕೆ ಬಿದ್ದುಬಿಡುತ್ತಿದ್ದೆ; ನನ್ನ ಕೈಕಾಲುಗಳನ್ನು ತುರಿಸಿಕೊಂಡರೆ ಕೂದಲು ತಮ್ಮ ಬೇರು ಸಮೇತ ಕಿತ್ತುಕೊಂಡು ಬರುತ್ತಿದ್ದವು..”

ಈ ಸ್ಥಿತಿಯಿಂದ ಗೌತಮನಿಗೆ ಜ್ಞಾನೋದಯವಾಗಲಿಲ್ಲ. ಈ ಬಗೆಯ ದೇಹದಂಡನೆಯನ್ನು ಬಿಟ್ಟ, ಸುಜಾತ ಎಂಬ ಹೆಣ್ಣುಮಗಳು ಆತನಿಗೆ ಊಟ ನೀಡಿದಳು. ಅವನು ಸಹಜ ಮನುಷ್ಯನಂತೆ ಬದುಕುತ್ತ ಧ್ಯಾನಿಸಲು ಆರಂಭಿಸಿದಾಗ ಅವನ ಜೊತೆಗಾರರು ಕೆಲವರು ಆಕ್ಷೇಪಿಸಿ ಹೊರಟುಹೋದರು; ಗೌತಮ ಏಕಾಂಗಿಯಾಗಿ ಸತ್ಯ ಹುಡುಕತೊಡಗಿದ. ಮನುಷ್ಯ ತನ್ನ ಬಡತನ, ರೋಗ, ಸಾವು, ನೋವು, ಅನ್ಯಾಯಗಳನ್ನು ಗೆಲ್ಲುವ ಸಾಧ್ಯತೆಗಳನ್ನು ಹುಡುಕತೊಡಗಿದ. ನಿರ್ವಾಣ, ಮೋಕ್ಷ ಸಾಧ್ಯವೇ ಎಂದು ನೋಡಿದ. ದೇವರ ಅಸ್ತಿತ್ವಕ್ಕಾಗಿ ತಡಕಾಡಿದ.

ಹುಟ್ಟಿದಂತೆಯೇ ವೈಶಾಖ ಶುದ್ಧ ಪೂರ್ಣಿಮೆಯಂದು ಗೌತಮನಿಗೆ ಉತ್ತರ ದೊರಕಿತು. ಅದನ್ನು ಜ್ಞಾನೋದಯ ಎಂದು ಅನೇಕರು ಕರೆದರು. ಹಾಗೆ ಗೌತಮ ಎಂದೂ ಹೇಳಿಕೊಳ್ಳಲಿಲ್ಲ. ನಾನು ಕೂಡ ಅದನ್ನು ಜ್ಞಾನೋದಯ ಎಂದು ಕರೆಯದೆ ಮನುಷ್ಯನ ದುಃಖಕ್ಕೆ ಇರಬಹುದಾದ ಉತ್ತರ ಎಂದು ಕರೆಯಲು ಆಶಿಸುತ್ತೇನೆ. ಯಾಕೆಂದರೆ ಗೌತಮನಲ್ಲಿ ಜ್ಞಾನೋದಯವಾದ ಒಂದೇ ಒಂದು ಸೂಚನೆ ಇದ್ದದ್ದು ಆತನ ಪ್ರಶಾಂತತೆಯಲ್ಲಿ; ಮನುಷ್ಯನ ಬಗ್ಗೆ ತಿಳಿವಳಿಕೆಯಲ್ಲಿ. “ದೇವರು ಇದ್ದಾನೆಯೆ?” ಎಂಬ ಪ್ರಶ್ನೆಗೆ ಗೌತಮನಲ್ಲಿ ಉತ್ತರವಿರಲಿಲ್ಲ. “ಆತ್ಮ ಎಂಬುದು ಇದೆಯೇ?” ಎಂಬುದಕ್ಕೆ ಆತನಲ್ಲಿ ಉತ್ತರವಿರಲಿಲ್ಲ. ತನಗೆ ಗೊತ್ತಿಲ್ಲದ್ದನ್ನು ಹೇಳಲು ನಿರಾಕರಿಸುವ ಗೌತಮನ ಜ್ಞಾನೋದಯ ಮನುಷ್ಯನ ಬದುಕಿನ ವಿವರಗಳನ್ನು ಒಳಗೊಂಡಿತ್ತು.

ಬುದ್ಧ ಪೂರ್ಣಿಮೆ ವಿಶೇಷ: ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ…
ಸಂನ್ಯಾಸ, ಧ್ಯಾನ, ತಪಸ್ಸುಗಳು ಸಾಮಾನ್ಯ ಮನುಷ್ಯನಲ್ಲಿ ಗೌರವದ ಜೊತೆಗೆ ಅಂಜಿಕ ಹುಟ್ಟಿಸುತ್ತವೆ. ಅವೆಲ್ಲ ತನ್ನಿಂದ ಸಾಧ್ಯವಾಗುವುದಿಲ್ಲ, ತನ್ನ ಸಣ್ಣಪುಟ್ಟ ಸಂತೋಷಗಳೊಂದಿಗೆ ಹೊಂದಿಕೊಳ್ಳುವುದಿಲ್ಲ ಎಂದುಕೊಳ್ಳುವ ಗೌತಮ ನಂತರ ಅವನ್ನೆಲ್ಲ ಹೊಕ್ಕು ಪರೀಕ್ಷಿಸಿ ಹೊರಬಂದ ಮೇಲೆ ಒಂದು ಘಟನೆ ನಡೆಯುತ್ತದೆ. ಗೌತಮ ಉಪವಾಸ, ದೇಹದಂಡನೆ ಇತ್ಯಾದಿಗಳನ್ನು ಬಿಟ್ಟೊಡನೆ ಅವನನ್ನು ಬಿಟ್ಟು ಹೊರಟುಹೋದ ಗೆಳೆಯರನ್ನು ಕಾಣುತ್ತಾನೆ, ತನಗೆ ಮನುಷ್ಯನ ದುರಂತಕ್ಕೆ ಉತ್ತರ ದೊರಕಿದೆ ಎಂದು ಹೇಳುತ್ತಾನೆ. ಆ ಗೆಳೆಯರು ನಂಬುವುದಿಲ್ಲ, “ಎಲ್ಲರಂತೆ ಬದುಕಿದ ನಿನಗೆ ಜ್ಞಾನೋದಯವಾಗಿರುವುದು ಸಾಧ್ಯವಿಲ್ಲ” ಎಂದು ಹೇಳುತ್ತಾರೆ. ಗೌತಮ ಏನು ಹೇಳಿದರೂ ನಂಬುವುದಿಲ್ಲ, ಆಗ ಗೌತಮ ಅನ್ಯೋನ್ಯತೆಯಿಂದ, “ನನ್ನ ಧ್ವನಿ ಮುಂಚಿನಂತಿದೆಯೇ? ನನ್ನ ಮಾತು ಬೇರೆ ಥರ ಎನಿಸುವುದಿಲ್ಲವೆ?” ಎಂದು ಕೇಳುತ್ತಾನೆ. ಆಗ ಅವರಿಗೆ ಗೌತಮನಲ್ಲಿ ಏನೋ ಹೊಸತು ಗೋಚರವಾಗುತ್ತದೆ. ಗೌತಮನ ಜೊತೆಗಾರಿಕೆಯಲ್ಲಿ ಆತನ ತಿಳಿವಳಿಕೆಯ ಅರಿವಾಗುತ್ತದೆ.

ದೇಶದ ಉದ್ದಗಲಕ್ಕೆ ಓಡಾಡಿದ ಸಿದ್ಧಾರ್ಥ ಜನಕ್ಕೆ ಬೋಧಿಸುತ್ತಿದ್ದುದು ಸರಳವಾಗಿತ್ತು. ‘ಆಶೆಯೇ ದುಃಖಕ್ಕೆ ಮೂಲ’ ಎಂದು ಹೇಳುತ್ತಿದ್ದ. ನೀತಿ, ವಿನಯ, ಪ್ರಾಮಾಣಿಕತೆಯನ್ನು ಬೋಧಿಸುತ್ತಿದ್ದ. ಒಮ್ಮೆ “ತಪ್ಪಿತಸ್ಥರನ್ನು ಶಿಕ್ಷಿಸುವುದರಿಂದ ಅಪರಾಧ ಕಮ್ಮಿಯಾಗುವುದಿಲ್ಲ” ಎಂದು ಹೇಳಿದ. ಅದರ ಬಗ್ಗೆ ವಿವರಣೆ ಕೇಳಿದಾಗ ಸಿದ್ಧಾರ್ಥ ಯಾವುದೇ ಪವಾಡದ ಬಗ್ಗೆ, ದೇವರನ್ನು ಕುರಿತ ಭಯದ ಬಗ್ಗೆ ಹೇಳಲಿಲ್ಲ. “ಬಡತನದ ನಿವಾರಣೆಯಾದರೆ ಮಾತ್ರ ಅಪರಾಧ, ಕ್ರೌರ್ಯ, ಅನ್ಯಾಯಗಳು ಹೋಗುತ್ತವೆ” ಎಂದು ಹೇಳಿದ. “ಶ್ರೀಮಂತರಾದರೆ?” ಎಂದು ಕೇಳಿದರೂ ಸಿದ್ಧಾರ್ಥ ಶ್ರೀಮಂತರ ದಾಹ, ಸ್ವಾರ್ಥ, ಶೋಷಣೆಯ ಬಗ್ಗೆ ಹೇಳುತ್ತಿದ್ದ. ಈತನ ಬೋಧನೆ ಎಲ್ಲರಿಗೆ ಗೊತ್ತಿರುವುದರಿಂದ ಇಲ್ಲಿ ಮತ್ತೆ ಹೇಳಬೇಕಿಲ್ಲ.

ಆದರೆ ಸರಿಯಾಗಿ ಎರಡೂವರೆ ಸಾವಿರ ವರ್ಷದ ಹಿಂದೆ ಬದುಕಿದ್ದ ಈ ಮನುಷ್ಯನ ವ್ಯಕ್ತಿತ್ವ ನೋಡಿ. ಅರಮನೆ, ದೇವಾಲಯಗಳನ್ನು ಬಿಟ್ಟು ನಿರ್ವಾಣವನ್ನು ಕಂಡುಕೊಳ್ಳಲು ಹೊರಟ ಈತ ದೇವರನ್ನು ತಲುಪಲಿಲ್ಲ. ಮನುಷ್ಯರನ್ನು ತಲುಪಿದ. ಅದು ಪ್ರೀತಿಯ ಮೂಲಕ, ನಿರ್ಮೋಹದ ನೋಟದ ಮೂಲಕ. ಸಿದ್ಧಾರ್ಥನಿಗೆ ವಯಸ್ಸಾದಂತೆಲ್ಲ ಆತನ ಸಹಜತೆ ಕೂಡ ಬೆಳೆಯುತ್ತಿತ್ತು. ಗಾಧ ವ್ಯಾಮೋಹ, ದುಃಖ, ಸಾವುನೋವು, ವಿರಹಗಳ ಬಲೆಯಲ್ಲಿ ಬಿದ್ದ ಮನುಷ್ಯನ ಅಸಹಾಯಕ ಸ್ಥಿತಿಗೆ ಪರಿಹಾರವಾಗಿ ಈತನಲ್ಲಿ ಅಪಾರ ಪ್ರೀತಿ ಮಾತ್ರ ಇತ್ತು. ಲಕ್ಷಾಂತರ ಶಿಷ್ಯರು, ಅಭಿಮಾನಿಗಳನ್ನು ಪಡೆದಿದ್ದ ಬುದ್ಧ ಶಿಸ್ತಿಗೆ, ದಕ್ಷತೆಗೆ ಪ್ರಖ್ಯಾತನಾಗಿದ್ದ. ಈತನ ಆಶ್ರಮಗಳು ನಡೆಯುತ್ತಿದ್ದ ಬಗೆಯನ್ನು, ಈತನ ಅನುಯಾಯಿಗಳ ಜೀವನ ಕ್ರಮವನ್ನು ಗಮನಿಸಿದ ರಾಜನೊಬ್ಬ, “ನನ್ನೆಲ್ಲ ಸೈನ್ಯ, ಶಕ್ತಿ ಬಳಸಿದರೂ ಪ್ರಜೆಗಳಲ್ಲಿ ಈ ಶಿಸ್ತು ತರಲಾಗುತ್ತಿಲ್ಲ” ಅಂದ. ಅದಕ್ಕೆ ಸಿದ್ಧಾರ್ಥ, “ವಿಶ್ವಾಸ, ಪ್ರೀತಿ ಇದ್ದಲ್ಲಿ ಮಾತ್ರ ಶಿಸ್ತು ಸಾಧ್ಯ” ಎಂದು ಹೇಳಿದ.

ಸಿದ್ಧಾರ್ಥ ಜ್ಞಾನಿಯಾಗಿದ್ದ, ವಿದ್ವಾಂಸನಾಗಿರಲಿಲ್ಲ. ಗೊಡ್ಡು ಪಾಂಡಿತ್ಯ ಕಂಡು ವಿಸ್ಮಿತನಾಗುತ್ತಿದ್ದ. ಪ್ರಖಾಂಡ ಪಂಡಿತನೊಬ್ಬ ತನ್ನ ಪಾಂಡಿತ್ಯದಿಂದ ಎಲ್ಲರಿಗೂ ಮುಖಭಂಗ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಆತ ಸಿದ್ಧಾರ್ಥನನ್ನು ವಾದದಲ್ಲಿ ಸೋಲಿಸುವ ಸಲುವಾಗಿ ಬಂದು “ಬ್ರಾಹ್ಮಣನ ಮುಖ್ಯ ಲಕ್ಷಣಗಳೇನು?” ಎಂದು ಕೇಳಿದ. ಆಗ ಬುದ್ಧ ಗಂಭೀರವಾಗಿ, “ನೀಚತನದಿಂದ ಮುಕ್ತನಾದವನು, ಪರಿಶುದ್ಧ ಹೃದಯವುಳ್ಳವನು ಮತ್ತು ಇತರರ ಮುಖಭಂಗ ಮಾಡದಿರುವವನು” ಅಂದು ನಸುನಕ್ಕ.

ಗೌತಮನ ಮನುಷ್ಯತ್ವ, ಹಾಸ್ಯ, ರಸಿಕತೆ, ಭೂತದಯೆ, ಜೀವನ ಪ್ರೇಮವನ್ನು ಒಳಗೊಂಡಿತ್ತು. ಆತ ತಾನು ಕಂಡ ನದಿ, ಬೆಟ್ಟ, ಕಾಡುಗಳನ್ನು, ತನ್ನ ಪ್ರೀತಿಯ ಸ್ಥಳಗಳನ್ನು ಕುರಿತು ಭಾವುಕನಾಗಿ ಮಾತನಾಡುತ್ತಿದ್ದ. ಅನೇಕ ಸಲ ನೀನು ಈ ಭೂಮಿಯಲ್ಲಿ ಸ್ವರ್ಗ ಕಾಣಬೇಕೆಂದಿದ್ದರೆ ಈ ಜಿಲ್ಲೆಯ ಗಿರಿಜನರ ಹೆಣ್ಣುಮಕ್ಕಳನ್ನು ನೋಡು- ಎಂದು ಹೇಳಬಲ್ಲವನಾಗಿದ್ದ.

ಬುದ್ಧ ಪೂರ್ಣಿಮೆ ವಿಶೇಷ: ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ…
ಮುಖ್ಯವಾಗಿ ಈ ಸತ್ಯಶೋಧಕ ಸಿದ್ಧಾರ್ಥನ ಎದುರು ಜನ ಯಕ್ಷಿಣಿಗಾಗಿ, ಪವಾಡಕ್ಕಾಗಿ ಸೇರುತ್ತಿರಲಿಲ್ಲ. ಆತನ ಪ್ರೀತಿಯ ಸಂಗಕ್ಕಾಗಿ, ಆತನ ತಾಯ್ತನಕ್ಕಾಗಿ ಸೇರುತ್ತಿದ್ದರು. ನೊಂದ, ಅನ್ಯಾಯಕ್ಕೊಳಗಾದ, ಕ್ರೌರ್ಯದಲ್ಲಿ ಬೆಂದವರೆಲ್ಲ ಅಲ್ಲಿ ಪ್ರೀತಿ ಎಂಬ ಜ್ಞಾನದಲ್ಲಿ ಸ್ವಸ್ಥರಾಗುತ್ತಿದ್ದರು.

ಈಗ ಕೇಳಿಕೊಳ್ಳಿ. ಆತ ಇದಕ್ಕಾಗಿ ತನ್ನ ರಾಜ್ಯ ಬಿಟ್ಟಿದ್ದು ಸರಿಯೆ? ಆಡಳಿತಗಾರನಾಗಿ ಏನನ್ನಾದರೂ ಸಾಧಿಸಲು ಆಗುತ್ತಿರಲಿಲ್ಲವೆ? ಇದಕ್ಕೆ ನನ್ನಲ್ಲಿ ಒಂದು ಸಣ್ಣ ಉತ್ತರವಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ, ನೆಹರೂ, ಪಟೇಲರೆಲ್ಲ ಸಂಭ್ರಮದಿಂದ ಕೂಗಾಡುತ್ತಿದ್ದ ದಿನ ಗಾಂಧೀಜಿ ಕಲ್ಕತ್ತಾದಲ್ಲಿ ಒಬ್ಬೊಂಟಿಯಾಗಿ ಓಡಾಡುತ್ತಿದ್ದರು.

ಎರಡೂವರೆ ಸಾವಿರ ವರ್ಷಗಳ ಬಳಿಕ ಬುದ್ಧನ ಅಂಶಗಳನ್ನು ಪಡೆದು ಬಂದ ಗಾಂಧಿ ಪ್ರಧಾನಿಯಾಗಿ ಆಗಲಿ, ರಾಷ್ಟ್ರಾಧ್ಯಕ್ಷರಾಗಿ ಆಗಲೀ ಅಧಿಕಾರ ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ಬಾಪುವಿನದು ಕೂಡ ಬುದ್ಧನ ದಾರಿಯಾಗಿತ್ತು.

ಈತ ಕೂಡ ಸತ್ಯವನ್ನು, ದೇವರನ್ನು ಹುಡುಕುತ್ತಾ ಹೋಗಿ, ಬದುಕಿನ ವಿರೋಧಾಭಾಸಗಳನ್ನು, ಜೀವಸೆಲೆಗಳನ್ನು ಹುಡುಕುತ್ತಾ ಹೋಗಿ ಸರಳ ಕಾಣ್ಕೆಯನ್ನು ಕಂಡುಕೊಂಡಿದ್ದರು. ಈಶ್ವರನಿಗಾಗಿ ಹುಡುಕಾಟದಿಂದಾಗಿಯೇ ನಿರೀಶ್ವರವಾದಿಯ ನಿಷ್ಠುರತೆಯನ್ನೂ, ದುರಂತ ಪ್ರಜ್ಞೆಯನ್ನೂ ಪಡೆದುಕೊಂಡಿದ್ದರು. ಸಿದ್ಧಾರ್ಥನಂತೆಯೇ ಕನಿಷ್ಠ ಜೀವಿಯಲ್ಲೂ ಗಾಢ ಪ್ರೀತಯನ್ನು ಇಟ್ಟಿದ್ದ ಗಾಂಧಿ ಮನುಷ್ಯ ತನಗಾಗಿ ಸೃಷ್ಟಿಸಿಕೊಂಡಿರುವ ಜಾತಿ, ಮೂಢನಂಬಿಕೆ, ಕ್ರೌರ್ಯ, ಅಸಹಾಯಕತೆಯನ್ನು ಕಂಡು ತಮ್ಮ ಸರಳ ಸಿದ್ಧಾಂತಗಳನ್ನು ರೂಪಿಸಿಕೊಂಡಿದ್ದರು.

ಸಿದ್ಧಾರ್ಥನನ್ನು ಆತನ ಕಾಣ್ಕೆಯೊಂದಿಗೇ ಹೊರಗಟ್ಟಿದ್ದ ಭಾರತೀಯ ಗಾಂಧಿಯನ್ನೂ ಇಟ್ಟುಕೊಳ್ಳಲಿಕ್ಕಿಲ್ಲ. ಅಂದರೆ ಅವರ ಪ್ರೇಮವನ್ನು, ತಾಯ್ತನವನ್ನು, ಸರಳ ನೆಮ್ಮದಿಯನ್ನು.

ಯಾವ ಅಧಿಕಾರದ ಗದ್ದುಗೆಯೂ, ಸೈನ್ಯದ ಆರ್ಭಟವೂ ಮನುಕುಲಕ್ಕೆ ನೀಡಲಾರದ ಕಾಣಿಕೆ ಇದು.

 

| ಪಿ.ಲಂಕೇಶ್ |

(ಕೃಪೆ: ಟೀಕೆಟಿಪ್ಪಣಿ)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights