ಮೋದಿ ಕರ್ನಾಟಕ ಭೇಟಿ ವಿರೋಧಿಸಿ ಟ್ವಿಟ್ಟರ್ ನಲ್ಲಿ ‘ಗೋ ಬ್ಯಾಕ್ ಮೋದಿ’ಅಭಿಯಾನ

ಮೋದಿ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಖಾಸಗಿ ಭೇಟಿ ನೀಡಿದ್ದು, ಮಠದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಈ ಮಧ್ಯೆ ಪ್ರಧಾನಿ ಮೋದಿ ಕರ್ನಾಟಕ ಭೇಟಿ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ‘ ಗೋ ಬ್ಯಾಕ್ ಮೋದಿ’ ಟ್ರೆಂಡ್ ಆಗಿದೆ.

ಪ್ರಮುಖವಾಗಿ ನೆರೆ ಪರಿಹಾರದಲ್ಲಿ ವಿಳಂಬ, ಕಳಸಾ ಬಂಡೂರಿ ವಿವಾದ ಹಾಗೂ ಬೆಳಗಾವಿ ಗಡಿ ವಿವಾದ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಕೇಂದ್ರ ಧ್ವನಿಯಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

 

ರಾಜ್ಯದಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಿಸಿತ್ತು. ಆದರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸಿದೆ ಎಂದು ಕೆಲವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತ್ಯಜಿಸಿ ಬಿಜೆಪಿ ಸೇರಿದ ಶಾಸಕರಿಗೆ ತಲಾ 100 ಕೋಟಿ ರೂ. ನೀಡಲಾಗಿದೆ. ಅಂದರೆ 15 ಶಾಸಕಿಗೆ ಒಟ್ಟು 1,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ ನೆರೆಪರಿಹಾರಕ್ಕೆ 8 ಲಕ್ಷಕ್ಕೂ ಅಧಿಕ ಜನಸಂಖ್ಯೆಗೆ ಕೇವಲ 1,800 ಕೋಟಿ ರೂ. ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಕೆಪಿಸಿಸಿ ಕೂಡ ಪ್ರಧಾನಿ ಮೋದಿ ಅವರ ರಾಜ್ಯ ಪ್ರವಾಸವನ್ನು ವಿರೋಧಿಸಿದ್ದು, ತುಮಕೂರಿಗೆ ಭೇಟಿ ನೀಡಿರುವ ಪ್ರಧಾನಿ ಜಿಲ್ಲೆಯ ಅಭಿವೃದ್ಧಿಗಾಗಿ ಈ ಹಿಂದೆ ನೀಡಿದ್ದ ಭರವಸೆಗಳು ಏನಾದವು ಎಂದು ಪ್ರಶ್ನಿಸಿದೆ.

ಪ್ರಧಾನಿ ಮೋದಿ ಈ ಹಿಂದೆ ತಮಿಳುನಾಡಿಗೂ ಭೇಟಿ ನೀಡಿದ್ದಾಗ ‘ಗೋ ಬ್ಯಾಕ್ ಮೋದಿ’ ಅಭಿಮಾನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights