ಮೌಢ್ಯದ ವಿರುದ್ಧ ಸಿದ್ದರಾಮಯ್ಯ; ಕೆಪಿಸಿಸಿ ಕಛೇರಿಯಲ್ಲಿ ಹೋಮ ಮಾಡಿಸಿದ ಡಿಕೆಶಿ!
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದರು. ಆ ಸಮಯದಲ್ಲಿ ಹೆಚ್ಚಾಗಿದ್ದ ಮಡೆ-ಮಡೆ ಸ್ನಾನಗಳಂತಹ ಮೌಢ್ಯಾಚರಣೆಗಳನ್ನು ನಿಷೇಧಿಸಲು ಮೌಢ್ಯ ನಿಷೇಧ ಕಾಯ್ದೆಯ ಜಾರಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದರೂ, ಬಹುಮತದ ಬೆಂಬಲ ಸಿಗದ ಕಾರಣ ಕಾಯ್ದೆ ಜಾರಿಯಾಗಲಿಲ್ಲ.
ಆದರೆ, ಈಗ ಕರ್ನಾಟಕ ಕಾಂಗ್ರೆಸ್ನ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿಯೇ ಹೋಮ-ಹವನ ಮಾಡಿಸಿದ್ದಾರೆ. ಇದು ಸಿದ್ದರಾಮಯ್ಯನವರ ಮೌಢ್ಯ ನಿಷೇಧಕ್ಕೆ ಕಾಂಗ್ರೆಸ್ನ ಅಧ್ಯಕ್ಷರೇ ಬೆಂಬಲಿಸುವುದಿಲ್ಲ ಎಂಬಂತಾಗಿದೆ.
ಎಲ್ಲರ ಒಳಿತಿಗಾಗಿ, ಎಲ್ಲಾ ವಿಘ್ನಗಳನ್ನು ತೊಡೆದು, ಸಕಲ ಕಾರ್ಯಗಳು ಸರಾಗವಾಗಿ ಸಾಗಲಿ ಎಂದು ಪ್ರಾರ್ಥಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಕೆಪಿಸಿಸಿಯ ನೂತನ ಕಚೇರಿಯಲ್ಲಿ ಹೋಮ-ಹವನ ಮಾಡಲಾಗಿದೆ.
ಮೂವರು ಅರ್ಚಕರಿಂದ ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ ನಡೆದಿವೆ.

ಎಲ್ಲಾ ವಿಘ್ನಗಳು ನಿವಾರಣೆಯಾಗಲಿ ಎಂದು ಶುಭ ಮೂಹೂರ್ತದಲ್ಲಿ ಪೂಜೆ ಆರಂಭಿಸಿದ್ದೇವೆ. ಎರಡು ವರ್ಷಗಳಿಂದ ನೂತನ ಕಟ್ಟಡ ಕಾಮಗಾರಿ ನಿಂತುಹೋಗಿತ್ತು. ಅದು ಈಗ ಸಂಪೂರ್ಣವಾಗಿದೆ. ಈ ರಾಜ್ಯಕ್ಕೆ, ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದೀವಿ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ ಎಂದು ಡಿಕೆಶಿ ಹೇಳಿದರು.
ರಾಜ್ಯದಿಂದ ಕೊರೊನಾ ಓಡಿಸಲು ಹೋಮ ಸರಾಗವಾಗಿ ಸಾಗಿದೆ. ರಾಜ್ಯದಿಂದಲೇ ಮೌಢ್ಯವನ್ನು ಕಾನೂನಿನ ಮೂಲಕ ಓಡಿಸಲು ಮುಂದಾಗಿದ್ದ ಸಿದ್ದರಾಮಯ್ಯನವರಿಗೆ ಇದು ನಿಜಕ್ಕೂ ಶಾಕ್ ಕೊಟ್ಟಿರಬೇಕು. ತಮ್ಮ ಪಕ್ಷದೊಳಗೆಯೇ ಕೊರೊನಾ ಓಡಿಸಲು ಹೋಮ ಮಾಡಿಸುತ್ತಿರುವಂತಹ ಮೌಢ್ಯವನ್ನು ಸಿದ್ದರಾಮಯ್ಯನವರು ಬೆರಗಾಗುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ, ತಮ್ಮದೇ ಪಕ್ಷದವರು ತಮ್ಮ ಮಾತು ಕೇಳದೇ ಇರುವಾಗ ಜನ ಕೇಳುತ್ತಾರೆಯೇ ಎಂಬ ಗೊಂದಲವೂ ಉಂಟಾಗಿರಲಾರದು.

