ರಮ್ಯ ತಾಣ ಮನಮೋಹಕ, ಭಯಾನಕ ಬಲ್ಲಾಳರಾಯನ ದುರ್ಗ..!

ಅದು ಹಸಿರ ಪ್ರಕೃತಿಯ ನಡುವೆ ಸುಂದರ ಹಾಗೂ ಚಾರಿತ್ರಿಕ ರಮ್ಯ ತಾಣ. ಪ್ರತಿ ಪ್ರವಾಸಿಗರಿಗೂ ಸವಾಲೆಸೆಯುವ ದುರ್ಗಮ ತಾಣ. ಅಲ್ಲಿ ಪ್ರಾಚೀನ ಗತವೈಭವದ ವಿಶೇಷತೆ ಕಳೆದುಕೊಂಡಿದ್ರೂ ನಿಸರ್ಗದ ಚೆಲುವು ಮಾಸದೆ ಪರಿಸರ ಪ್ರಿಯರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತದೆ. ಅಂದಾಗೆ ಟ್ರೆಕ್ಕಿಂಗ್ ಪ್ರಿಯರ ಹಾಟ್ ಫೆವರೀಟ್ ಸ್ಪಾಟ್, ಆ ರಮಣೀಯ ತಾಣವೇ ಬಲ್ಲಾಳರಾಯನ ದುರ್ಗದ ಕೋಟೆ.

ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣೋ ಸ್ವರ್ಗದ ಚೆಲುವು. ಹಾಗೇ ದಿಟ್ಟಿಸಿ ನೋಡುತ್ತಾ ಹೋದರೆ ಅಂತ್ಯವೇ ಇಲ್ಲವೇನೋ ಎಂಬಂತೆ ಕಾಣುವ ಕೋಟೆಯ ಬೃಹದಾಕಾರದ ಗೋಡೆ. ಪ್ರತಿ ಹೆಜ್ಜೆ ಹೆಜ್ಜೆಯು ಪ್ರವಾಸಿಗರಿಗೆ ಸವಾಲು ಎಸೆಯುವ ನಿಸರ್ಗದ ತಾಣ. ಅಂದಾಗೆ ಇದು ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಬಲ್ಲಾಳರಾಯನ ದುರ್ಗದ ಕೋಟೆ. ರುದ್ರ ರಮಣೀಯವಾಗಿ ಕಾಣುವ ಈ ಸ್ಥಳವನ್ನ ನೋಡಲು ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಟ್ರಕ್ಕಿಂಗ್ ಪ್ರಿಯರಿಗಂತೂ ಬಲ್ಲರಾಯನದುರ್ಗವನ್ನ ಹತ್ತೊದು ಅಂದ್ರೆ ಎಲ್ಲಿಲ್ಲದ ಉತ್ಸಾಹ. ದುರ್ಗದಹಳ್ಳಿಯ ಎಂಡ್ ಪಾಯಿಂಟ್ನಲ್ಲಿ ವಾಹನಗಳನ್ನ ನಿಲ್ಲಿಸಿ, ಅರ್ಧ ಕೀಲೋ ಮೀಟರ್ ದೂರ ಸಾಗಿದ್ರೆ, ವ್ಹಾವ್ ಅನ್ನೋ ವ್ಹೀವ್ ಪಾಯಿಂಟ್ ಕಣ್ಣಿಗೆ ಬೀಳುತ್ತೆ.. ಈ ಸ್ಪಾಟ್ನಲ್ಲಿ ನಿಂತು ಸುತ್ತಲೂ ನೋಡಿದ್ರೆ, ವಿಹಂಗಮ ನೋಟ ಕಣ್ಣಿಗೆ ಕಾಣ ಸಿಗುತ್ತೆ. ಎಲ್ಲೆಲ್ಲೂ ಹಸಿರ ವನರಾಶಿಯ ದರ್ಶನ, ನಿಜಕ್ಕೂ ಮತ್ತೊಂದು ಲೋಕಕ್ಕೆ ಕೊಂಡ್ಯೊಯ್ಯುತ್ತೆ. ಇಲ್ಲಿ ನಿಂತು ಪ್ರವಾಸಿಗರು ಪೋಟೋ ಕ್ಲಿಕ್ಕಿಸಿಕೊಳ್ಳೋದು, ಸೆಲ್ಫಿ ತೆಗೆದುಕೊಳ್ಳೋದನ್ನ ಮಿಸ್ ಮಾಡೋದಿಲ್ಲ. ಅಲ್ಲದೇ ಈ ಫೇವರಿಟ್ ಸ್ಪಾಟಲ್ಲಿ ಕುಣಿದು ಕುಪ್ಪಳಿಸಿ, ಸಖತ್ ಎಂಜಾಯ್ ಮಾಡ್ತಾರೆ ಟೂರಿಸ್ಟ್.

 

ಒಂದು ಕಾಲದಲ್ಲಿ ಐತಿಹಾಸಿಕ ಸ್ಥಳವಾಗಿದ್ದ ಈ ಕೋಟೆಯನ್ನ ಒಂದನೇ ಬಲ್ಲಾಳರಾಯ, ರಕ್ಷಣಾ ಕೋಟೆಯನ್ನಾಗಿ ಈ ದುರ್ಗ ಅರ್ಥಾತ್ ಕೋಟೆಯನ್ನು ರಚಿಸಿದರೆಂಬ ಇತಿಹಾಸವಿದೆ. ಗತ ವೈಭವವನ್ನು ಸಾರುವ ಕಲ್ಲಿನಿಂದ ನಿರ್ಮಾಣವಾಗಿರುವ ಬೃಹದಾಕಾರದ ಗೋಡೆಗಳಿಂದ ನಿರ್ಮಾಣವಾಗಿದ್ದ ಕೋಟೆ ಇಂದಿಗೂ ಅಚ್ಚರಿ ಮೂಡಿಸುತ್ತದೆ. ಕಣ್ಣು ಹಾಯಿಸಿದಷ್ಟು ದೂರ ಗೋಚರವಾಗುವ ಹಸಿರ ಪರ್ವತ ರಾಶಿ ನೋಡುಗರ ಮನಸೂರೆಗೊಳ್ಳುವುದು ಒಂದೆಡೆಯಾದರೆ ಮತ್ತೊಂದೆಡೆ ಕಾಣುವ ಪ್ರಪಾತ ಎಂತಹ ಗಟ್ಟಿ ಹೃದಯದವರನ್ನು ಒಮ್ಮೆ ನಡುಗಿಸುವಂತೆ ಮಾಡುತ್ತದೆ. ಇನ್ನು ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಹೇಳಲು ಪದಗಳು ಸಾಲುವುದಿಲ್ಲ. ಸುತ್ತಲೂ ನೋಡುಗರನ್ನು ಪರ್ವತಗಳು ಆಕರ್ಷಿಸಿದರೆ ಮತ್ತೊಂದೆಡೆ ಪರ್ವತಗಳ ನಡುವೆ ಮಂಜು ಮುಸುಕಿದ ನೋಟ ಪ್ರವಾಸಿಗರನ್ನ ಬೆರಗುಗೊಳಿಸುತ್ತದೆ. ಇಲ್ಲಿನ ಮತ್ತೊಂದು ವಿಸ್ಮಯವೆಂದರೆ ರಾಣಿ ಝರಿ ಎಂಬ ಪ್ರದೇಶ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗಡಿ ರೇಖೆಯಾಗಿದೆ. ರಾಣಿಝರಿ ಪರ್ವತವನ್ನು ನೋಡುತ್ತಿದ್ದರೆ ಯಾವುದೋ ಹಿಮಾಲಯ ಪರ್ವತದ ರಾಶಿಯನ್ನು ನೋಡಿದಷ್ಟು ಭಯಾನಕವಾಗಿದೆ.

ಬಲ್ಲಾಳರಾಯನ ಕೋಟೆಯ ವ್ಹೀವ್ ಪಾಯಿಂಟ್ ಆಗಿರೋ ರಾಣಿಝರಿಯ ನೋಟ, ಒಂದೊಂದು ಸೀಸನ್ನಲ್ಲಿ ಒಂದೊಂದು ರೀತಿ ಮನಮೋಹಕವಾಗಿ ಗೋಚರಿಸುತ್ತದೆ. ಮಳೆಗಾಲದ ಮಂಜು, ರಾಣಿಝರಿಯನ್ನ ಮುತ್ತಿಕ್ಕುತ್ತಿದ್ದರೆ ಕಣ್ಣಿಗೆ ಹಬ್ಬ. ಒಟ್ನಲ್ಲಿ ಮನಮೋಹಕವಾದ ಬಲ್ಲಾಳರಾಯನದುರ್ಗದ ಪಯಣ ನಿಮಗೆ ಥ್ರಿಲ್ ಕೊಡೋದ್ರಲ್ಲಿ ನೋ ಡೌಟ್..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights