ಕೂಲ್ ಕ್ಯಾಪ್ಟನ್ ಧೋನಿಯನ್ನೂ ಕಾಡುತ್ತಿದೆ ಹಕ್ಕಿಜ್ವರ; ಧೋನಿಯ ಕನಸು ಭಂಗ!
ಟೀಂ ಇಂಡಿಯಾ ತಂಡದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಧೋನಿಗೂ ಕೂಡ ಹಕ್ಕಿಜ್ವರದ ಭೀತಿ ಆವರಿಸಿದೆ. ಕಡಕನಾಥ್ ತಳಿಯ ಕೋಳಿ ಸಾಕಬೇಕು ಎಂದು ಉದ್ದೇಶಿಸಿದ್ದ ಧೋನಿಯ ಯೋಜನೆಗೆ ಹಕ್ಕಿ ಜ್ವರ ತಣ್ಣೀರು ಎರಚಿದೆ.
ರಾಂಚಿಯಲ್ಲಿರುವ ಧೋನಿಯವರ ಫಾರ್ಮ್ಗೆ ಭೋಪಾಲ್ನ ಫಾರ್ಮ್ನಿಂದ ಕೋಳಿಗಳನ್ನು ತರಲು ಉದ್ದೇಶಿಸಲಾಗಿತ್ತು. ಆದರೆ, ಆ ಫಾರ್ಮ್ನಲ್ಲಿ ಕೋಳಿಯೊಂದಕ್ಕೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಧೋನಿಯವರ ಫಾರ್ಮ್ಗೆ ಕಳಿಸಬೇಕಿದ್ದ 2000 ಕಡಕನಾಥ್ ಕೋಳಿಗಳನ್ನು ಕೊಲ್ಲಲಾಗಿದೆ.
ಧೋನಿಯ ಫಾರ್ಮ್ ಮ್ಯಾನೇಜರ್ ಕಳೆದ ವರ್ಷ ಆಗಸ್ಟ್ನಲ್ಲಿ ಕಡಕ್ನಾಥ್ ಆ್ಯಪ್ ಮೂಲಕ ಮಧ್ಯಪ್ರದೇಶದ ಕೋಳಿಗಳನ್ನು ಕಳಿಸಬೇಕು ಎಂದು ಕೇಳಿದ್ದರು. ಫರ್ಮ್ಗೆ ಕೋಳಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ಜಬುವಾ ಜಿಲ್ಲೆಯ ವಿನೋದ್ ಮೆಡಾ ಎಂಬವರಿಗೆ ನೀಡಲಾಗಿತ್ತು.
ಇದನ್ನೂ ಓದಿ: ಕೊರೊನಾ ನಡುವೆ ಹಕ್ಕಿಜ್ವರದ ಹಾವಳಿ; 36,000 ಬಾತುಕೋಳಿಗಳನ್ನು ಕೊಂದ ಸರ್ಕಾರ!
ಸಾಗಾಣಿಕೆಗೂ ಮುನ್ನ 4 ಕೋಳಿಗಳಿಗೆ ಪರೀಕ್ಷೆ ಮಾಡಲಾಗಿದ್ದು, ಒಂದು ಕೋಳಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಕೋಳಿಗಳನ್ನು ಕೊಲ್ಲಲಾಗಿದೆ.
ಕಡಕನಾಥ ಕೋಳಿಗಳು ವಿಶಿಷ್ಟ ತಳಿಯವಾದ್ದು, ಇವುಗಳ ದೇಹ ಮತ್ತು ಮಾಂಸದ ಬಣ್ಣ ಕಪ್ಪಾಗಿರುತ್ತದೆ. ಈ ಕೋಳಿಗಳ ಮಾಂಸವು ಹಲವು ರೋಗಗಳಿಗೆ ಮದ್ದು ಕೂಡ ಎಂದು ಹೇಳಲಾಗಿದ್ದು, ಇವುಗಳಿಗೆ ಬೇಡಿಕೆ ಜಾಸ್ತಿ ಎಂದು ಹೇಳಲಾಗುತ್ತಿದೆ. ಇವುಗಳನ್ನು ಮಧ್ಯ ಭಾರತದಲ್ಲಿ ಹೆಚ್ಚಾಗಿ ಸಾಕಲಾಗುತ್ತಿದೆ.
ಇದನ್ನೂ ಓದಿ: ಕೇರಳದಲ್ಲಿ ಹಕ್ಕಿಜ್ವರ: ಮೈಸೂರು, ಕೊಡಗು ಜಿಲ್ಲೆಯಲ್ಲಿ ಮುನ್ನಚ್ಚರಿಕೆಗೆ ಸೂಚನೆ!

