ಕೇರಳದಲ್ಲಿ ಹಕ್ಕಿಜ್ವರ: ಮೈಸೂರು, ಕೊಡಗು ಜಿಲ್ಲೆಯಲ್ಲಿ ಮುನ್ನಚ್ಚರಿಕೆಗೆ ಸೂಚನೆ!

ನೆರೆಯ ಕೇರಳ ರಾಜ್ಯದ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲಾ ವ್ಯಾಪ್ತಿಯ ಬಾತುಕೋಳಿಗಳಲ್ಲಿ ಕೋಳಿ ಶೀತಜ್ವರ ಕಂಡುಬಂದಿದ್ದು, ಈ ಹಿನ್ನೆಲೆ ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿಯೂ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೋಳಿಗಳಿಗೆ ಶೀತಜ್ವರ (ಹಕ್ಕಿಜ್ವರ) ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದ್ದಾರೆ.

ಕೊಡಗು ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ ಭಾಗದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ, ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಆಗಮಿಸುವ ಕೋಳಿ ಹಾಗೂ ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಯ ವಾಹನಗಳನ್ನು ಪರಿಶೀಲಿಸುವುದರ ಜೊತೆಗೆ, ಸಾಗಾಣಿಕೆ ವಾಹನಗಳನ್ನು ಸ್ಯಾನಿಟೈಸರ್ ಮಾಡಿ ಜಿಲ್ಲೆಯ ಒಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದ್ದಾರೆ.

ಚೆಕ್‌ಪೋಸ್ಟ್ ಸ್ಥಾಪನೆ ಮತ್ತು ಅಗತ್ಯ ಸಹಕಾರಕ್ಕೆ ಅರಣ್ಯ, ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳು ಸಹಕಾರ ನೀಡಲಿದ್ದು, ಈ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಹಕ್ಕಿಜ್ವರ ನಿಯಂತ್ರಣ ಸಂಬಂಧ ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿಯಂತೆ ಗಡಿಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯ ಕೇರಳ ರಾಜ್ಯದ ಗಡಿಭಾಗದಲ್ಲಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಅರಣ್ಯ, ಪೊಲೀಸ್, ಸಾರಿಗೆ, ಆರೋಗ್ಯ, ಪಂಚಾಯತ್ ರಾಜ್ ಇಲಾಖೆಗಳ ಸಹಕಾರ ಅತ್ಯಗತ್ಯ. ಅಸ್ವಾಭಾವಿಕವಾಗಿ ಕೋಳಿ ಅಥವಾ ವನ್ಯ ಪಕ್ಷಿಗಳ ಮರಣ ಕಂಡುಬಂದಲ್ಲಿ ಈ ಬಗ್ಗೆ ಗಮನಹರಿಸಿ ವರದಿ ಸಲ್ಲಿಸಲಾಗುವುದು ಎಂದರು.

ಇದನ್ನೂ ಓದಿ: ಮೈಸೂರಿನಲ್ಲಿ ಮುಂದುವರಿದ ಪಕ್ಷಿಗಳ ಮರಣ ಮೃದಂಗ : ಹೆಚ್ಚಾದ ಕೊಕ್ಕರೆಗಳ ಸಾವಿನ ಸಂಖ್ಯೆ

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಚಿದಾನಂದ ಅವರು ಹಕ್ಕಿಜ್ವರವು ಪಕ್ಷಿಗಳು ಹಾಗೂ ಕೋಳಿ ಮತ್ತಿತರ ಮೂಲಕ ಹರಡುವ ಸಾಧ್ಯತೆ ಇದ್ದು, ಕೇರಳ ರಾಜ್ಯದಲ್ಲಿ ಕಂಡು ಬಂದಿರುವುದರಿಂದ ಕೇರಳ ರಾಜ್ಯದ ಗಡಿಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೋಳಿ ಮತ್ತು ಪಕ್ಷಿಗಳ ರಕ್ತ ಹಾಗೂ ಇಕ್ಕೆ ಮಾದರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕೇರಳ ರಾಜ್ಯದ ಹಲವೆಡೆ ಬಾತುಕೋಳಿಗಳಲ್ಲಿ ಹಕ್ಕಿಜ್ವದ ಲಕ್ಷಣಗಳು ಕಂಡು ಬಂದಿವೆ. ಜತೆಗೆ 50ಸಾವಿರ ಬಾತುಕೋಳಿಗಳನ್ನು ಹತ್ಯೆ ಮಾಡಲು ಕೇರಳ ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳದಿಂದ ಮೈಸೂರು ಜಿಲ್ಲೆ ಮಾರ್ಗವಾಗಿ ಕರ್ನಾಟಕಕ್ಕೆ ಬರುವ ಕೋಳಿಗಳು, ಪಕ್ಷಿಗಳ ಸಾಗಣೆಗೆ ನಿರ್ಬಂಧ ವಿಧಿಸಲಾಗಿದೆ.

ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಬಾವಲಿ ಚೆಕ್‍ಪೋಸ್ಟ್ ಮೂಲಕ ಕೋಳಿ ಹಾಗೂ ಪಕ್ಷಿಗಳ ಸಾಗಣೆಗೆ ನಿಷೇಧ ಹೇರಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ಕೇರಳದಿಂದ ಬಾವಲಿ ಚೆಕ್‍ಪೋಸ್ಟ್ ಮೂಲಕ ಬರುವ ವಾಹನಗಳನ್ನು ಸ್ಯಾನಿಟೈಸ್ ಮಾಡಲು ಸೂಚನೆ ನೀಡಲಾಗಿದೆ. ಜತೆಗೆ ಕೋಳಿಗಳು, ನಾಟಿಕೋಳಿಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳಲ್ಲಿ ಅಸ್ವಾಭಾವಿಕ ಲಕ್ಷಣಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: ಕೊರೊನಾ ನಡುವೆ ಹಕ್ಕಿಜ್ವರದ ಹಾವಳಿ; 36,000 ಬಾತುಕೋಳಿಗಳನ್ನು ಕೊಂದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights