ಕಣವಿ ಕಾರ್ನರ್‌: ಮಾಜಿ ಕ್ರಿಕೆಟಿಗ ಯಶಪಾಲ ಶರ್ಮಾ – ಸಣ್ಣ ನೆನಪು!

ಇಂದು ಮಧ್ಯಾಹ್ನ, ಸುಮಾರು ೧೨ ಗಂಟೆಗೆ ಮಲ್ಲೇಶ್ವರದ ಉತ್ತರ ಕರ್ನಾಟಕದ ಅಂಗಡಿಯಲ್ಲಿ, ರೊಟ್ಟಿ ತೆಗೆದುಕೊಳ್ಳುವಾಗ ದೂರದ ಚೆನೈನಿಂದ ಕ್ರಿಕೆಟ್ ಮಿತ್ರ ಪಟ್ಟಾಭಿಯಿಂದ ಅಪ್ಪಳಿಸಿತು. ಆ Message “ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ, ಯಶಪಾಲ ಶರ್ಮಾ ಇನ್ನಿಲ್ಲ” ಕೇವಲ ೬೬ ವರ್ಷದ ಶಾಖಾಹಾರಿ, ಮದ್ಯ ಮುಟ್ಟದ, ತಮ್ಮ ನಿತ್ಯ ಬೆಳಗಿನ ವಾಕಿಂಗ್‌ಗೆ ಹೆಸರಾದ, ರಾತ್ರಿ ಬರೀ Soup ಕುಡಿಯುವ, ಕೇವಲ ೬೬ ವರ್ಷದ ಯಶಪಾಲ ಶರ್ಮಾ ಹಠಾತ್ ಕಣ್ಮರೆಯಾಗಿದ್ದು, Shocking ಹಾಗೂ ವಿಚಿತ್ರ ಅನುಭವ, Fitness Routineಗೆ ಬೆಲೆ ಇಲ್ಲವೇ ಅಥವಾ ಅದು ಶೂನ್ಯವೇ? ಎಂದು ಶಂಕಿಸುವುದು ಸ್ವಾಭಾವಿಕ.

೧೯೭೭ರಲ್ಲಿ ನಾನು ಧಾರವಾಡದಿಂದ ಬೆಂಗಳೂರಿಗೆ ಬಂದಿದ್ದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತರ ಹಾಗೂ ದಕ್ಷಿಣ ವಲಯಗಳ ಮಧ್ಯೆ Duleep Trophy ಪಂದ್ಯ. ಹೌದು, ಆಗ ಎಲ್ಲ ಟೆಸ್ಟ್ ಆಟಗಾರರೂ ದೇಸೀ ಪಂದ್ಯಗಳಲ್ಲಿ ತಪ್ಪದೇ ಆಡುತ್ತಿದ್ದರು ಹಾಗೂ ಇವೆಲ್ಲ Selection Trial Matches ಆಗುತ್ತಿದ್ದವು. ಅತ್ತ ಕಪಿಲದೇವ್, ಬೇಡಿ, ಮದನಲಾಲ, ಇತ್ತ ಪ್ರಸನ್ನ, ಚಂದ್ರಶೇಖರ್, ವೆಂಕಟರಾಘವನ್ ಆದರೆ, ಬೃಹತ್ ಸೆಂಚುರಿ ಬಾರಿಸಿ ತಮ್ಮ ಮೊದಲ ದೊಡ್ಡ ಪಂದ್ಯವನ್ನು ಆಡುತ್ತಿದ್ದ ೨೨ ವರ್ಷದ ಯಶಪಾಲ ಶರ್ಮಾ ಮಿಂಚಿದರು. ನಂತರ ನಾವೆಲ್ಲ ಆದಿನದ ಪಂದ್ಯ ಮುಗಿದ ಮೇಲೆ, ಆಟಗಾರರನ್ನು ಹತ್ತಿರದಿಂದ ನೋಡಲು ಪೆವೆಲಿಯನ್ ಕೆಳಗಡೆ ನಿಂತಾಗ Bell Bottom Pant ಹಾಗೂ ಪಟ್ಟಾಪಟ್ಟಿ ಶರ್ಟ್ ಹಾಕಿಕೊಂಡು ಕೆಳಗಿಳಿದು ಬಂದು, ವಾಪಸ್ಸು ಹೋಟೆಲ್‌ಗೆ ಹೋಗಲು ತಯಾರಾಗಿದ್ದ ಕೆಂಪು KSRTC ಬಸ್‌ನಲ್ಲಿ ಹತ್ತಿ ಹೋಗಿದ್ದು ಇನ್ನೂ ನೆನಪಿದೆ. ಆದರೂ ಯಶಪಾಲ ಮುಂದಿನ ಆಷ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಲಿಲ್ಲ.

ಅಮೇಲೆ ನಾವು ನಿಜವಾಗಿಯೂ ಮುಖಾಮುಖಿಯಾಗಿದ್ದು ೧೯೭೮ರ ಫೆಬ್ರವರಿಯ ಕೊರೆಯುತ್ತಿರುವ Lucknow ಚಳಿಯಲ್ಲಿ. ಆಗ ಯಶಪಾಲ FCI ಪರವಾಗಿ ಆಡುತ್ತಿದ್ದರು. ನಾನು ಆಗ ಕ್ರಿಕೆಟ್ ಆಟಗಾರನಾಗಿ ಮೈಸೂರು ಬ್ಯಾಂಕ್‌ಗೆ ಸೇರುವ ಹೊಸತಿಲಲ್ಲಿದ್ದೆ. ಆಮಂತ್ರಿತ ಆಟಗಾರನಾಗಿ All India FCI ಪರವಾಗಿ Lucknowನ ಪ್ರತಿಷ್ಠಿತ Sir Frank Worrell Trophy ಯಲ್ಲಿ ಆಡುವ ಅವಕಾಶ ಸಿಕ್ಕಿತು. ಅಖಿಲ ಭಾರತ ತಂಡವೆಂದರೆ, ಆಗಿನ ಜನತಾಪಾರ್ಟಿ ತರಹ ಇತ್ತು. ನನ್ನೊಂದಿಗೆ ಮದರಾಸಿನ ಮೂವರು ಇದ್ದರು. ನಾನು ಚಳಿಯಲ್ಲಿ ಗಡಗಡ ನಡುಗಿ ಕೆಮ್ಮುತ್ತಿದ್ದರೆ, ಮದರಾಸಿನ ಮಿತ್ರರು ಜೇಬಿನಿಂದ ತೆಗೆದು ಅದೇನೋ ಗುಟುಕರಿಸುತ್ತಿದ್ದರು. ಆಗ ಮೊದಲ ಬಾರಿ ಯಶಪಾಲ ಹತ್ತಿರ ಹೋಗಿ, ಹಿಂದಿಯಲ್ಲಿ “ತಮ್ಮ ಬೆಂಗಳೂರಿನ ಇನ್ನಿಂಗ್ಸ್ ನೋಡಿದೆ ಅದ್ಭುತವಾಗಿತ್ತು” ಎಂದೆ. ಆಗ ಅವರು ಚಕಿತರಾಗಿ “ದಕ್ಷಿಣದವನಾಗಿ ಹಿಂದಿ ಹೇಗೆ ಚೆನ್ನಾಗಿ ಮಾತನಾಡುವೆ” ಎಂದು ತಮ್ಮ ವಿಶಿಷ್ಟ ಇಂಗ್ಲಿಷ್‌ನಲ್ಲಿ ಕೇಳಿದರು. ಇಂಗ್ಲಿಷ್‌ನಲ್ಲಿ ಮಾತನಾಡಲು ಬಹಳ ಪ್ರಯತ್ನ ಪಡುತ್ತಿದ್ದರು.

ಇದನ್ನೂ ಓದಿ: ಪ್ರಕಾಶ್ ಪಡುಕೋಣೆಯವರ ಜೊತೆಗಿನ ನೆನಪುಗಳು: ಚಂದ್ರಮೌಳಿ ಕಣವಿ

Locknowನ KD Singh Babu Stadium ನಲ್ಲಿ ಮ್ಯಾಚ್‌ ಹಾಗೂ ಅಲ್ಲೇ ಇರುವ Dormitoryಯಲ್ಲಿ ಎಲ್ಲರ ವಾಸ, ರೂಮಿನ ಹಾಸಿಗೆ ಮೇಲೆ ಕುಳಿತು ಮ್ಯಾಚ್ ನೋಡಬಹುದಿತ್ತು. ನಮ್ಮ ನಾಯಕ ಮಾಜಿ ಪೂರ್ವ ವಲಯದ ಬಿಹಾರ್‌ ಆಟಗಾರ ತಿಲಕರಾಜ್, ನನಗೆ ಹೊಸದಾಗಿ ಬ್ಯಾಟಿಂಗ್ ಆರಂಭಿಸಲು ಹೇಳಿದರು. ಎದುರಾಳಿ ಅಶೋಕ್ ಮಲ್ಹೋತ್ರಾರ Haryana state Electricity Board ತಂಡ. ನನ್ನ ಜೊತೆಗಾರ ಬೇಗ ಔಟಾದಾಗ, ಮೂರನೇಯ ಕ್ರಮಾಂಕದಲ್ಲಿ ಬಂದರು ಯಶಪಾಲ. ಆಗ ತೀರಾ ಹತ್ತಿರದಿಂದ ಅವರ ಅಮೋಘ ಪ್ರತಿಭೆ, Attitude ನೋಡುವ ಅವಕಾಶ ಸಿಕ್ಕಿತು. ಬಹಳ Intense Cricketer, ಬಹಳ ವೇಗವಾಗಿ ವಿಕೆಟ್ ಮಧ್ಯೆ ಓಡುತ್ತಿದ್ದರು. ಕೆಲವು ಬಾರಿ ಓಡುವಾಗ ನನ್ನ ಲೆಕ್ಕ ತಪ್ಪುತ್ತಿದ್ದರೂ ಸದ್ಯಕ್ಕೆ ನಾನು ಅವರನ್ನು ರನ್‌ ಔಟ್‌ ಮಾಡಿಸಿಲಿಲ್ಲ. ದೊಡ್ಡ ಜೊತೆಯಾಟ, ಯಶಪಾಲ್‌ ಬೃಹತ್ ಸೆಂಚುರಿ ಬಾರಿಸಿದರೆ, ನನ್ನ ಕೊಡುಗೆ ಕೇವಲ ೬೦ ರನ್. ಅವರಿಂದ ಶಹಭಾಸಗಿರಿ ಪಡೆಯಲಿಲ್ಲ. ಏಕೆಂದರೆ ಅವರದ್ದು ದ್ವಿಶತಕದ ದೂರದೃಷ್ಟಿ. ಮುಂದಿನ ಪಂದ್ಯದಲ್ಲಿ ಕೆಲವೇ ರನ್‌ಗಳಿಗೆ ಔಟಾದಾಗ ಎಷ್ಟು ನೊಂದರೆಂದರೆ ನಮ್ಮ ಇನ್ನಿಂಗ್ಸ್ ಮುಗಿಯುವವರೆಗೂ ಹಾಸಿಗೆ ಬಿಟ್ಟು ಏಳಲಿಲ್ಲ. ಈ ತರಹದ ಹಸಿವು ಅವರನ್ನು ಅಂತರಾಷ್ಟ್ರೀಯ ಕ್ರಿಕೆಟರ್ ಆಗಿ ಮಾಡಿತು. ಆಮೇಲೆ ಅದೇ ವರ್ಷ ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾದರು.

ಭಾರತದ ಪರವಾಗಿ ೧೯೭೮ ರಿಂದ ೧೯೮೩ರವರೆಗೆ ಆಡಿದರೂ, ಅವರ ೧೯೮೩ ಗೆದ್ದ ವಿಶ್ವ ಏಕದಿನ ಕಪ್‌ನಲ್ಲಿ ದಿಟ್ಟ ಬ್ಯಾಂಟಿಗ್, ೧೯೮೧ರಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮದರಾಸು ಟೆಸ್ಟ್‌ನಲ್ಲಿ ನಮ್ಮ GR ವಿಶ್ವನಾಥ್‌ ಜೊತೆಗೂಡಿ ಇಡೀ ದಿನ ಆಡಿ, ಔಟಾಗದೇ ಉಳಿದದ್ದು ಮರೆಯುವ ಹಾಗಿಲ್ಲ. ಮಿಂಚಿನ ಫೀಲ್ಡಿಂಗ್ Action, ಹೆದರಿಸುವಂತಹ ವಿಕೆಟ್ ಮಧ್ಯೆ ಓಟ (ಕೆಲವೊಂದು ಬಾರಿ ಅನವಶ್ಯಕ) ಗ್ಯಾಲರಿ ಪ್ರೇಕ್ಷಕರಿಗೆ ಹೇರಳ ಮನರಂಜನೆ. ಒಬ್ಬ Team Man ಆಗಿ ಮೆರೆದರು. ಮಧ್ಯಮ ವೇಗದ ಹಾಗೂ ಸ್ಪಿನ್ ಬೌಲಿಂಗ್‌ನ ಪ್ರವೀಣ. ಭಾರತೀಯ ತಂಡಕ್ಕೆ ಎಷ್ಟೇ ಉಪಯುಕ್ತರಾಗಿದ್ದರೂ ಕೂಡ, ನಾಯಕ ಗವಾಸ್ಕರ್ ಅವರಿಗೆ ಯಶಪಾಲ ತೀರ ಹತ್ತಿರದವರಾಗಿದ್ದರು. ಅದಕ್ಕೆ ಗವಾಸ್ಕರ್ ನಾಯಕತ್ವದಲ್ಲಿ ನಿಶ್ಚಿತ ಸ್ಥಾನ ಪಡೆಯುತ್ತಿದ್ದರು ಎಂದು ಆಗಿನ ಹಿರಿಯ ಕ್ರಿಕೆಟ್ ಪತ್ರಕರ್ತ ದಿ. ರಾಜನ್ ಬಾಲಾ ಅವರು ತಮ್ಮ ಅಂಕಣಗಳಲ್ಲಿ ಛೇಡಿಸುತ್ತಿದ್ದರೂ, ಯಶಪಾಲ್‌ ಸೊಪ್ಪು ಹಾಕಲಿಲ್ಲ. ಹುಟ್ಟೂರು ಲುಧಿಯಾನಾ ಬಿಟ್ಟು, ದೆಹಲಿಗೆ ಬಂದು ಬಹಳ ವರ್ಷ ಸ್ಟೇಟ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದರು. ಅಷ್ಟರಲ್ಲೇ ಅವರ Nephew (ಈಗಿನ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ ಶರ್ಮಾ) ಭಾರತದ ವೇಗದ ಬೌಲರ್‌ ಆಗಿ ಮಿಂಚಲು ಆರಂಭಿಸಿದ್ದರು. ದೂರದರ್ಶನಕ್ಕೆ ವೀಕ್ಷಕ ವಿವರಣೆ ನೀಡಲು ಬೆಂಗಳೂರಿಗೆ ಬಂದಾಗ, ಯಶಪಾಲ್‌ ನನ್ನೊಡನೆ ಅನ್ಯೋನ್ಯವಾಗಿ ಮಾತನಾಡುತ್ತಿದ್ದರು.

ನಮ್ಮ ಬಾಂಧವ್ಯ ಅಲ್ಲಿಗೇ ಮುಗಿಯಿತು. ಆದರೆ ಅವರ ಇಹಲೋಕದ ಬಾಂಧವ್ಯ ಇಂದು ಕಳಚಿಹೋಯಿತು.

– ಚಂದ್ರ ಮೌಳಿ ಕಣವಿ

ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಶರದ್‌ ಪವಾರ್?; ಊಹಾಪೋಹಗಳಿಗೆ ತೆರೆ ಎಳೆದ ಪವಾರ್!

Spread the love

Leave a Reply

Your email address will not be published. Required fields are marked *