ರಾಜ್ಯಕ್ಕೆ ಬರುತ್ತಿರುವ ಅನಿವಾಸಿ ಭಾರತೀಯರು ಪಾಲಿಸಬೇಕಾದ ಮಾರ್ಗಸೂಚಿಗಳೇನು?

ಕೊರೊನಾ ವೈರಸ್‌ನಿಂದ ಸಂಕಷ್ಟ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗಲ್ಫ್‌ ರಾಷ್ಟ್ರಗಳು, ಯುರೋಪ್‌ ಸೇರಿದಂತೆ ವಿದೇಶಗಳಲ್ಲಿರುವ ಕನ್ನಡಿಗರೂ ರಾಜ್ಯಕ್ಕೆ ಮರಳಲಿದ್ದಾರೆ. ಅನಿವಾಸಿ ಭಾರತೀಯರನ್ನು ರಾಜ್ಯಕ್ಕೆ ಬರಮಾಡಿಕೊಂಡು ಕೊರೊನಾ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿವಿಧ ಹೊರದೇಶಗಳಲ್ಲಿರುವ ಸುಮಾರು 60 ಸಾವಿರ ಭಾರತೀಯರು ಆರಂಭಿಕ ಹಂತದಲ್ಲಿ ಭಾರತಕ್ಕೆ ಹಿಂದಿರುಗಲಿದ್ದಾರೆ. ಇವರಲ್ಲಿ 2786 ಕನ್ನಡಿಗರೂ ಒಳಗೊಂಡಿದ್ದಾರೆ. ವಿದೇಶದಿಂದ ರಾಜ್ಯಕ್ಕೆ ಆಗಮಿಸಲಿರುವವರನ್ನು ತಪಾಸಣೆ ಹಾಗೂ ಕ್ವಾರಂಟೈನ್ ಮಾಡಲು ಸೂಕ್ತ ವ್ಯವಸ್ಥೆಗಳನ್ನು ಸರ್ಕಾರ ಕೈಗೊಂಡಿದೆ.

ಈಗಾಗಲೇ ಮೂರು ವಿಭಾಗಗಳಾಗಿ ವಿಭಜನೆ ಮಾಡಲಾಗಿದ್ದು ಎ ದರ್ಜೆಯ ಪ್ರಯಾಣಿಕರು ಬೆಂಗಳೂರು ನಗರದಲ್ಲಿ ಕ್ವಾರಂಟೈನ್ ಆಗಲಿದ್ದಾರೆ. ಇದಕ್ಕಾಗಿ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ.  ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಉಳಿದವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದ್ದು ಅದಕ್ಕಾಗಿ ಹೋಟೆಲ್‌ಗಳನ್ನು ಈಗಾಗಲೇ ನಿಗದಿ ಮಾಡಲಾಗಿದೆ.

ರಾಜ್ಯಕ್ಕೆ ಆಗಮಿಸಲಿರುವ ವಿದೇಶಿಯರು ಸರ್ಕಾರದ ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೂಚನೆ ನೀಡಿದ್ದಾರೆ. ಬರುವಂತಹಾ ಎಲ್ಲಾ ಪ್ರಯಾಣಿಕರನ್ನು ಆರಂಭದಲ್ಲಿ ಹಾಗೂ 14 ದಿನಗಳ ಬಳಿಕ ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರತಿಯೊಬ್ಬರಿಗೂ 14 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

ಕ್ವಾರಂಟೈನ್‌ನಲ್ಲಿರುವ ಅನಿವಾಸಿ ಭಾರತೀಯರು ಉಳಿದುಕೊಳ್ಳಲು ವಾಶ್ ರೂಂ ಅಟಾಚ್‌ ಆಗಿರುವ ಸಿಂಗಲ್ ರೂಂ ಸೌಲಭ್ಯವೂ ಇರಲಿದೆ. ವಸತಿ ಸೌಕರ್ಯಗಳ ದರವನ್ನು ಸರ್ಕಾರದೊಂದಿಗೆ ಸಮಾಲೋಚಿಸಿ ನಿಗದಿಪಡಿಸಲಾಗುತ್ತದೆ. ಈ ಎಲ್ಲಾ ಸೌಲಭ್ಯಗಳು ಕೊರೊನಾ ಮಾರ್ಗಸೂಚಿಗಳ ಪ್ರಕಾರ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

ಈ ನಡುವೆ ಗಲ್ಫ್‌ ರಾಷ್ಟ್ರದಿಂದ ಕೇರಳಕ್ಕೆ ಆಗಮಿಸಿದವರ ಪೈಕಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದಿದ್ದು ರಾಜ್ಯದಲ್ಲಿ ಇಂತಹ ಪ್ರಕರಣ ಕಂಡುಬರದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂಬ ಮನವಿಯನ್ನು ಅನಿವಾಸಿ ಭಾರತೀಯರು ಮಾಡಿಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸಲು ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಿದೆ.

ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಉತ್ಸುಕವಾಗಿರುವ ಸರ್ಕಾರಗಳು ಇದೇ ದೇಶದಲ್ಲಿದ್ದು, ದೇಶದ ಅಭಿವೃದ್ಧಿಗೆ ಬುನಾದಿಯಾಗಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವಲ್ಲಿ ಮಾಡುತ್ತಿರುವ ದ್ರೋಹ ಮತ್ತು ವಂಚನೆ ಬಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights