ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ: ತಿದ್ದುಪಡಿಗೆ ಬಾಂಗ್ಲಾ ಸರ್ಕಾರ ಅನುಮೋದನೆ!

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅತ್ಯಾಚಾರ, ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಹಾಗಾಗಿ ನಾನಾ ರಾಷ್ಟ್ರಗಳು ದೌರ್ಜನ್ಯ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆಗೆ ಅವಕಾಶ ನೀಡುವ ತಿದ್ದುಪಡಿಯನ್ನು ಬಾಂಗ್ಲಾದೇಶ ಸರ್ಕಾರ ಅನುಮೋದಿಸಿದೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸಾಪ್ತಾಹಿಕ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದಬ್ಬಾಳಿಕೆ ತಡೆ ಕಾಯ್ದೆ-2000ಕ್ಕೆ ತಿದ್ದುಪಡಿಯನ್ನು ಅನುಮೋದಿಸಲಾಗಿದೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಖಾಂಡ್ಕರ್ ಅನ್ವರುಲ್ ಇಸ್ಲಾಂ ತಿಳಿಸಿದ್ದಾರೆ.

ಈ ಮೂಲಕ ಬಾಂಗ್ಲಾದೇಶದಲ್ಲಿ ಅತ್ಯಾಚಾರ ಅಪರಾಧಿಗಳಿಗೆ ವಿಧಿಸಲಾಗುತ್ತಿದ್ದ ಜೀವಾವಧಿ ಶಿಕ್ಷೆಗೆ ತಿದ್ದುಪಡಿ ಬರಲಿದ್ದು, ಇನ್ನು ಮುಂದೆ ಅತ್ಯಾಚಾರಿಗಳಿಗೆ ಮರಣದಂಡನೆ ನೀಡಲು ಸರ್ಕಾರ ನಿರ್ಧರಿಸಿದೆ.

ಸದ್ಯ ಸರ್ಕಾರದ ಈ ಹೊಸ ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ ಸಿಗಬೇಕಿದೆ. ಅ.13 ರಂದು ರಾಷ್ಟ್ರಪತಿಗಳು ಅನುಮೋದನೆ ನೀಡುವ ನಿರೀಕ್ಷೆ ಇದೆ. ಬಳಿಕ ಹೊಸ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಿದ್ದೇವೆ ಎಂದು ಬಾಂಗ್ಲಾದ ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಿಸುಲ್​ ಹುಕ್​ ತಿಳಿಸಿದ್ದಾರೆ.

ಇದನ್ನೂ ಓದಿ: “ಪಕ್ಷದಲ್ಲಿನ ಅತ್ಯಾಚಾರಿಗಳಿಗೆ ಟಿಕೆಟ್ ನೀಡಲಾಗಿದೆ” ಎಂದ ಕಾಂಗ್ರೆಸ್ ಕಾರ್ಯಕರ್ತೆಗೆ ಥಳಿತ…!

ಒಂದು ತಿಂಗಳ ಹಿಂದೆ ಬಾಂಗ್ಲಾದೇಶದ ನೊಖಾಲಿ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಕ್ಟೋಬರ್ 4 ರಂದು ಹಲ್ಲೆಯ ವಿಡಿಯೋ ವೈರಲ್ ಆಗಿದ್ದರಿಂದ ಈ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಪೊಲೀಸರು ಎಂಟು ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ಘಟನೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯದ ವಿರುದ್ಧ ಬಾಂಗ್ಲಾದೇಶ ಇಂತಹ ದೊಡ್ಡ ಪ್ರಮಾಣದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದು ಇದೇ ಮೊದಲು.

ಐನ್ ಓ ಸಲೀಶ್ ಕೇಂದ್ರ (Ain O Salish Center) ಎಂಬ ಮಾನವ ಹಕ್ಕುಗಳ ಗುಂಪು ಹೇಳುವಂತೆ ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸುಮಾರು 1,000 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. ಅವರಲ್ಲಿ ಐದನೇ ಒಂದು ಭಾಗ ಸಾಮೂಹಿಕ ಅತ್ಯಾಚಾರಗಳು. 975 ಅತ್ಯಾಚಾರ ಸಂತ್ರಸ್ತರಲ್ಲಿ 43 ಮಂದಿ ಹಲ್ಲೆಗೊಳಗಾದ ನಂತರ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದೆ.

ಇನ್ನೊಂದೆಡೆ ಪ್ರಗತಿಪರರು ಮತ್ತು ಹಲವು ಮಹಿಳಾ ಸಂಘಟನೆಗಳು ಅತ್ಯಾಚಾರಕ್ಕೆ ಮರಣದಂಡೆನೆ ಪರಿಹಾರವಲ್ಲ ಎಂದು ವಾದಿಸುತ್ತಿವೆ. “ಕೇವಲ ವಿಕೃತ ಲೈಂಗಿಕತೆಯನ್ನು ಮಾರುತ್ತಿರುವ ಕಂಪೆನಿಗಳಿರುವಾಗ ವ್ಯಕ್ತಿಗಳನ್ನಷ್ಟೇ ಮರಣದಂಡನೆಗೆ ದೂಡುವುದು ಪರಿಹಾರವಲ್ಲ ಎಂಬುದು ಮಾತ್ರವಲ್ಲ; ಬದಲಿಗೆ ಅಂತಹ ಶಿಕ್ಷೆ ಕೊಡುವ ದೇಶಗಳಲ್ಲೂ ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ಹಿಂಸಾಚಾರಗಳು ಹಲವು ವಿಕೃತ ರೂಪಗಳಲ್ಲಿ ಇಂದಿಗೂ ಚಾಲ್ತಿಯಲ್ಲಿವೆ” ಎಂಬುದು ಅವರ ವಾದ.


ಇದನ್ನೂ ಓದಿ: ರೈತರನ್ನು ಭಯೋತ್ಪಾದಕರು ಎಂದಿದ್ದ ನಟಿ ಕಂಗನಾ: ತುಮಕೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights