ರಾಜ್ಯಸಭಾ ಚುನಾವಣಾ ಕಣಕ್ಕಿಳಿಯಲು ದೇವೇಗೌಡರು ಸಮ್ಮತಿ!

ಕರ್ನಾಟಕದಲ್ಲಿ ಜೂನ್‌ 16 ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಲು  ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಸಮ್ಮತಿಸಿದ್ದಾರೆ.

ಕಳೆದ ಒಂದು ವಾರದಿಂದ ದೇವೇಗೌಡರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಗೊಂದಲ ಹಾಗೂ ಚರ್ಚೆಗಳು ನಡೆಯುತ್ತಲೇ ಇದ್ದವು. ಮೂರು ದಿನಗಳ ಹಿಂದೆ ನಡೆದ ಜೆಡಿಎಸ್‌ ಶಾಸಕರ ಸಭೆಯಲ್ಲಿಯೂ ಮೌನ ತಾಳಿದ್ದ ದೇವೇಗೌಡರು ಸ್ಪರ್ಧೆಯ ಬಗ್ಗೆ ಮಾತನಾಡಿರಲಿಲ್ಲ. ಹಾಗಾಗಿ ಸಭೆಯಲ್ಲಿ ಯಾರಿಗೆ ಟಿಕೆಟ್‌ ಕೊಡುವುದು ಎಂದು ನಿರ್ಧರಿಸಿರಲಿಲ್ಲ. ಆದರೂ, ಜೆಡಿಎಸ್‌ ಶಾಸಕರು ದೇವೇಗೌಡರಿಗೆ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದರು.

ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಮಾಜಿ ...

ನಾಳೆಯೇ (ಜೂನ್‌ 09) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ್ದರಿಂದ ರಾಜಕೀಯ ರಂಗದಲ್ಲಿ ಕುತೂಹಲ ಹೆಚ್ಚಾಗಿತ್ತು. ಇಂದು ದೇವೇಗೌಡರು ಚುನಾವಣೆಗ ಸ್ಪರ್ಧಿಸುವುದಾಗಿ ಖಾತ್ರಿ ಪಡಿಸಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಅಲ್ಲದೆ, ಮಂಗಳವಾರ ನಾಮಪತ್ರವನ್ನೂ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

“ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಅವರು ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವರು. ಎಲ್ಲರ ಒಮ್ಮತದ ಅಭಿಪ್ರಾಯಕ್ಕೆ ಸಮ್ಮತಿಸಿದ ದೇವೇಗೌಡರಿಗೆ ಧನ್ಯವಾದಗಳು” ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಜಕೀಯದಲ್ಲಿ ಜನರಿಂದಲೇ ಗೆಲುವು ಸೋಲುಗಳನ್ನು ಕಂಡಿರುವ, ಜನರಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೇರಿದ್ದ ಜನನಾಯಕ ದೇವೇಗೌಡರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಎಲ್ಲರ ಆಶೋತ್ತರಗಳಿಗೆ ಪ್ರೀತಿಪೂರ್ವಕವಾಗಿ ಮಣಿದಿದ್ದಾರೆ. ರಾಜ್ಯಸಭೆಯಲ್ಲಿ ದೇವೇಗೌಡರು ರಾಜ್ಯದ ಅಗ್ರ ಪ್ರತಿನಿಧಿಯಾಗಲಿದ್ದಾರೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜೆಡಿಎಸ್‌ನಿಂದ ದೇವೇಗೌಡರು ಸ್ಪರ್ಧೆ ಮಾಡಬೇಕು ಎಂದು ಜೆಡಿಎಸ್‌ ಶಾಸಕರು ಒತ್ತಾಯಿಸಿದ್ದರು. ಆದರೆ ಮತಗಳ ಕೊರತೆ ಹಿನ್ನೆಲೆಯಲ್ಲಿ ದೇವೇಗೌಡರು ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಈಗ ಕಾಂಗ್ರೆಸ್ ಪಕ್ಷದಿಂದ ಹೆಚ್ಚುವರಿ ಮತಗಳನ್ನು ದೇವೇಗೌಡರಿಗೆ ನೀಡಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಕಾಂಗ್ರೆಸ್‌ಗೆ ತಿಳಿಸಿದ್ದು, ದೇವೇಗೌಡರು ಚುನಾವಣಾ ಕಣಕ್ಕಿಳಿಯಲಿದ್ದಾರೆ.

ರಾಜ್ಯಸಭಾ ಚುನಾವಣೆಗೆ  ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್‌ಡಿ ದೇವೇಗೌಡರು ಸ್ಪರ್ಧೆ ಖಚಿತವಾಗಿದೆ. ಆದರೆ ಇನ್ನೂ ಬಿಜೆಪಿ ಅಭ್ಯರ್ಥಿಗಳು ಯಾರೆಂದು ಘೋಷಣೆಯಾಗಿಲ್ಲ. ರಾಜ್ಯ ಬಿಜೆಪಿಯು ಪ್ರಭಾಕರ ಕೋರೆ, ಉಮೇಶ್‌ ಕತ್ತಿ, ಪ್ರಕಾಶ್‌ ಶೆಟ್ಟಿಯವರ ಹೆಸರನ್ನು ರಾಜ್ಯಸಭೆಗೆ ಶಿಫಾರಸ್ಸು ಮಾಡಿದ್ದು, ಬಿಜೆಪಿ ಹೈಕಮಾಂಡ್‌ ಟಿಕೆಟ್‌ ಯಾರಿಗೆ ಎಂದು ಘೋಷಿಸುವುದು ಬಾಕಿ ಉಳಿದಿದೆ. ಆದರೆ, ಹೈಕಮಾಂಡ್‌ ಇನ್ನೂ ಟಿಕೆಟ್‌ ಘೋಷಣೆ ಮಾಡಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights