ರಾಜ್ಯಸಭಾ ಟಿಕೆಟ್‌ಗಾಗಿ ಸೋದರನ ಪರ ಉಮೇಶ್ ಕತ್ತಿ ಲಾಬಿ; ಯಡಿಯೂರಪ್ಪ ಮಾಡಬಹುದಾದ್ದರೂ ಏನು?

ಕರ್ನಾಟಕದ ನಾಲ್ವರು ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಜೂನ್-ಜುಲೈನಲ್ಲಿ ಅಂತ್ಯಗೊಳ್ಳಲಿದೆ. ಖಾಲಿ ಆಗುವ ರಾಜ್ಯಸಭಾ ಸ್ಥಾನಗಳಿಗೆ ಜೂನ್ 19 ರಂದು ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿರುವ ಮೂರು ಪಕ್ಷಗಳು ಚುನಾವಣೆಗೆ ಸಿದ್ದತೆ ನಡೆಸುತ್ತಿವೆ.

ಕಾಂಗ್ರೆಸ್‌ನಿಂದ ಖರ್ಗೆ ಹಾಗೂ ಕಾಂಗ್ರೆಸ್‌ ಬೆಂಬಲ ನೀಡಿದರೆ ಜೆಡಿಎಸ್‌ನಿಂದ ದೇವೇಗೌಡರು ಕಣಕ್ಕಿಳಿಯುವುದು ಬಹುತೇಕ ನಿಶ್ಚತವಾಗಿದೆ. ಆದರೆ, ಬಿಜೆಪಿಯಲ್ಲಿ ಟಿಕೆಟ್‌ಗಳಿಗಾಗಿ ಪೈಪೋಟಿ ಶುರುವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ನಿಂದ ವಂಚಿತರಾಗಿದ್ದ ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ಪಾಳಯದ ಕೆಲವರು ಅಭಿಪ್ರಾಯ ಮುಂದಿಟ್ಟಿದ್ದಾರೆ. ಈ ನಡುವೆ ಆರೆಸ್ಸೆಸ್‌ ಹಿನ್ನೆಲೆಯಿಂದ ಬಿಜೆಪಿ ಎಂಎಲ್‌ಎ, ಎಂಪಿಗಳಾಗಿರುವವರು  ಆರ್‌ಎಸ್‌ಎಸ್‌ ಮೂಲದ ಪ್ರಭಾಕರ್ ಕೋರೆ ಅವರನ್ನು ಕಣಕ್ಕಳಿಸಬೇಕೆಂದು ಒತ್ತಡ ಹಾಕಿದ್ದಾರೆ ಎಂದು ಕೇಳಿ ಬಂದಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ರಾವ್ ಅವರು ಕರ್ನಾಟಕದಿಂದ ಆಯ್ಕೆ ಬಯಸಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಜಠಿಲವಾಗಿದೆ.

ಇದಲ್ಲದೆ, ಶಾಸಕ ಉಮೇಶ್‌ ಕತ್ತಿಯವರು ತಮ್ಮ ಸಹೋದರ ರಮೇಶ್‌ ಕತ್ತಿಯವರಿಗೆ ರಾಜ್ಯಸಭಾ ಟಿಕೆಟ್‌ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬೆಂಬಿಡದೆ ಕಾಡುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದ ಉಮೇಶ್‌ ಕತ್ತಿ, ಇಂದು ಬೆಳಗ್ಗೆಯೇ ಮತ್ತೆ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

ಇಂದು ಸಿಎಂ ಯಡಿಯೂರಪ್ಪನವರ ಸರ್ಕಾರಿ ನಿವಾಸ ಕಾವೇರಿಗೆ ತೆರಳಿರುವ ಉಮೇಶ್ ಕತ್ತಿ ಮತ್ತೊಮ್ಮೆ ಸಿಎಂ ಜೊತೆಗೆ ಟಿಕೆಟ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಸುಮಾರು ‌ಅರ್ಧ ಗಂಟೆಗಳ ಕಾಲ ಚರ್ಚೆ ನಡೆದಿದೆ. ವಾಕಿಂಗ್ ಮೂಡ್‌ನಲ್ಲಿ ವಿಶ್ರಮಿಸುತ್ತಿದ್ದ ಯಡಿಯೂರಪ್ಪನವರ ತಲೆಗೆ ಬೆಳಗ್ಗೆಯೇ ಟಿಕೆಟ್‌ ಲಾಬಿಯ ಹುಳ ಬಿಟ್ಟಿದ್ದಾರೆ.

ಸದ್ಯಕ್ಕೆ ಯಡಿಯೂರಪ್ಪನವರ ಕೈಯಲ್ಲಿ ಯಾವ ನಿರ್ಧಾರವೂ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗೆ ನೋಡಿದರೆ ಅವರ ಮುಖ್ಯಮಂತ್ರಿ ಸ್ಥಾನಕ್ಕೇ ಸಂಚಕಾರ ಬಂದೊದಗಿದೆ. ಬಿಜೆಪಿಯೊಳಗೆಯೇ ಭಿನ್ನಮತಗಳು ಶುರುವಾಗಿದ್ದು, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಂಚು ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಯಡಿಯೂರಪ್ಪನವರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಮೇಶ್‌ ಕತ್ತಿಯವರ ಲಾಭಿ ತಲೆ ನೋವಾಗಿದೆ. ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯ ನಂತರ ತನಗೆ ಬಿಜೆಪಿಯಲ್ಲಿ ಅಂತಹ ಭವಿಷ್ಯವಿಲ್ಲವೆಂದು ಮನಗಂಡಿರುವ ಯಡಿಯೂರಪ್ಪನವರು ತಮ್ಮ ಅಧಿಕಾರವಾಧಿ ಮುಗಿಯುವುದರೊಳಗೆ ತಮ್ಮ ವರ್ಚನ್ನು ಸಂಫೂರ್ಣ ಬಳಸಿಕೊಳ್ಳಲು ನಿರ್ಧರಿಸಿದಂತಿದ್ದು, ರಾಜ್ಯಸಭಾ ಟಿಕೆಟ್‌ಗೂ ಪ್ರಭಾವ ಬೀರಬಹುದಾದ ಸಾಧ್ಯತೆಗಳಿವೆ.

ಆದರೆ, ಆರೆಸ್ಸೆಸ್‌ನ ಗರಡಿಮನೆಯಲ್ಲಿ ಪಳಗಿದವರನ್ನು ಸಂಸತ್‌ನಲ್ಲಿ ತುಂಬಿಸಲು ಮುಂದಾಗಿರುವ ಬಿಜೆಪಿ ಹೈಕಮಾಂಡ್‌ ಆರೆಸ್ಸೆಸ್‌ ಮೂಲದವರಿಗೆ ಟಿಕೆಟ್‌ ನೀಡಬಹುದಾದ ಸಾಧ್ಯತೆಗಳಿವೆ. ಹಾಗೇನಾದರೂ ಆದಲ್ಲಿ ಉಮೇಶ್‌ ಕತ್ತಿಯವರು ಸಿಎಂ ಮನೆ ಬಾಗಿಲು ಸವೆಸಿದ್ದು ವ್ಯರ್ಥವೇ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights