ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್: ಯಾರಿಗೆ ಬಿಜೆಪಿ ಟಿಕೆಟ್‌!

ಜೂನ್‌ 19 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಅವರಲ್ಲಿ ಇಬ್ಬರನ್ನು ಫೈನಲ್‌ ಮಾಡಲು ಬಿಜೆಪಿ ಹೈಕಮಾಂಡ್‌ಗೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಭಾಗದ ನಾಯಕ ಪ್ರಭಾಕರ್ ಕೋರೆ, ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹಾಗೂ ಮಂಗಳೂರು ಭಾಗದ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರು ಫೈನಲ್ ಮಾಡಲಾಗಿದೆ. ಈ ಮೂವರಲ್ಲಿ ಇಬ್ಬರ ಹೆಸರನ್ನು ಪ್ರಕಟಿಸುವಂತೆ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಮನವಿ ಮಾಡಲಾಗಿದೆ.

ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ನಿರ್ಧರಿಸಿರುವ ರಾಜ್ಯ ಬಿಜೆಪಿ, ಮೊದಲ ಆದ್ಯತೆ ಪ್ರಭಾಕರ್ ಕೋರೆ, ಎರಡನೇ ಆದ್ಯತೆ ಉದ್ಯಮಿ ಪ್ರಕಾಶ್ ಶೆಟ್ಟಿ ಎಂದು ತಿಳಿಸಿದೆ. ಪ್ರಭಾಕರ್ ಕೋರೆಯನ್ನು ಆಯ್ಕೆ ಮಾಡಲು ನಿರಾಕರಿಸಿದರೆ ರಮೇಶ್ ಕತ್ತಿ ಹೆಸರು ಪರಿಗಣಿಸುವಂತೆ ಸಭೆ ಶಿಫಾರಸು ಮಾಡಿದೆ. ಮೂರನೇ ಅಭ್ಯರ್ಥಿ ಯನ್ನು ಕಣಕ್ಕಿಳಿಸುವ ಕುರಿತು ಯಾವುದೇ ನಿರ್ಣಯ ಮಾಡಿಲ್ಲ.

ಸಭೆಯ ನಂತರ ಮಾತನಾಡಿದ ಅರವಿಂದ್ ಲಿಂಬಾವಳಿ, ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡಗೆ ಬೆಂಬಲ ನೀಡುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಆದರೆ ಎರಡು ಅಭ್ಯರ್ಥಿಗೆ ಮತನೀಡಿದ ನಂತರವೂ ಉಳಿದ ಮತಗಳನ್ನು ನಮ್ಮ ಆ ಅಭ್ಯರ್ಥಿಗಳಿಗೇ ಹಾಕುತ್ತೇವೆಯೋ ಹೊರತು, ಯಾರಿಗೂ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯಸಭೆಗೆ ಬಿಜೆಪಿಯು ಮೂವರನ್ನು ಶಿಫಾರಸ್ಸು ಮಾಡಿದ್ದು, ಇಬ್ಬರನ್ನು ಫೈನಲ್‌ ಮಾಡಲಿದೆ. ಆದರೆ, ಬಿಜೆಪಿ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗಿರಲಿದ್ದು, ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ಆರ್ಥಿಕ ತಜ್ಞ ಕಾಮತ್, ಇನ್ಪೋಸಿಸ್ ನ ಸುಧಾಮೂರ್ತಿ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿ ಯಲ್ಲಿವೆ. ಹೀಗಾಗಿ ಅಂತಿಮವಾಗಿ ರಾಜ್ಯ ಬಿಜೆಪಿ ಕಳುಹಿಸಿದ ಹೆಸರು ಬದಲು ಮುಂಚೂಣಿಯಲ್ಲಿರುವ ಈ ವ್ಯಕ್ತಿಗಳ ಹೆಸರು ಪ್ರಕಟ ಆದರೂ ಆಶ್ಚರ್ಯ ಪಡಬೇಕಿಲ್ಲ.

ಇನ್ನು ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆಯವರು ಕಣಕ್ಕಿಳಿಯಲಿದ್ದು, ಜೆಡಿಎಸ್‌ನಿಂದ ದೇವೇಗೌಡರು ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ, ದೇವೇಗೌಡರು ಈ ಬಗ್ಗೆ ಇನ್ನೂ ಸ್ಪಷ್ಟತೆ ನೀಡಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights