ರೈಲುಗಳನ್ನು ರದ್ದು ಮಾಡಿದ್ದು ಕಾರ್ಮಿಕರ ಮೂಲಭೂತ ಹಕ್ಕಿನ ಉಲ್ಲಂಘನೆ: ಸಿದ್ದರಾಮಯ್ಯ

ಕಾರ್ಮಿಕರು ಹಿಂತಿರುಗಲು ವ್ಯವಸ್ಥೆ ಮಾಡಿದ್ದ ರೈಲುಗಳನ್ನು ರದ್ದು ಮಾಡಿರುವುದು ಅಮಾನವೀಯ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

“ಹೊರರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಲು ವ್ಯವಸ್ಥೆ ಮಾಡಿದ್ದ ರೈಲುಗಳನ್ನು ಮುಖ್ಯಮಂತ್ರಿಗಳು ಹಠಾತ್ತನೆ ರದ್ದು ಮಾಡಿರುವುದು ಅಮಾನವೀಯ ನಿರ್ಧಾರ ಮಾತ್ರವಲ್ಲ, ಕಾರ್ಮಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಕಾರ್ಮಿಕರು ಊರಿಗೆ ಮರಳಿದರೆ ಉದ್ಯಮ ಮತ್ತು ಕಟ್ಟಡ ನಿರ್ಮಾಣ‌ದ ಕೆಲಸಗಳಿಗೆ ಕಾರ್ಮಿಕರಿಲ್ಲದೆ‌ ತೊಂದರೆಯಾಗಲಿದೆ ಎಂದು ಸರ್ಕಾರ ಹೇಳುತ್ತಿರುವುದನ್ನು ನೋಡಿದರೆ, ಯಾರದೋ ಹಿತಾಸಕ್ತಿಗಾಗಿ ಬಡಪಾಯಿ ಕಾರ್ಮಿಕರನ್ನು ಬಲಿಕೊಡಲು ಹೊರಟಿರುವುದು ಸ್ಪಷ್ಟವಾಗಿದೆ. ಲಾಕ್‌ಡೌನ್ ಕಾಲದಲ್ಲಿ ಬಿಲ್ಡರ್‌ಗಳು ಹಾಗೂ ಉದ್ಯಮಿಗಳು ಕಾರ್ಮಿಕರನ್ನು ಕಾಳಜಿಯಿಂದ ನೋಡಿಕೊಂಡಿದ್ದರೆ ಅವರು ಯಾಕೆ ಈಗ ಊರಿಗೆ ಮರಳಲು ಹಟ ಹಿಡಿಯುತ್ತಿದ್ದರು? ಆಗ ಕಣ್ಣುಮುಚ್ಚಿಕೊಂಡಿದ್ದ ಮುಖ್ಯಮಂತ್ರಿಗಳು ಈಗ‌ ಕಾರ್ಮಿಕರನ್ನು ಬಲಾತ್ಕಾರವಾಗಿ ಉಳಿಸಿಕೊಳ್ಳಲು ಹೊರಟಿರುವುದು ಜೀವವಿರೋಧಿ ನಡೆ” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

“ನಲವತ್ತು ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಊಟ – ವಸತಿ‌ಯ ವ್ಯವಸ್ಥೆ ಇಲ್ಲದೆ ಈಗಾಗಲೇ ಕಾರ್ಮಿಕರು ರೊಚ್ಚಿಗೆದ್ದಿದ್ದಾರೆ. ಅವರು ಸಿಡಿದೇಳುವ ಮುನ್ನ ಅವರನ್ನು ಅವರ ಊರಿಗೆ ಕಳಿಸಲು ರೈಲಿನ ವ್ಯವಸ್ಥೆ ಮಾಡಬೇಕೆಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.

ವಲಸೆ ಕಾರ್ಮಿಕರು ಅವರ ರಾಜ್ಯಗಳಿಗೆ ತೆರಳಲು ರೈಲುಗಳ ವ್ಯವಸ್ಥೆ ಮಾಡಿದ್ದ ರಾಜ್ಯ ಸರ್ಕಾರ ಬಿಲ್ಢರುಗಳೊಂದಿಗೆ ಸಭೆ ನಡೆಸಿದ ನಂತರ ರೈಲುಗಳನ್ನು ರದ್ದು ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights