ವಲಸೆ ಕಾರ್ಮಿಕರ ಬಗ್ಗೆ ಮಾತನಾಡುವ ನೈತಿಕತೆ ಅಮಿತ್‌ ಶಾಗಿಲ್ಲ: ಮಮತಾ ಬ್ಯಾನರ್ಜಿ

ಕಾರ್ಯಯೋಜನೆಯಿಲ್ಲದೆ, ಅವ್ಯವಸ್ಥಿತಿ ಲಾಕ್‌ಡೌನ್‌ ಹೇರಿ ವಲಸೆ ಕಾರ್ಮಿಕರನ್ನು ನಿರಾಶ್ರಿತಗೊಳಿಸಿರುವ ಸರ್ಕಾರಕ್ಕೆ ಕಾರ್ಮಿಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವಲಸೆ ಕಾರ್ಮಿಕರ ರವಾನೆಗಾಗಿ ಬಂಗಾಳ ಸರ್ಕಾರ 8 ರೈಲುಗಳ ಓಡಿಸಲು ಯೋಜನೆ ರೂಪಿಸಿದೆ ಎಂದು ಆಡಳಿತಾ ರೂಢ  ತೃಣಮೂಲ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದೆ.

ಪಶ್ಚಿಮ ಬಂಗಾಳಕ್ಕೆ ರೈಲು ಹೋಗಲು ಬಿಡುತ್ತಿಲ್ಲ, ಇದು ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯ ಎಂದು ಆರೋಪಿಸಿ ಪತ್ರ ಬರೆದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ  ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ವಲಸೆ ಕಾರ್ಮಿಕರ ಬಗ್ಗೆ ಮಾತಾಡುವ ಹಕ್ಕು ನಿಮಗಿಲ್ಲ, ನಿನ್ನೆಯೊಂದೇ ದಿನ 16 ಮಂದಿ  ರೈಲ್ವೆ ದುರಂತದಲ್ಲಿ ಬಲಿಯಾಗಿದ್ಧಾರೆ. ಹಾಗಾಗಿ ಮೊದಲು ಕೇಂದ್ರ ರೈಲ್ವೆ ಮಂತ್ರಿಯ ರಾಜೀನಾಮೆ ಪಡೆಯುವಿರಾ? ಎಂದು ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.

ಅಮಿತ್ ಶಾ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ  ಮಮತಾ ಬ್ಯಾನರ್ಜಿ ಅವರು, ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಅವರಿಗಾಗಿ  ಪಶ್ಚಿಮ ಬಂಗಾಳದಲ್ಲಿ 711 ಕ್ಯಾಂಪ್ ಗಳನ್ನು ತೆರೆಯಲಾಗಿದೆ. ವಲಸೆ ಕಾರ್ಮಿಕರ ಬಗ್ಗೆ ಸಲಹೆ ಕೊಡಲು ಕೇಂದ್ರ ಸರ್ಕಾರಕ್ಕೆ ಹಕ್ಕಿಲ್ಲ. ಕೇಂದ್ರ ಸರ್ಕಾರ ರೈಲು ಬಿಡುವ ಬಗ್ಗೆ ಬರೀ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಬಂಗಾಳದಲ್ಲಿರುವ ವಲಸೆ ಕಾರ್ಮಿಕರ ರವಾನೆಗೆ ರಾಜ್ಯ ಸರ್ಕಾರ 8 ರೈಲುಗಳನ್ನು ಓಡಿಸಲು ಯೋಜನೆ ರೂಪಿಸಿದೆ. 16 ಕಾರ್ಮಿಕರ ಮೇಲೆ ರೈಲು ಹತ್ತಿಸಿದ ಕೇಂದ್ರ ಸರ್ಕಾರಕ್ಕೆ ಬಂಗಾಳದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಟಿಎಂಸಿ ಸಂಸದ ಕಕೋಲಿ ಘೋಷ್ ದೋಸ್ತಿದಾರ್  ಹೇಳಿದ್ದಾರೆ.

ಪ.ಬಂ. ಸರ್ಕಾರ ವಲಸೆ ಕಾರ್ಮಿಕರು ತುಂಬಿದ್ದ ರೈಲನ್ನು ತಮ್ಮ ರಾಜ್ಯದೊಳಗೆ ಬರಲು ಬಿಡದೆ ವಲಸೆ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನಿರೀಕ್ಷಿಸಿದಷ್ಟು  ಬೆಂಬಲ ಸಿಗುತ್ತಿಲ್ಲ. ಪಶ್ಚಿಮ ಬಂಗಾಳದ ವಿವಿಧ ಕಡೆಗಳಿಂದ ದೇಶದ ಹಲವು ಕಡೆಗಳಿಗೆ ಕೆಲಸಕ್ಕಾಗಿ ತೆರಳಿದ್ದ 2 ಲಕ್ಷ ವಲಸೆ ಕಾರ್ಮಿಕರು ತೆರಳಿದ್ದರು. ಇವರನ್ನು ಲಾಕ್‌ಡೌನ್ ಆದ್ದರಿಂದ ತಮ್ಮ ರಾಜ್ಯಗಳಿಗೆ ವಾಪಸ್ಸು ಕಳಿಸಲು ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಆದರೆ, ಪಶ್ಚಿಮ  ಬಂಗಾಳ ಸರ್ಕಾರ ವಲಸೆ ಕಾರ್ಮಿಕರಿದ್ದ ರೈಲು ಪ್ರವೇಶ ನಿರ್ಬಂಧ ವಿಧಿಸಿದೆ.  ಈ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೀದಿ ವಿರುದ್ಧ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights