ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಶಾಕ್ : ಗಾಯದ ಮೇಲೆ ಬರೆ ಎಳಿತಾ ಸರ್ಕಾರ?

ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಗ್ರಾಹಕರಿಗೆ ವಿದ್ಯುತ್ ಬಿಲ್ ನ ಹೊರೆ ಹೇರಿರುವ ಸರ್ಕಾರ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಹೌದು… ಇತ್ತೀಚೆಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಪರಿಣಾಮ ವಿದ್ಯುತ್ ಸರಬರಾಜು ಕಂಪನಿಗಳು ವಸೂಲಿಗೆ ಇಳಿದುಬಿಟ್ಟಿವೆ. ಆರ್ಥಿಕ ಸಂಕಷ್ಟದಲ್ಲಿರುವ ಜನತೆಗೆ ವಿದ್ಯುತ್ ಬಿಲ್ ನ ಹೊರೆ ಹೋರಿಸಿದ್ದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ ಎರಡೂ ತಿಂಗಳ ಅಂದ್ರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ಆಧಾರದ ಮೇಲೆ ಬಿಲ್ ನೀಡಿರುವುದು ಅವೈಜ್ಞಾನಿಕ ಎಂದು ಸಾವಿರಾರು ಗ್ರಾಹಕರು ಆರೋಪಿಸುತ್ತಿದ್ದಾರೆ.

ಈಗಾಗಲೇ ಅದೆಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಕೆಲವರಿಗೆ ಕಡಿಮೆ ಸಂಬಳ ಕೊಟ್ಟರೆ ಇನ್ನು ಕೆಲವೆಡೆ ಸಂಬಳವನ್ನೇ ಕೊಡಲಾಗಿಲ್ಲ. ಹೀಗಿರುವಾಗ ಜನ ಮುಂದಿನ ಜೀವನದ ಬಗ್ಗೆ ಇರಲಿ ಸದ್ಯದ ಜೀವನ ಸಾಗಿಸುವುದು ಹೇಗಪ್ಪಾ ಅಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ನಡುವೆ ಸರ್ಕಾರ ಒಂದು ತಿಂಗಳು ಬಿಲ್ ಪಾವತಿಸಲು ಹೆಣಗಾಡುತ್ತಿರುವ ಜನರಿಗೆ ಎರಡು ತಿಂಗಳ ಬಿಲ್ ನ್ನು ಒಟ್ಟಿಗೆ ನೀಡಿ ಶಾಕ್ ಕೊಟ್ಟಿದೆ.

ವಿದ್ಯುತ್ ನಿಗಮ ಮಾರ್ಚ್, ಏಪ್ರಿಲ್ ಬಿಲ್ ಸೇರಿಸಿ ಬಿಲ್ ಕೊಡುತ್ತಿದೆ. 2 ಪಟ್ಟು ಬದಲಿಗೆ ನೂರಾರು ರೂಪಾಯಿ ಹೆಚ್ಚಾಗಿ ಬಿಲ್ ಬಂದಿದೆ. ತಿಂಗಳ ಸರಾಸರಿ ವಿದ್ಯುತ್ ಬಿಲ್ 500 ರೂಪಾಯಿ ಬರುತ್ತಿತ್ತು. ಆದರೆ ಈಗ 700, 800, 1400 ರೂಪಾಯಿವರೆಗೆ ಬಿಲ್ ಬಂದಿದೆ. ಮೀಟರ್ ರೀಡಿಂಗ್ ಮಾಡದೆ ಸರಾಸರಿಯಲ್ಲಿ ಬಿಲ್ ಹಾಕಿದ್ದಾರೆಂದು ಗ್ರಾಹಕರು ಆರೋಪ ಮಾಡುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದ್ಯುತ್ ನಿಗಮವು ಸಾಫ್ಟ್‌ವೇರ್ ಸಮಸ್ಯೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಹೇಳಿದೆ. ಇತ್ತ ಬಿಲ್ ಲೋಪ-ದೋಷ ಶೀಘ್ರದಲ್ಲೇ ಸರಿಪಡಿಸ್ತೇವೆ ಅಂತ ಅಧಿಕಾರಿಗಳ ಸಬೂಬು ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದೇ ಸಮಸ್ಯೆ ಉಂಟಾಗಿದೆ. ಕೆಲವರು ಲಾಕ್‍ಡೌನ್ ಆರಂಭದಲ್ಲೇ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದಾರೆ. ಸುಮಾರು ಒಂದೂವರೆ ತಿಂಗಳು ಕರೆಂಟೇ ಬಳಸಿಲ್ಲ. ಆದರೂ ಅವರಿಗೆಲ್ಲಾ ಡಬಲ್, ತ್ರಿಬಲ್ ಬಿಲ್ ಬಂದುಬಿಟ್ಟಿದೆ ಎಂದು ಸಮಜಾಯಿಸಿ ನೀಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights