ಭೂ, ಎಪಿಎಂಸಿ ಮತ್ತು ಕಾರ್ಮಿಕ ಮಸೂದೆಗಳ ಜಾರಿಗೆ ಮತ್ತೆ ಸುಗ್ರೀವಾಜ್ಞೆಯ ಮೊರೆಹೋದ ಬಿಎಸ್‌ವೈ!

ರೈತರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಭೂಸುಧಾರಣಾ ತಿದ್ದುಪಡಿ ಮಸೂದೆ, ಎಪಿಎಂಸಿ ತಿದ್ದುಪಡಿ ಮಸೂದೆ ಮತ್ತು ಕೈಗಾರಿಕಾ ವಿವಾದಗಳು ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕಗಳಿಗೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ಸಿಗದೇ ಇರುವ ಹಿನ್ನೆಲೆಯಲ್ಲಿ ಈ ಮಸೂದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಮತ್ತೆ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರೈತ-ದಲಿತ-ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಈ ಮೂರೂ ಮಸೂದೆಗಳು ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗದಂತೆ ತಡೆದಿವೆ. ಈ ಹಿನ್ನೆಲೆಯಲ್ಲಿ ಮಸೂದೆಗಳನ್ನು ಮತ್ತೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಸೆ.26ರಂದು ವಿಧಾನ ಸಭೆಯಲ್ಲಿ ಅಂಗೀಕಾರಗೊಂಡ ಮೂರು ಮಸೂದೆಗಳು ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗಿಲ್ಲ. ವಿಧಾನ ಪರಿಷತ್‌ನಲ್ಲಿ ಅಂದು ರಾತ್ರಿ 1 ಗಂಟೆಯವರೆಗೂ ಚರ್ಚೆಗಳು ನಡೆದರೂ ಮಸೂದೆಗಳಿಗೆ ಒಪ್ಪಿಗೆ ಸಿಗದ ಕಾರಣ ಹಾಗೂ ಸೆ.26ರಂದೇ ವಿಧಾನ ಮಂಡಲದ ಅಧಿವೇಶನ ಅಂತ್ಯಗೊಂಡಿದ್ದರಿಂದಾಗಿ ವಿಧಾನ ಪರಿಷತ್‌ ಸಭಾಪತಿ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.

ಹಾಗಾಗಿ ಮತ್ತೆ ಆರು ತಿಂಗಳ ನಂತರ ಅಧಿವೇಶನ ಸೇರುವವರೆಗೂ ವಿಧಾನ ಪರಿಷತ್‌ ಕಲಾಪ ಮತ್ತೆ ನಡೆಯುವುದಿಲ್ಲ.

ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಮೆಜಾರಿಟಿ ಇಲ್ಲ, ಭೂಸುಧಾರಣೆ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ: ಸಿದ್ದರಾಮಯ್ಯ

ಅಧಿವೇಶನಕ್ಕೂ ಮುನ್ನವೇ ಈ ಮೂರು ಮಸೂದೆಗಳನ್ನು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿತ್ತು. ಸುಗ್ರೀವಾಜ್ಞೆ ಮೂಲಕ ಜಾರಿಯಾದ ಕಾನೂನುಗಳು 6 ತಿಂಗಳ ಕಾಲ ಜೀವಂತವಾಗಿರುತ್ತವೆ. ಆ ಆರು ತಿಂಗಳೊಳಗಾಗಿ ವಿಧಾನಮಂಡಲದಲ್ಲಿ ಅಂಗೀಕಾರ ಪಡೆಯಬೇಕು.

ಆದರೆ, ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ಮಸೂದೆಗಳು, ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗದ ಕಾರಣ, ಮಸೂದೆಗಳು ಮುಂದಿನ ಅಧಿವೇಶನದ ವರೆಗೂ ಜೀವ ಕಳೆದುಕೊಳ್ಳುತ್ತವೆ. ಹಾಗಾಗಿ, ಮಸೂದೆಗಳನ್ನು ಜಾರಿಯಲ್ಲಿಡುವ ಉದ್ದೇಶದಿಂದ ಮತ್ತೆ ಸುಗ್ರೀವಾಜ್ಞೆ ಜಾರಿಗೊಳಿಸಲು ನಿರ್ಧರಿಸಿದೆ.

ಇಂದು (ಗುರುವಾರ) ಸಂಜೆಯೇ  ಮಸೂದೆಗಳನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳಿಸಲು ನಿರ್ಧರಿಸಿದೆ ಎಂದು ಹೇಳಾಗಿದೆ.

ಇದನ್ನೂ ಓದಿ: ಭೂ ಸುಧಾರಣಾ ಮಸೂದೆಗೆ ಪರಿಷತ್‌ನಲ್ಲಿಲ್ಲ ಅಂಗೀಕಾರ: ಬಿಜೆಪಿ-ಜೆಡಿಎಸ್‌ ಮೈತ್ರಿ ಸಾಧ್ಯತೆ?  

ರಾಜ್ಯಪಾಲರ ಸಹಿ ಬಿದ್ದ ಬಳಿಕ ಮಸೂದೆಗಳು ಕಾಯ್ದೆಗಳಾಗಿ ಬದಲಾಗುತ್ತವೆ. ಹಾಗಾಗಿ ಈ ಮೊದಲೇ, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಪ್ರಯತ್ನಿಸಿ ಪ್ರಸ್ತಾವನೆ ಕಳುಹಿಸಿದರೆ, ಸಹಿ ಹಾಕಬೇಡಿ ಎಂದು ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಇತ್ತಿಚೆಗೆ ಭೇಟಿ ಮಾಡಿ ಮನವಿ ನೀಡಿದೆ.

ಹಾಗಾಗಿ, ರಾಜ್ಯಪಾಲರ ನಿರ್ಧಾರದ ಮೇಲೆ ಮೂರು ಮಸೂದೆಗಳ ಭವಿಷ್ಯ ನಿರ್ಧಾರವಾಗಲಿದೆ.


ಇದನ್ನೂ ಓದಿ: ಭೂಸುಧಾರಣಾ ತಿದ್ದುಪಡಿ ಹಿಂದೆ 60,000 ಎಕರೆ ಭೂಗಳ್ಳರ ಭ್ರಷ್ಟಚಾರವಿದೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights