ನಾವು ಸೂತಕದ ಮನೆಯಲ್ಲಿ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ: ಹೆಚ್‌ಡಿಕೆ

ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ಖಾಲಿಯಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಶಿರಾದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ ಎಂದು ಪೋಸ್ಟ್‌ ಮಾಡಿದ್ದಾರೆ.

ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ. ನಾವು ಅನಿವಾರ್ಯವಾಗಿ ಎದುರಿಸಬೇಕಾದ ನೋವಿನ ಚುನಾವಣೆ ಇದು. ಇತರರು ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಅವರಿಗೆ ಇದು ಲಾಭ-ನಷ್ಟದ ವಿಚಾರ. ಆದರೆ ನಾವಿಲ್ಲಿ ನಮ್ಮ ನೋವಿಗೆ ಗೆಲುವಿನ ಮೂಲಕ ಪರಿಹಾರ ಹುಡುಕ ಬಯಸುತ್ತಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಶಿರಾ ನಾವು ಗೆದ್ದ ಕ್ಷೇತ್ರವೂ ಹೌದು, ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಸತ್ಯಣ್ಣ ಇಲ್ಲಿ ಗೆದ್ದಿದ್ದರು. ಬಿಜೆಪಿಯವರ ಆಮಿಷಕ್ಕೆ ಆಕರ್ಷಿತರಾಗದೇ ಕ್ಷೇತ್ರವನ್ನು ಜೆಡಿಎಸ್ಗೇ ಉಳಿಸಿಕೊಟ್ಟಿದ್ದರು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾ ನಾವೇ ಗೆಲ್ಲಬೇಕಾದ ಕ್ಷೇತ್ರ ಎಂದು ಹೇಳಿದ್ದಾರೆ.

‘ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಶಿರಾ ನಮ್ಮದೇ ಕ್ಷೇತ್ರ. ರಾಜರಾಜೇಶ್ವರಿ ನಗರವೂ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರ. ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಅಚಲವಾಗಿದೆ. ಸೂಕ್ತ, ನ್ಯಾಯ ಸಮ್ಮತ ಅಭ್ಯರ್ಥಿಗಳನ್ನು ಶೀಘ್ರವೇ ಪಕ್ಷ ಘೋಷಿಸುತ್ತದೆ’ ಎಂದು ತಿಳಿಸಿದ್ದಾರೆ.

ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ನವೆಂಬರ್​ 3ರಂದು ಉಪ ಚುನಾವಣೆ ನಡೆಯಲಿದೆ. ಈ ಕ್ಷೇತ್ರವನ್ನು ಗೆದ್ದುಕೊಳ್ಳಲೇಬೇಕು ಎಂದು ಮೂರು ಪಕ್ಷಗಳು ಕಸರತ್ತು ನಡೆಸುತ್ತಿವೆ.


ಇದನ್ನೂ ಓದಿ: 4 ವಿಧಾನ ಪರಿಷತ್ ಸೇರಿದಂತೆ ಆರ್.ಆರ್.ನಗರ, ಶಿರಾ ಉಪಚುನಾವಣೆಗೆ ಚುನಾವಣಾ ದಿನಾಂಕ ಪ್ರಕಟ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights