4 ವಿಧಾನ ಪರಿಷತ್ ಸೇರಿದಂತೆ ಆರ್.ಆರ್.ನಗರ, ಶಿರಾ ಉಪಚುನಾವಣೆಗೆ ಚುನಾವಣಾ ದಿನಾಂಕ ಪ್ರಕಟ
ಕರ್ನಾಟಕ ವಿಧಾನ ಪರಿಷತ್ನಲ್ಲಿ ಮೂರು ತಿಂಗಳಿನಿಂದ ತೆರವಾಗಿರುವ ಎರಡು ಪದವೀಧರ ಹಾಗೂ ಎರಡು ಶಿಕ್ಷಕ ಕ್ಷೇತ್ರಗಳು ಸೇರಿ ನಾಲ್ಕು ಸ್ಥಾನಗಳಿಗೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿದೆ. ಅಕ್ಟೋಬರ್ 28ಕ್ಕೆ ಚುನಾವಣೆ ನಡೆಯಲಿದ್ದು, ನವೆಂಬರ್ 2ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ಸಮಯ ನಿಗಧಿಸಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಅಕ್ಟೋಬರ್ 1ರಿಂದ ಆರಂಭಗೊಳ್ಳಲಿದ್ದು, ಅಕ್ಟೋಬರ್ 8 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುತ್ತದೆ. ಇನ್ನೂ ನಾಮಪತ್ರವನ್ನು ಅಕ್ಟೋಬರ್ 12ರವರೆಗೆ ಹಿಂಪಡೆಯಲು ಅವಕಾಶವಿರುತ್ತದೆ.
ಜೊತೆಗೆ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರ ಸೇರಿದಂತೆ ದೇಶಾದ್ಯಂತ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಲಾಗಿದೆ. ನವೆಂಬರ್ 3ರಂದು ಮತಚಲಾವಣೆ ದಿನಾಂಕ ನಿಗಧಿಸಲಾಗಿದೆ. ನವೆಂಬರ್ 10ರಂದೇ ಎಲ್ಲಾ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ.ಅಕ್ಟೋಬರ್ 9ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಅಕ್ಟೋಬರ್ 16ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಅಕ್ಟೋಬರ್ 17ಕ್ಕೆ ನಾಮಪತ್ರ ಪರಿಶೀಲನೆಗೊಳ್ಳಲಿದ್ದು ಅಕ್ಟೋಬರ್ 19 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಶರಣಪ್ಪ ಮಟ್ಟೂರು, ಆರ್. ಚೌಡರೆಡ್ಡಿ ತೂಪಲ್ಲಿ, ಎಸ್.ವಿ. ಸಂಕನೂರ ಮತ್ತು ಪುಟ್ಟಣ್ಣ ಅವರ ಅವಧಿ ಇದೇ ಜೂನ್ಗೆ ಮುಗಿದ ಹಿನ್ನೆಲೆಯಲ್ಲಿ ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ ಕ್ಷೇತ್ರಗಳು ಹಾಗೂ ಈಶಾನ್ಯ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಎಲೆಕ್ಷನ್ ಡೇಟ್ ಫಿಕ್ಸ್ ಆಗಿದೆ.
ಆದರೆ ರಾಜ್ಯದಲ್ಲಿ ಕೆಲ ಕ್ಷೇತ್ರಗಳು ಈ ಪಟ್ಟಿಯಲ್ಲಿ ಸೇರಿಲ್ಲ. ಇತ್ತೀಚೆಗೆ ಸಂಸದ ಸುರೇಶ್ ಅಂಗಡಿ ನಿಧನದ ನಂತರ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ಈ ಪಟ್ಟಿಗೆ ಸೇರಿಸಿಲ್ಲ. ಆರ್.ಆರ್. ನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ವಿರುದ್ಧ ಚುನಾವಣಾ ನೀತಿ ಉಲ್ಲಂಘನೆ ಪ್ರಕರಣ ಇದ್ದರಿಂದ ಕಳೆದ ಬಾರಿಯ ಉಪಚುನಾವಣೆಯಲ್ಲಿ ಆರ್.ಆರ್. ನಗರ ಚುನಾವಣೆ ಇರಲಿಲ್ಲ. ಈಗ ಪ್ರಕರಣ ಹಿಂಪಡೆದಿರುವ ಹಿನ್ನೆಲೆಯಲ್ಲಿ ಉಪಚುನಾವಣೆಗೆ ದಾರಿ ಸಿಕ್ಕಿದೆ. ಇನ್ನು ಶಿರಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಸತ್ಯನಾರಾಯಣ ಅವರು ಆಗಸ್ಟ್ 5ರಂದು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಿದೆ.
ಈಗ ದೇಶಾದ್ಯಂತ ಉಪಚುನಾವಣೆ ನಡೆಯುವ 54 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಪ್ರದೇಶ ರಾಜ್ಯವೊಂದರಲ್ಲೇ 28 ಕ್ಷೇತ್ರಗಳಿವೆ. ಗುಜರಾತ್ನ 8 ಮತ್ತು ಉತ್ತರ ಪ್ರದೇಶದ 7 ಕ್ಷೇತ್ರಗಳಿವೆ.

