ಬಂಗಾಳದ ಮಮತಾ ಅವರ ಕಿಚನ್‌ನಲ್ಲಿ ವಲಸಿಗರಿಗಾಗಿ 5ರೂ.ಗೆ ಊಟ..!

ತೃಣಮೂಲ ಕಾಂಗ್ರೆಸ್ ವಲಸಿಗ ಕಾರ್ಮಿಕರಿಗೆ ಕೇವಲ 5 ರೂ.ಗಳಿಗೆ ಊಟ ನೀಡಲು ಪಶ್ಚಿಮ ಬಂಗಾಳದಲ್ಲಿ ‘ದಿದೀರ್ ರನ್ನಘರ್ [ಮಮತಾ ಕಿಚನ್]’ ಪ್ರಾರಂಭಿಸಿದೆ. ಕೊರೊನವೈರಸ್ ಪ್ರೇರಿತ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಆರ್ಥಿಕ ಹಿನ್ನಡೆ ಅನುಭವಿಸಿದ ಲಕ್ಷಾಂತರ ವಲಸಿಗ ಕಾರ್ಮಿಕರನ್ನು ಬೆಂಬಲಿಸುವ ಉದ್ದೇಶದಿಂದ ‘ಮಮತಾಸ್ ಕಿಚನ್’ ಎಂಬ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಹಬ್ಬದ ಅವಧಿಯಲ್ಲಿ ರಾಜ್ಯದಾದ್ಯಂತ ವಲಸೆ ಕಾರ್ಮಿಕರಿಗೆ 5 ರೂ.ಗೆ ಊಟ ನೀಡಲು ತೃಣಮೂಲ ಕಾಂಗ್ರೆಸ್ ಯೋಜಿಸಿದೆ.

‘ದಿದೀರ್ ರನ್ನಘರ್’ ಅಥವಾ ‘ಮಮತಾ ಕಿಚನ್’ ನಲ್ಲಿ ವಲಸೆ ಕಾರ್ಮಿಕರಿಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ 5 ರೂ.ಗೆ ಊಟ ನೀಡಲಾಗುವುದು. ‘ದಿದಿರ್ ರನ್ನಘರ್ [ಮಮತಾ ಕಿಚನ್]’ ನಲ್ಲಿ ನೀಡುವ ಊಟ ಹೆಚ್ಚಾಗಿ ಸಸ್ಯಾಹಾರಿ ಆಗಿರುತ್ತದೆ. ಅಕ್ಕಿ, ದಾಲ್, ದ್ವಿದಳ ಧಾನ್ಯಗಳು, ತರಕಾರಿ ಮಿಶ್ರಣದ ‘ಖಿಚ್ಡಿ’ (ಬೇಯಿಸಿದ ಅಕ್ಕಿ ಮತ್ತು ಬೇಳೆ) ಮತ್ತು ಪಾಪಾಡ್ ಅನ್ನು ಒಳಗೊಂಡಿರುತ್ತದೆ.

ಮಮತಾ ಅವರ ಕಿಚನ್ ಈಗಾಗಲೇ ಹೌರಾ, ಬೆಲ್ಗಾಚಿಯಾ (ಕೋಲ್ಕತ್ತಾದಲ್ಲಿ) ಮತ್ತು ಉತ್ತರ 24 ಪರಗಣದ ಬರಾಕ್‌ಪೋರ್‌ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅಪಾರ ತೊಂದರೆ ಅನುಭವಿಸಿರುವ ಹಿಂದುಳಿದ ವಿಭಾಗಗಳು / ಅಸಂಘಟಿತ ವಲಯಗಳಿಗೆ ಲಾಭ ತರುವ ಉದ್ದೇಶವನ್ನು ‘ದಿದಿರ್ ರನ್ನಘರ್’ ಹೊಂದಿದೆ ಎಂದು ಟಿಎಂಸಿ ಶಾಸಕ ತಪಸ್ ರಾಯ್ ತಿಳಿಸಿದ್ದಾರೆ. ಮಾತ್ರವಲ್ಲದೇ ಹಬ್ಬದ ಅವಧಿಯಲ್ಲಿ ಬಡವರಿಗೆ ಬಟ್ಟೆ ದಾನ ಮಾಡಲು ಕೂಡ ತೃಣಮೂಲ ಕಾಂಗ್ರೆಸ್ ಯೋಜಿಸುತ್ತಿದೆ ಎಂದು ತಪಸ್ ರಾಯ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಕೊರೊನಾವೈರಸ್ ಸೋಮವಾರ 3,155 ಹೊಸ ಪ್ರಕರಣಗಳೊಂದಿಗೆ 2,50,000 ಪ್ರಕರಣಗಳನ್ನು ದಾಟಿದೆ. ಒಂದೇ ದಿನದಲ್ಲಿ 56 ಸಾವುಗಳು ಸಂಭವಿಸಿದ್ದು ಈವರಗೆ 4,837 ಕೊರೊನಾಕ್ಕೆ ಜನ ಬಲಿಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ತಿಳಿಸಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 2,50,580 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ. ಭಾನುವಾರದಿಂದ, 2,923 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights