‘ಬೆಂಗಳೂರು ಉಗ್ರರ ತಾಣ’ ಎಂದ ತೇಜಸ್ವಿ ಸೂರ್ಯರನ್ನ ವಜಾಗೊಳಿಸಲು ಕಾಂಗ್ರೆಸ್ ಪಟ್ಟು!
ಇತ್ತೇಚೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದ ಹೇಳಿಕೆಗೆ ಕಾಂಗ್ರೆಸ್ ಸಿಡಿಮಿಡಿಗೊಂಡಿದೆ. ಜೊತೆಗೆ ಬೆಂಗಳೂರು ಉಗ್ರರ ತಾಣವಾಗಿದೆ ಎಂದು ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಅವರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಪಟ್ಟುಹಿಡಿದಿದೆ.
ಮಾತ್ರವಲ್ಲದೇ ತೇಜಸ್ವಿ ಅವರ ಈ ಹೇಳಿಕೆಗೆ ನೆಟ್ಟಿಗರೂ ಕೂಡ ಗರಂ ಆಗಿದ್ದು ಈ ಹೇಳಿಕೆ ಬೆಂಗಳೂರಿಗೆ ಅವಮಾನಿಸಿದೆ ಎಂದು ದೂರಿದ್ದಾರೆ. ಆದರೆ ತೇಜಸ್ವಿ ಅವರ ಈ ಹೇಳಿಕೆಯನ್ನು ಸಿಎಂ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶಾಶ್ವತ ಕಚೇರಿ ಸ್ಥಾಪನೆ ವಿಚಾರವಾಗಿ ಮಾತನಾಡಿದ ತೇಜಸ್ವಿ ಸೂರ್ಯ ಅವರು ಬೆಂಗಳೂರು ಉಗ್ರರ ಚಟುವಟಿಕೆ ತಾಣವಾಗಿದೆ ಎಂದಿದ್ದರು. ನಗರದಲ್ಲಿ ಎನ್ಐಎ ಸ್ಥಾಪಿಸುವುದರಿಂದ ಉಗ್ರರನ್ನು ಮಟ್ಟ ಹಾಕಬಹುದು ಎಂದಿದ್ದರು. ಸದ್ಯ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸಂಸದರ ಇದೇ ಹೇಳಿಕೆ ಸದ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಉಗ್ರರನ್ನು ಮಟ್ಟ ಹಾಕಲು ಎನ್ಐಎ ಶಾಶ್ವತ ಕಚೇರಿ ಸ್ಥಾಪನೆ ಮಾಡುವುದು ಉತ್ತಮ ಎನ್ನುವ ಅರ್ಥದಲ್ಲಿ ತೇಜಸ್ವಿ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಸಿಎಂ ಯಡಿಯೂರಪ್ಪ ತಮ್ಮ ಪಕ್ಷದ ಸಂಸದನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಂತಹ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬಣ್ಣಿಸಿದ್ದಾರೆ. ಬೆಂಗಳೂರಿನ ಬಗ್ಗೆ ಇಂತ ಹೇಳಿಕೆ ನೀಡಿರುವುದಕ್ಕೆ ತೇಜಸ್ವಿ ಸೂರ್ಯ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಒತ್ತಾಯಿಸಿದ್ದಾರೆ.

