ಭೂ ಸುಧಾರಣಾ ಮಸೂದೆಗೆ ಪರಿಷತ್‌ನಲ್ಲಿಲ್ಲ ಅಂಗೀಕಾರ: ಬಿಜೆಪಿ-ಜೆಡಿಎಸ್‌ ಮೈತ್ರಿ ಸಾಧ್ಯತೆ?  

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರತಿಷ್ಟೆ ಎಂಬಂತೆ ತೆಗೆದುಕೊಂಡಿರುವ ಭೂ ಸುಧಾರಣಾ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿಲ್ಲ. ಹಾಗಾಗಿ, ಪರಿಷತ್‌ನಲ್ಲಿ ಈಗಿರುವ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿ, ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಹೊಸ ಅಧ್ಯಕ್ಷರನ್ನು ನೇಮಿಸಿ, ಮಸೂದೆಗೆ ಅಂಗೀಕಾರ ಪಡೆದುಕೊಳ್ಳಲು ಬಿಜೆಪಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಪರಿಷತ್‌ಗೆ ಜೆಡಿಎಸ್‌ನಿಂದ ನೂತನ ಸಭಾಪತಿಯನ್ನು ಆಯ್ಕೆ ಮಾಡಲು ಬಿಜೆಪಿ ಸಿದ್ದವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಧಿಕಾರದಲ್ಲಿದ್ದಾಗ ಪ್ರತಾಪ್‌ ಚಂದ್ರ ಶೆಟ್ಟಿ ಅವರನ್ನು ಪರಿಷತ್‌ ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸಭಾಪತಿ ಕಾಂಗ್ರೆಸ್‌ ಪಕ್ಷದವರಾಗಿದ್ದು, ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡದೆ, ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷನ್ನೇ ಬದಲಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ,  ಅಧ್ಯಕ್ಷರ ಅಧಿಕಾರಾವಧಿ ಮುಗಿಯುವ ಮೊದಲೇ ಹೊಸ ಅಧ್ಯಕ್ಷ ಆಯ್ಕೆ ಮಾಡುವ ಪ್ರಸ್ತಾಪವನ್ನು ಬಿಜೆಪಿ ಮಾಡಬೇಕಾದರೇ ಬಿಜೆಪಿಗೆ ಬಹುಮತ ಬೇಕು. ಪರಿಷತ್‌ನಲ್ಲಿ ಬಿಜೆಪಿ ಅಗತ್ಯ ಬಹುಮತವಿಲ್ಲ. ಹಾಗಾಗಿ, ಜೆಡಿಎಸ್ ಜೊತೆ  ಮೈತ್ರಿ ಮಾಡಿಕೊಂಡು ಅಧ್ಯಕ್ಷರನ್ನು ಬದಲಿಸುವ ಜೊಚನೆಯನ್ನು ಬಿಜೆಪಿ ನಡೆಸಿದೆ ಎನ್ನಲಾಗಿದೆ.

ವಿಧಾನ ಪರಿಷತ್‌ನಲ್ಲಿ ಪ್ರಸಕ್ತ 71 ಸದಸ್ಯರಿದ್ದು, ಕಾಂಗ್ರೆಸ್-29, ಜೆಡಿಎಸ್ 17 ಮತ್ತು ಬಿಜೆಪಿ 27 ಸದಸ್ಯರನ್ನು ಒಳಗೊಂಡಿದೆ. ಉಳಿದ ಸ್ಥಾನಗಳಿಗೆ ಅಕ್ಟೋಬರ್ 28 ರಂದು ಚುನಾವಣೆ ನಡೆಯಲಿದೆ.

ಸಭಾಪತಿ ಆಯ್ಕೆ ಸಂಬಂಧ ಜೆಡಿಎಸ್ ಪಕ್ಷವನ್ನು ಸಂಪರ್ಕಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಬಿಜೆಪಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.


Read Also: ಭೂಸುಧಾರಣಾ ತಿದ್ದುಪಡಿ ಹಿಂದೆ 60,000 ಎಕರೆ ಭೂಗಳ್ಳರ ಭ್ರಷ್ಟಚಾರವಿದೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights