ಫ್ಯಾಕ್ಟ್‌ಚೆಕ್ : ಹಿಂದೂಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡದಿರಲು ಬೆಂಗಳೂರು ಮುಸ್ಲಿಮರು ನಿರ್ಧರಿಸಿದ್ದಾರೆ ಎಂಬ ವೈರಲ್ ವಿಡಿಯೋದ ಅಸಲಿಯತ್ತೇನು?

ಹಿಂದೂಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡಬಾರದು ಎಂದು ಬೆಂಗಳೂರಿನ ಮುಸ್ಲಿಮರು ಸಭೆ ಸೇರಿ ತೀರ್ಮಾನಿಸುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ವಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಬೆಂಗಳೂರಿನ ಮುಸ್ಲಿಮರ ಸಭೆ ಸೇರಿ, “ಹಿಂದೂಗಳಿಂದ ಏನನ್ನೂ ಖರೀದಿಸಬಾರದು, ನಮಗೆ 5 ವರ್ಷಗಳ ಅಧಿಕಾರವಿದೆ, ಹಿಂದೂಗಳ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಖರೀದಿಸಬೇಡಿ, ಹಿಂದೂ ಮೆಡಿಕಲ್ ಶಾಪ್‌ಗಳಲ್ಲಿ ಔಷಧಿ ತೆಗೆದುಕೊಳ್ಳಬೇಡಿ” ಎಂದು ನಿರ್ಧರಿಸಿದ್ದಾರೆ. ಅವರ ಅಂಗಡಿಗಳಲ್ಲಿ ಖರೀದಿ ಮಾಡಿ ಅವರಿಗೆ ನಾವು ಯಾಕೆ ಲಾಭ ಮಾಡಬೇಕು ಎಂದು ನಿರ್ಧರಿಸಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://twitter.com/IamNarendra10/status/1674420982302507009

ಹಿಂದೂಗಳ ವ್ಯವಹಾರವನ್ನು ಬಹಿಷ್ಕರಿಸಿ ಎಂದು ಬೆಂಗಳೂರಿನ  ಮುಸ್ಲಿಮರು ಕರೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವಿಡಿಯೋದ ಅಸಲಿಯತ್ತು ಏನು ಎಂದು ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮುಸ್ಲಿಮರು ಹಿಂದೂಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಭೆ ಸೇರಿ ತೀರ್ಮಾನಿಸಿದ್ದಾರೆ ಎಂದು ನಿರ್ಧರಿಸಿದ್ದಾರೆಯೇ ಎಂದು ಪರಿಶೀಲಿಸಿದಾಗ, ಕರ್ನಾಟಕ ಪೊಲೀಸರು ವಾಸ್ತವವನ್ನು  ಬಯಲಿಗೆಳೆದಿದ್ದಾರೆ. ಇದು ರಾಜಸ್ಥಾನದ ಹಳೆಯ ವೀಡಿಯೊ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೀಡಿಯೊ ಕ್ಲಿಪ್ ಅನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕ ಜನರು ತಪ್ಪಾದ ಮಾಹಿತಿಯೊಂದಿಗೆ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದ ಅಸಲೀಯತ್ತೇನು?

ಪ್ರಸ್ತುತ ಹರಿದಾಡುತ್ತಿರುವ ವೈರಲ್ ವೀಡಿಯೊ 2019 ರಲ್ಲಿ ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದಿರುವುದಕ್ಕೆ ಸಂಬಂಧಿಸಿದ್ದು. ಈ ಘಟನೆ ಬೆಂಗಳೂರಿಗೆ ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸದ, ಅನುಮಾನಾಸ್ಪದ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹಂಚಿಕೊಳ್ಳದಂತೆ ಅಥವಾ ಪ್ರಸಾರ ಮಾಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಾರ್ಮರ್‌ನಲ್ಲಿ ಪೊಲೀಸರು ವಿಡಿಯೋ ಸಹಿತ ನೀಡಿರುವ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಇದೇ ವಿಡಿಯೋ ಈ ವರ್ಷದ ಮಾರ್ಚ್‌ನಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಬಾರ್ಮರ್ ಪೊಲೀಸರು, ವಿಡಿಯೋ 2019 ರ ಭೋಜಾರಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.

ಇದು 2019ರಲ್ಲಿ ರಾಜಸ್ಥಾದಲ್ಲಿ ನಡೆದ ಘಟನೆ:

28-6-2019 ರಂದು, ಭೋಜಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ, ರಾಮ್ಸಾರ್‌ನ ಗಗಾರಿಯಾ ಗ್ರಾಮದ ಪೆಟ್ರೋಲ್ ಪಂಪ್‌ನ ಬಳಿ ನಡೆದ ಖಾಸಗಿ ಬಸ್‌ ಅಪಘಾತದಿಂದಾಗಿ ಒಬ್ಬರು ಸಾವನ್ನಪ್ಪಿದ್ದರು ಮತ್ತು ಮೂವರು ಗಾಯಗೊಂಡಿದ್ದರು. ಮೃತರ ಸಂಬಂಧಿಕರು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಪ್ರತಿಭಟಿಸಿ ಬೇಡಿಕೆ ಸಲ್ಲಿಸಿದ್ದರು. ಅದೇ ಸಮಯದಲ್ಲಿ, ಅಂತಹ ಭಾಷಣವನ್ನು ಸತ್ತವರ ಸಂಬಂಧಿಕರು ಸಹ ಮಾಡಿದ್ದರು. ಆ ವೇಳೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿತ್ತು ಎಂದು ಬಾರ್ಮರ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಹಲವಾರು ಬಲಪಂಥೀಯ ಸಂಘಟನೆಗಳು ದೇವಾಲಯಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಲು ಕರೆ ನೀಡಿದ ಮತ್ತು ಅವರಿಂದ ವಸ್ತುಗಳನ್ನು ಖರೀದಿಸದಂತೆ ಜನರನ್ನು ಒತ್ತಾಯಿಸಿದ ಘಟನೆಗಳು ಕೆಲವು ತಿಂಗಳುಗಳ ಹಿಂದೆ ವರದಿಯಾಗಿದ್ದವು.

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋಗೂ ಬೆಂಗಳೂರಿಗೂ ಸಂಬಂಧವಿಲ್ಲ. 2019ರ ಹಳೆಯ ಮತ್ತು ಸಂಬಂಧವಿಲ್ಲದ ರಾಜಸ್ಥಾನದ ಘಟನೆಯನ್ನು ಕರ್ನಾಟಕದ ಮುಸ್ಲಿಮರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಕೋಮು ಸಾಮರಸ್ಯ ಕದಡುವ ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಇದು ಜಮ್ಮುವಿನಲ್ಲಿ ನಿರ್ಮಾಣಾಗಿರುವ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights