ಮಂಡ್ಯದಲ್ಲಿ ಜೆಡಿಎಸ್‌ಗೆ ಶಾಕ್‌: ಪಕ್ಷ ತೊರೆದು BJP ಸೇರಲಿದ್ದಾರೆ ಲಕ್ಷ್ಮೀ ಅಶ್ವಿನ್‌ಗೌಡ!

ರಾಜಕೀಯ ಮತ್ತು ಪಕ್ಷಗಳಿಗಾಗಿ ಉನ್ನತ ಹುದ್ದೆಗಳನ್ನೇ ತೊರೆದು ಪಕ್ಷದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಮಂಡ್ಯದಲ್ಲಿ ಜೆಡಿಎಸ್‌ ಪಕ್ಷದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ತಮ್ಮ ಹುದ್ದೆಯನ್ನೇ ತೊರೆದಿದ್ದ ಲಕ್ಷ್ಮೀ ಅಶ್ವಿನ್‌ ಗೌಡ ಅವರು ಇದೀಗ ಜೆಡಿಎಸ್‌ ತೊರೆದು ಬಿಜೆಪಿ ಸೇರಲು ಮುಂದಾಗಿದ್ದಾರೆ.

ಭಾರತೀಯ ಕಂದಾಯ ಸೇವೆ (ಐಆರ್​ಎಸ್) ಅಧಿಕಾರಿಯಾಗಿದ್ದ ಲಕ್ಷ್ಮೀ ಅಶ್ವಿನ್‌ಗೌಡ ತಮ್ಮ ಹುದ್ದೆಯನ್ನು ತೊರೆದು ಜೆಡಿಎಸ್‌ ಸೇರಿದ್ದರು. ಆದರೆ, ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ ಕಾರ್ಯಕರ್ತರೇ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿದೆ.

ಲಕ್ಷ್ಮಿ ಅವರಿಗೆ ಜೆಡಿಎಸ್‌ನಿಂದ ಟಿಕೆಟ್​ ನೀಡುವುದಾಗಿ ಎರಡು ಬಾರಿ ಆಶ್ವಾಸನೆ ನೀಡಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ನಾಗಮಂಗಲದಿಂದ ಟಿಕೆಟ್‌ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ಟಿಕೆಟ್‌ ಮಿಸ್ಸಾಗಿತ್ತು. ನಂತರ, ಲೋಕಸಭಾ ಚುನಾವಣೆಯಲ್ಲಿ ಲಕ್ಷ್ಮೀ ಅವರಿಗೇ ಟಿಕೆಟ್‌ ನೀಡಬೇಕು ಎಂದು ಜೆಡಿಎಸ್‌ನ ಹಲವಾರು ಕಾರ್ಯಕರ್ತರು ಒತ್ತಡ ಹಾಕಿದ್ದರು. ಆದರೆ, ಜೆಡಿಎಸ್‌ ವರಿಷ್ಟರು ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ನೀಡಿದ್ದರು. ಇದು ಲಕ್ಷ್ಮೀ ಅವರಿಗೂ ಸೇರಿದಂತೆ ಸಾಕಷ್ಟು ಜೆಡಿಎಸ್‌ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿತ್ತು. ಕೆಲವು ಜೆಡಿಎಸ್‌ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ದವಾಗಿ ಮತ ಚಲಾಯಿಸುವುದಾಗಿಯೂ ಹೇಳಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ಜೆಡಿಎಸ್‌ ಮೇಲೆ ಸಿಟ್ಟಾಗಿರುವ ಲಕ್ಷ್ಮೀ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮುಂದುವರೆದ BJP ಅತೃಪ್ತರ ಆಕ್ರೋಶ: ಕೇಸರಿ ಪಕ್ಷದಲ್ಲಿ ಬಂಡಾಯದ ತಿರುವು?

ಮಂಡ್ಯದ ಮಳವಳ್ಳಿ ತಾಲೂಕಿನ ಕೋಡಹಳ್ಳಿ ಗ್ರಾಮದ ಲಕ್ಷ್ಮಿ ಅಶ್ವಿನಿ ಗೌಡ ಎಂಬಿಬಿಎಸ್​ ಪದವಿ ಪಡೆದಿದ್ದಾರೆ. 2013ರಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದರು.  2015ರಲ್ಲಿ ಐಆರ್​ಎಸ್​ ಅಧಿಕಾರಿಯಾಗಿ ಸೇವೆಗೆ ಸೇರಿದ್ದರು. 2017ರಲ್ಲಿ ಜೆಡಿಎಸ್​ ವರಿಷ್ಠರ ಆಶ್ವಾಸನೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಜೆಡಿಎಸ್‌ ಸೇರಿದ್ದರು.

ಶನಿವಾರವೇ ಅವರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ಅಮಿತ್‌ ಶಾ ಅವರ ಕಾರ್ಯಕ್ರಮ ಇರುವ ಕಾರಣ ಅವರ ಸೇರ್ಪಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಲಕ್ಷ್ಮಿ ಅವರ ಜತೆಗೆ ಅಕ್ಷಯ ಗೋಲ್ಡ್ ಸಂಸ್ಥೆಯ ಮಾಲೀಕರಾದ ಸತೀಶ್ ಕೂಡ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ರಾಜ್ಯದಲ್ಲಿ BJPಯನ್ನು ಅಧಿಕಾರಕ್ಕೆ ತರಲು ಯೋಗೇಶ್ವರ್ 09 ಕೋಟಿ ಸಾಲ ಮಾಡಿದ್ದರು: ರಮೇಶ್‌ ಜಾರಕಿಹೊಳಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights