ವಿಜಯನಗರ ಜಿಲ್ಲೆ ಪ್ರಕ್ರಿಯೆಗೆ ಸ್ವಪಕ್ಷೀಯರಿಂದಲೇ ವಿರೋಧ…!

ವಿಜಯನಗರ ಜಿಲ್ಲೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಕಮಲ ಪಾಳಯದ ರೆಡ್ಡಿ-ರಾಮುಲು ಆನಂದ್ ಸಿಂಗ್ ನಡೆಯನ್ನು ವಿರೋಧಿಸಿದ್ದಾರೆ. ವಿಜಯನಗರ ಜಿಲ್ಲೆ ಕನಸು ನನಸಾಗುವ ಸಂದರ್ಭದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಹಡಗಲಿ, ಹಗರಿಬೊಮ್ಮನಹಳ್ಳಿ ಶಾಸಕರು ವಿರೋಧಿಸಿ ಹೋರಾಟಕ್ಕೆ ಅಣಿಯಾಗಿದ್ದರೆ, ಬಡಿದಾಟದ ಪ್ರಕರಣದ ಕೈ ಶಾಸಕ ಗಣೇಶ್ ಬೆಂಬಲಿಸಿರುವುದು ಎಲ್ಲರ ಹುಬ್ಬೇರಿಸಿದೆ.

ಹೊಸಪೇಟೆ ವಿಜನಗರ ಜಿಲ್ಲೆಯ ರಚನೆಗೆ ಈಗ ಬಿಜೆಪಿಯಲ್ಲೇ ಅಪಸ್ವರ ಕೇಳಿ ಬಂದಿದೆ. ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು ಬಳ್ಳಾರಿ ಜಿಲ್ಲೆ ಅಖಂಡ ಜಿಲ್ಲೆಯಾಗಿ ಮುಂದುವರೆಯಲಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಮುಂದುವರೆದು ಸಿಎಂ ಯಡಿಯೂರಪ್ಪ ಅವರಿಗೆ ಮುಜುಗುರ ತರುವಂಥ ಹೇಳಿಕೆಯನ್ನು ನೀಡುತ್ತಿದ್ದಾರೆ. ನಿಯೋಗ ಹೋದವರೆಲ್ಲ ಸ್ವಾರ್ಥಿಗಳು ಎಂದು ಶಾಸಕ ಸೋಮಶೇಖರ ರೆಡ್ಡ ಹೀಗಳೆದಿದ್ದಾರೆ. ಹೀಗಾಗಿ ಹೊಸಪೇಟೆ ಜಿಲ್ಲೆಯಾಗಬೇಕೆಂದು ಯುದ್ಧೋತ್ಸಾಹದಲ್ಲಿದ್ದ ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಹೊಸಪೇಟೆಯನ್ನು ಜಿಲ್ಲೆಯನ್ನಾಗಿ ರಚಿಸುವ ಕುರಿತು ಸಚಿವ ಸಂಪುಟದಲ್ಲಿ ಅಜೆಂಡಾ ಇಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು. ಇದರ ಪ್ರತಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ನೇನು ವಿಜಯನಗರ ಜಿಲ್ಲೆಯೇ ಆಗಿಬಿಡುತ್ತದೆ ಎಂದುಕೊಳ್ಳುವಷ್ಟರಲ್ಲಿಯೇ ಸ್ವಪಕ್ಷದವರೇ ವಿರೋಧಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ಶಾಸಕ ಸೋಮಶೇಖರ ರೆಡ್ಡಿ, ಶ್ರೀರಾಮುಲು ತಿಳಿಸಿದ್ದಾರೆ.

ಆರು ತಾಲೂಕುಗಳನ್ನೊಳಗೊಂಡು ವಿಜಯನಗರ ಜಿಲ್ಲೆಯಲ್ಲಿ ಕೂಡ್ಲಿಗಿ, ಸಂಡೂರು ತಾಲೂಕು ಸೇರಿಸದೇ ಇರುವುದಕ್ಕೆ ಆ ತಾಲೂಕಿನಲ್ಲಿ ವಿರೋಧ ವ್ಯಕ್ತವಾಗಿದೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗಲಿ ಆದರೆ ವಿಜಯನಗರ ಜಿಲ್ಲೆಯಾಗಲಿ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ಲಿಂದ ಹೆಚ್ಚು ಕೇಳಿಬರುತ್ತಿವೆ. ಈಗಾಗಲೇ ಕೂಡ್ಲಿಗಿ, ಸಂಡೂರಿನಲ್ಲಿ ಸಭೆಗಳು ನಡೆದು ಅಭಿಪ್ರಾಯ ಸಂಗ್ರಹಣೆಯಾಗುತ್ತಿದೆ. ಇನ್ನು ಹಗರಿಬೊಮ್ಮನಹಳ್ಳಿ ತಾಲೂಕು ಭೌಗೋಳಿಕವಾಗಿ ಜಿಲ್ಲಾ ಕೇಂದ್ರವಾಗಲು ಸೂಕ್ತವಾಗಿದೆ. ಸುತ್ತಲೂ ಐದು ತಾಲೂಕುಗಳು ಇರಲಿದ್ದು, ಜಿಲ್ಲಾ ಕೇಂದ್ರ ಮಾಡಬೇಕು ಎಂಬುದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಅಭಿಪ್ರಾಯ. ಅದೇ ರೀತಿ ಹೂವಿನಹಡಗಲಿ ತಾಲೂಕಿನಲ್ಲಿಯೂ ಸಹ ಚರ್ಚೆಯಾಗುತ್ತಿದ್ದು, ವಿಜಯನಗರ ಜಿಲ್ಲೆಯಾಗಿ ಹಡಗಲಿ ಪಟ್ಟಣ ಯಾಕಾಗಬಾರದು ಎಂದು ಕೈ ಶಾಸಕ ಪಿ ಟಿ ಪರಮೇಶ್ವರ್ ನಾಯಕ್ ಪ್ರಶ್ನೆ ಮಾಡುವ ಮೂಲಕ ಹೊಸಪೇಟೆ ಜಿಲ್ಲಾಕೇಂದ್ರವಾಗುವುದನ್ನು ವಿರೋಧಿಸಿದ್ದಾರೆ.

ಈ ಹಿಂದೆ ಆಂಧ್ರದ ಗಡಿಭಾಗದಲ್ಲಿರುವ ಬಳ್ಳಾರಿ ನಗರ ಆಂಧ್ರಕ್ಕೆ ಸೇರಬೇಕೆ? ಕರ್ನಾಟಕಕ್ಕೆ ಸೇರಬೇಕೆ? ಎಂಬ ವಿಚಾರ ಬಂದಾಗ ಬಳ್ಳಾರಿಯ ಜನತೆ ಕರ್ನಾಟಕಕ್ಕೆ ಸೈ ಎಂದರು. ಈ ಕಾರಣಕ್ಕೆ ಆಂಧ್ರದ ಕಪಿಮುಷ್ಟಿಯಿಂದ ಹೊರಬರಬೇಕು ಎಂಬ ಕಾರಣಕ್ಕೆ ಬಳ್ಳಾರಿಯನ್ನು ಜಿಲ್ಲೆಯಾಗಿ ಘೋಷಿಸಲಾಯಿತು. ಆದರೆ ಭೌಗೋಳಿಕವಾಗಿ ದೂರವಿರುವ ತಾಲೂಕುಗಳ ಸಲುವಾಗಿ ವಿಜಯನಗರ ಜಿಲ್ಲೆಯಾಗಲು ಮುಂದಾದಾಗ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳ ಶಾಸಕರು ತಮ್ಮ ರಾಜಕೀಯ ಅಸ್ತಿತ್ವಕ್ಕೆ ಪರ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಅದರಲ್ಲೂ ಹಲವು ದಶಕಗಳ ಕಾಲ ಆಳಿದ ರೆಡ್ಡಿ-ರಾಮುಲು ವಿರೋಧಿಸುವ ಮೂಲಕ ವಿಜಯನಗರ ದಂಗಲ್ ಇದೀಗ ಆರಂಭವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights