ಸರ್ಕಾರಿ ನೌಕರರಿಗೆ ಕಠಿಣ ನಿಯಮಗಳನ್ನು ರೂಪಿಸುತ್ತಿದೆ ಕರ್ನಾಟಕ ಸರ್ಕಾರ!
ಸರ್ಕಾರಿ ನೌಕರರನ್ನು ಮತ್ತಷ್ಟು ಶಿಸ್ತುಬದ್ದಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಕರ್ನಾಟಕ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 2020 (ತಿದ್ದುಪಡಿ) ಕರಡನ್ನು ಹೊರತಂದಿದೆ. ಇದರನ್ವಯ ಸೇವೆಯಿಂದ ತೆಗೆದುಹಾಕುವುದು ಮತ್ತು ಕಡ್ಡಾಯ ನಿವೃತ್ತಿ ಸೇರಿದಂತೆ ಕಠಿಣ ಕ್ರಮ ಜರುಗಸಲು ಮುಂದಾಗಿದೆ.
ಸರ್ಕಾರಿ ನೌಕರರ ಅಧಿಕಾರ ದುರುಪಯೋಗ, ದುಷ್ಕೃತ್ಯ, ಲೈಂಗಿಕ ಕಿರುಕುಳ ಮತ್ತು ಅನಧಿಕೃತ ರಜೆಗಳನ್ನು ನಿಯಂತ್ರಿಸುವುದಕ್ಕಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು- II) ಉಪ ಕಾರ್ಯದರ್ಶಿಯವರು ಕರಡು ನಿಯಮಗಳನ್ನು ಮೇ 2 ರಂದು ಅಧಿಸೂಚಿಸಿದ್ದಾರೆ.
ಸರ್ಕಾರವು ಕರಡು ನಿಯಮಗಳು ಮತ್ತು ನಿಯಮಗಳಲ್ಲಿನ ಪ್ರಸ್ತಾವಿತ ಬದಲಾವಣೆಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಸರ್ಕಾರಿ ನೌಕರರ ಶಿಸ್ತು ನಿಯಮಾವಳಿ ಕರಡಿನ ಮುಖ್ಯಾಂಶಗಳು:
- ಕರಡು ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಒಂದು ತಿಂಗಳಿನಿಂದ ನಾಲ್ಕು ತಿಂಗಳವರೆಗೆ ಅನಧಿಕೃತ ಗೈರುಹಾಜರಾದ ಸಂದರ್ಭದಲ್ಲಿ ಸರ್ಕಾರವು ಮೂರು ವಾರ್ಷಿಕ ವೇತನ ಭಡ್ತಿಯನ್ನು ತಡೆಹಿಡಿಯಬಹುದು ಮತ್ತು ನಾಲ್ಕು ತಿಂಗಳುಗಳಿಗೂ ಹೆಚ್ಚು ಕಾಲ ಅನಧಿಕೃತವಾಗಿ ಗೈರಾದರೆ ಅಂತಹ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ.
- ಸರ್ಕಾರಿ ಸಿಬ್ಬಂದಿಗಳು ವರದಕ್ಷಿಣೆ ಕೊಡುವುದು ಅಥವಾ ತೆಗೆದುಕೊಳ್ಳುವುದು ಕಂಡುಬಂದರೆ ನೌಕರರನ್ನು ತೆಗೆದುಹಾಕಲಾಗುತ್ತದೆ.
- ಸರ್ಕಾರಿ ಹಣವನ್ನು 10,000 ಕ್ಕಿಂತ ಕಡಿಮೆ ದುರುಪಯೋಗಪಡಿಸಿಕೊಂಡರೆ ಐದು ವರ್ಷಗಳ ಕಾಲ ವೇತನ ಹೆಚ್ಚಿಸುವುದನ್ನು ತಡೆಹಿಡಿಯಲಾಗುತ್ತದೆ, ಹಾಗೂ ವೇತನವನ್ನು ಕಡಿಮೆ ಹಂತಕ್ಕೆ ಇಳಿಸಲಾಗುತ್ತದೆ.
- ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಂಡ ಸಂದರ್ಭದಲ್ಲಿ ನೌಕರನನ್ನು ಕಡ್ಡಾಯ ನಿವೃತ್ತಿಯ ಮೇಲೆ ಕಳುಹಿಸಲಾಗುತ್ತದೆ.
- ಕಚೇರಿ ಕಾರ್ಯವಿಧಾನದ ನಿಯಮಾವಳಿಯಲ್ಲಿ ಸೂಚಿಸಲಾದ ಸಮಯ ಮಿತಿಯನ್ನು ಮೀರಿ ಅವಿವೇಕದ ಅಥವಾ ನ್ಯಾಯಸಮ್ಮತವಲ್ಲದ ವಿಳಂಬದ ಮಾಡಿದ ನೌಕರರನ್ನು ಮೊದಲ ಸಂದರ್ಭದಲ್ಲಿ ‘ಸೆನ್ಸಾರ್’ ಮಾಡಲಾಗುತ್ತದೆ ಮತ್ತು ನಂತರದ ಸಂದರ್ಭಗಳಲ್ಲಿ ಕನಿಷ್ಠ ಒಂದು ವರ್ಷದ ವೇತನ ಭಡ್ತಿಯನ್ನು ತಡೆಹಿಡಿಯಲಾಗುತ್ತದೆ.
- ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಭಾಗಿಯಾದರೆ ನೌಕರರನ್ನು ಕೆಳ ಹುದ್ದೆಗೆ ಇಳಿಸಲಾಗುತ್ತದೆ.
- ಉನ್ನತ ಅಧಿಕಾರಿಗಳ ಲಿಖಿತ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ವಾರ್ಷಿಕ ವೇತನ ಭಡ್ತಿಯನ್ನು ತಡೆಹಿಡಿಯಲಾಗುತ್ತದೆ.
- ಯಾವುದೇ ಕಂಪನಿ / ಸಂಸ್ಥೆಯಲ್ಲಿ ಕುಟುಂಬದ ಸದಸ್ಯರಿಗೆ ಉದ್ಯೋಗ ಪಡೆಯಲು ತಮ್ಮ ಉದ್ಯೋಗದ ಅಧಿಕಾರವನ್ನು ಪ್ರಭಾವವನ್ನು ಬಳಸಿದರೆ ವೇತನವನ್ನು ಕಡಿಮೆ ಪ್ರಮಾಣಕ್ಕೆ ಇಳಿಸಲಾಗುತ್ತದೆ.
- 1966ರ ಕರ್ನಾಟಕ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಅಥವಾ ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಮತ್ತು ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗಿರುವ ಕುಟುಂಬ ಸದಸ್ಯರಿಗೆ ಒಪ್ಪಂದವನ್ನು ನೀಡುವ ಸಂದರ್ಭದಲ್ಲಿ ನೌಕರನನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಯ ಮೇಲೆ ಕಳುಹಿಸಲಾಗುತ್ತದೆ.

