ಸಿದ್ದವಾಗಿದೆ ಕೊರೊನಾ ಪರೀಕ್ಷಾ ಕಿಟ್‌: 50 ನಿಮಿಷದಲ್ಲಿ ಸೋಂಕು ಪತ್ತೆ

ಬ್ರಿಟನ್ ಸಂಶೋಧಕರು ಸ್ಮಾರ್ಟ್‌ಫೋನ್ ಆಧರಿತ ಕೊರೊನಾ ವೈರಸ್‌ ಪರೀಕ್ಷಾ ಕಿಟ್‌ ವಿನ್ಯಾಸಗೊಳಿಸಿದ್ದಾರೆ. ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ 50 ನಿಮಿಷಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈಗಿನ ಬಹುತೇಕ ಪರೀಕ್ಷೆಗಳಲ್ಲಿ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಿದ 24ರಿಂದ 48 ಗಂಟೆ ಬಳಿಕ ಪರೀಕ್ಷಾ ವರದಿ ಸಿಗುತ್ತದೆ . ಇದನ್ನರಿತ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ (ಯುಇಎ) ಸಂಶೋಧಕರು ಈ ಕಿಟ್ ಅಭಿವೃದ್ಧಿಪಡಿಸಿದ್ದಾರೆ.

ಸ್ವಯಂ ನಿರ್ಧಾರದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ವೈದ್ಯಕೀಯ ಸಿಬ್ಬಂದಿಯು ಶೀಘ್ರವಾಗಿ ಕರ್ತವ್ಯಕ್ಕೆ ಹಾಜರಾಗಲು ಈ ಕಿಟ್ ನೆರವಾಗಲಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಒಮ್ಮೆಗೆ 16 ಮಾದರಿಗಳು ಹಾಗೂ ಲ್ಯಾಬ್ ಆಧರಿತ ಪತ್ತೆ ಯಂತ್ರವಾಗಿದ್ದಲ್ಲಿ 384 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬಹುದು.

ಮನೆಯಿಂದ ಕೆಲಸ ಮಾಡುತ್ತಿರುವ ಅಥವಾ ರೋಗಿಗಳಿಂದ ಸೋಂಕು ಹರಡುವ ಸಾಧ್ಯತೆಯಿರುವ ‘ರಾಷ್ಟ್ರೀಯ ಆರೋಗ್ಯ ಸೇವೆ’ಯಡಿ (ಎನ್‌ಎಚ್‌ಎಸ್) ಕರ್ತವ್ಯದಲ್ಲಿರುವ ಸಿಬ್ಬಂದಿಯನ್ನು ಪರೀಕ್ಷಿಸುವುದು ಈ ಉಪಕರಣ ತಯಾರಿಸಿದ್ದರ ಉದ್ದೇಶ ಎಂದು ಮುಖ್ಯ ಸಂಶೋಧಕ ಜಸ್ಟಿನ್ ಒಗ್ರೆಡಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕಿಟ್ ವಿನ್ಯಾಸ ಪ್ರಕ್ರಿಯೆ ಆರಂಭವಾಗಿತ್ತು. ಇನ್ನೆರಡು ವಾರಗಳಲ್ಲಿ ಆಸ್ಪತ್ರೆಗಳಲ್ಲಿ ಇದು ಲಭ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗಂಟಲಿನ ದ್ರವದ ಮಾದರಿಯಲ್ಲಿರುವ ವಂಶವಾಹಿ ಅಂಶಗಳ ಅನುಕ್ರಮಣಿಕೆ ಆಧರಿಸಿ ಮೂರು ನಿಮಿಷಗಳ ಅರ್‌ಎನ್‌ಎ ಹೊರತೆಗೆಯುವಿಕೆ ಪ್ರಕ್ರಿಯೆ ಮೂಲಕ, ಕೋವಿಡ್-19 ಸೋಂಕು ಇದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಲಾಗುತ್ತದೆ. ‘ಇದು ಅತ್ಯಂತ ಸರಳ ಪ್ರಕ್ರಿಯೆಯಾಗಿದ್ದು, ಆರೋಗ್ಯ ಸೇವೆ ನೀಡುತ್ತಿರುವ ಯಾವುದೇ ಸಿಬ್ಬಂದಿ ಈ ಕಿಟ್ ಬಳಸಿ ಪರೀಕ್ಷೆ ನಡೆಸಬಹುದು’ ಎಂದು ಒಗ್ರಾಡಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights