‘ಸ್ವದೇಶಿ ದರ್ಶನ’ ಯೋಜನೆಯ 9ಕೋಟಿ ಹಣ ಬಳಕೆಯಾಗದೇ ವಾಪಸ್…!

ಕರಾವಳಿ ಜಿಲ್ಲೆ ಉತ್ತರಕನ್ನಡ ಅಂದಾಕ್ಷಣ ಮೊದಲು ನೆನಪಾಗೋದೇ ವಿಶಾಲ ಕಡಲತೀರಗಳು. ರಾಜ್ಯದಲ್ಲಿಯೇ ಅತೀ ಹೆಚ್ಚು ಕಡಲತೀರಗಳನ್ನ ಹೊಂದಿರುವ ಮೂಲಕ ಪ್ರತಿನಿತ್ಯ ರಾಜ್ಯ ಹೊರರಾಜ್ಯಗಳಷ್ಟೇ ಅಲ್ಲದೇ ಹೊರದೇಶಗಳ ಪ್ರವಾಸಿಗರನ್ನೂ ಜಿಲ್ಲೆ ಆಕರ್ಷಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರನ್ನ ಆಕರ್ಷಿಸಲು ಕಡಲತೀರಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮೂರು ವರ್ಷಗಳ ಹಿಂದೆ ಸ್ವದೇಶಿ ದರ್ಶನ ಎನ್ನುವ ಯೋಜನೆಯೊಂದನ್ನ ರೂಪಿಸಿತ್ತು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆಗೆ ಇರಿಸಲಾಗಿದ್ದ ಹಣ ಬಳಕೆಯಾಗದೇ 9ಕೋಟಿ ಹಣ ವಾಪಸ್ ಹೋಗುವಂತಾಗಿದ್ದು ದುರಂತ..

ವಿಶಾಲವಾದ ಕಡಲತೀರಗಳು, ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿ ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರಕನ್ನಡ. ಅದ್ರಲ್ಲೂ ಇಲ್ಲಿನ ಕಡಲತೀರಗಳನ್ನ ವೀಕ್ಷಿಸೋದಿಕ್ಕೆ ಅಂತಾನೇ ಪ್ರತಿನಿತ್ಯ ಜಿಲ್ಲೆಯ ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರದ ಠಾಗೋರ್ ಕಡಲತೀರಗಳಿಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂದಂತಹ ಪ್ರವಾಸಿಗರು ಇಲ್ಲಿನ ಸಮುದ್ರ ತೀರಗಳಲ್ಲಿ ಈಜಾಡಿ ಎಂಜಾಯ್ ಮಾಡುವುದರ ಜೊತೆಗೆ ಇಲ್ಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ತೆರಳುತ್ತಾರೆ. ಆದ್ರೆ ಕೆಲವೊಂದು ಬೀಚ್ ಗಳಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳು ಇಲ್ಲದಿರೋದು ಪ್ರವಾಸಿಗರಿಗೆ ಸಾಕಷ್ಟು ತೊಂದರೆಯನ್ನ ಉಂಟುಮಾಡುತ್ತಿತ್ತು.

ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಕೇಂದ್ರ ಸರ್ಕಾರದೊಂದಿಗೆ ಜಿಲ್ಲೆಯ ಕಡಲತೀರಗಳನ್ನ ಅಭಿವೃದ್ಧಿಪಡಿಸಲು ಸ್ವದೇಶಿ ದರ್ಶನ್ ಎನ್ನುವ ಯೋಜನೆಯೊಂದನ್ನ ರೂಪಿಸಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ 9 ಕೋಟಿ ಹಣವನ್ನ ಮೀಸಲಿರಿಸಿತ್ತು. ಆದ್ರೆ ಯೋಜನೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಶೀಲನೆ ನಡೆಸದೇ ತಪ್ಪಾಗಿ ಕ್ರಿಯಾಯೋಜನೆ ರೂಪಿಸಿದ ಪರಿಣಾಮ ಯೋಜನೆಗೆ ಬಿಡುಗಡೆಯಾಗಿದ್ದ ಹಣ ವಾಪಸ್ ಹೋಗುವಂತಾಗಿದೆ.

ಇನ್ನು ಸ್ವದೇಶಿ ದರ್ಶನ್ ಯೋಜನೆಯಡಿ ಕಡಲತೀರಗಳಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳನ್ನ ಅಭಿವೃದ್ಧಿ ಪಡಿಸುವುದರ ಜೊತೆಗೆ ಪ್ರವಾಸಿಗರಿಗೆ ಬೋಟ್ ಹೌಸ್, ಬೀಚ್ ರೆಸ್ಟೋರೆಂಟ್ ನಂತಹ ವಿನೂತನ ಅವಕಾಶಗಳನ್ನ ಸಹ ಒದಗಿಸುವ ನಿಟ್ಟಿನಲ್ಲಿ ಯೋಜನೆಯನ್ನ ಸಿದ್ಧಪಡಿಸಲಾಗಿತ್ತು. ಇದರ ಜೊತೆಗೆ ಇಂಚ್ ಪ್ಯಾರಾಸೇಲಿಂಗ್ ನಂತಹ ವಿನೂತನ ಜಲಸಾಹಸ ಕ್ರೀಡೆಗಳು, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜೆಟ್ ಸ್ಕ್ವಾಡ್, ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗಳು ಸಹ ಸ್ವದೇಶೀ ದರ್ಶನ್ ಅಡಿ ಕಡಲತೀರಗಳಲ್ಲಿ ಅಳವಡಿಕೆಯಾಗಲಿದ್ದವು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕ್ರಿಯಾಯೋಜನೆ ತಪ್ಪಾಗಿದ್ದರಿಂದ ಹಣವನ್ನ ವಿನಿಯೋಗಿಸುವುದು ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂತೆ ಆಗದಿರಲೀ ಎನ್ನುವ ನಿಟ್ಟಿನಲ್ಲಿ ಹೊಸದಾಗಿ ಕ್ರಿಯಾಯೋಜನೆ ರೂಪಿಸಲಾಗುವುದು ಅಂತಾ ಜಿಲ್ಲಾಧಿಕಾರಿ ಹೇಳ್ತಾರೆ, ಆದ್ರೆ ಹೊಸದಾಗಿ ಕ್ರಿಯಾಯೋಜನೆ ರೂಪಿಸಲು ಸಾಕಷ್ಟು ಸಮಯಾವಕಾಶದ ಅಗತ್ಯತೆ ಇದ್ದು ಕೇಂದ್ರ ಸರ್ಕಾರ ಮತ್ತೆ ಮೊದಲಿನಷ್ಟೇ ಹಣ ಬಿಡುಗಡೆ ಮಾಡುವ ಸಾಧ್ಯತೆ ಸಹ ಇಲ್ಲವಾಗಿದೆ..

ಕಡಲತೀರಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಉತ್ತಮ ಯೋಜನೆ ರೂಪಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಪಸ್ ಹೋಗುವಂತಾಗಿರೋದು ನಿಜಕ್ಕೂ ದುರಂತವೇ. ಇನ್ನಾದ್ರೂ ಸಂಬಂಧಪಟ್ಟ ಸಚಿವರುಗಳು ಇತ್ತ ಗಮನಹರಿಸಿ ಇನ್ನಾದ್ರೂ ಯೋಜನೆ ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights