ಹಳ್ಳಿ ಮಾತು-3: ಕಾಣೆಯಾದ ಕೃಷಿ ಕೂಲಿಕಾರರು! ಲಯ ತಪ್ಪಿದ ಗ್ರಾಮೀಣ ಜನ-ಜೀವನ

ರೈತ ನಾಯಕರು, ಶಾಸಕರು ಆಗಿದ್ದ ಕೆ.ಎಸ್. ಪುಟ್ಟಣ್ಣಯ್ಯರವರು ಯಾವಾಗಲೂ ರೈತ ಮತ್ತು ಕೃಷಿ ಕೂಲಿಕಾರರನ್ನು ಬುಗುರಿ ಹಾಗೂ ಚಾಟಿಗೆ ಹೋಲಿಕೆ ಮಾಡುತ್ತಿದ್ದರು. ಆದರೆ, ಇವತ್ತಿನ ಗ್ರಾಮೀಣ ಜನ-ಜೀವನದ ‘ಈ  ಬುಗುರಿ ಹಾಗೂ ಚಾಟಿ ನಡುವಣ ಲಯ’ವು ಬಿಕ್ಕಟ್ಟು ಗ್ರಸ್ಥ ಅಸಮತೋಲನಕ್ಕೆ ಸಿಲುಕಿಗೊಂಡಿದೆ. ಬುಗುರಿ ಆಕಾರಕ್ಕೆ ಚಾಟಿ ಸಾಲುತ್ತಿಲ್ಲ; ಚಾಟಿ ಉದ್ದಕ್ಕೆ ಬುಗುರಿ ಹೊಂದುತ್ತಿಲ್ಲ. ಹೇಗೋ ಮಾಡಿ, ಬುಗುರಿ – ಚಾಟಿ ಒಂದಾಗಿ ಬುಗುರಿ ತಿರುಗುವಂತಾದರೆ ಹಲವಾರು ಗುನ್ನಗಳ ಪೆಟ್ಟು: ಅದೂ ಮಾರಾಣಾಂತಿಕವೇ.

ಒಂದು ಕಡೆ ಕೃಷಿ ಕೂಲಿಕಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಇನ್ನೊಂದು ಕಡೆ ಕೃಷಿ ಕೆಲಸಕ್ಕೆ ಕೂಲಿಕಾರರ ಅಲಭ್ಯತೆಯೂ ಬೆಳೆಯುತ್ತಿದೆ. ಕೃಷಿ ಬಿಕ್ಕಟ್ಟು ಉಂಟು ಮಾಡಿರುವ  ಹಲವಾರು ಸಾಮಾಜಿಕ-ಆರ್ಥಿಕ ವಿರೋಧಬಾಸಗಳಲ್ಲಿ ಇದೊಂದು ಪ್ರಮುಖ ವಿದ್ಯಮಾನ. ಜಾಗತೀಕರಣ ಧೋರಣೆಗಳ ಪರಿಣಾಮ ದೊಡ್ಡ ಸಂಖ್ಯೆಯಲ್ಲಿ  ಬೆಳೆಯುತ್ತಿರುವ ಕೃಷಿ ಕೂಲಿಕಾರರು, ಕೃಷಿ ಕೆಲಸಗಳಿಗೆ ಬೆನ್ನು ತೋರುತ್ತಿದ್ದಾರೆ.  “ಆಳು ಗೊತ್ತು ಮಾಡಿ ಕೆಲಸ ಮಾಡಿಸಿಕೊಳ್ಳಬೇಕಾದರೆ ಸಾಕು ಸಾಕಾಗುತ್ತೇ; ಮೊದಲೇ ಮುಂಗಡ ಕೂಲಿ ಪಾವತಿಸಿದ್ದರೂ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಸಿಗುವುದಿಲ್ಲ”  ಎಂದು ಭೀಮನಕೆರೆ ಗ್ರಾಮದ ಜಯಶಂಕರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸ್ವಾಭಿಮಾನದ, ಪ್ರಾಕೃತಿಕ ಮಡಿಲಿನ ಅನುಸಂಧಾನದ ಸಂತೃಪ್ತಿ ಭಾವವನ್ನು ಕೃಷಿಕರು ಕಳೆದುಕೊಂಡು ದಶಕಗಳೇ ಆಗಿವೆ. ಈಗ ಇದೊಂದು ಒತ್ತಡದ ವೃತ್ತಿಯಾಗಿದೆ. ಪ್ರತಿಯೊಂದು ಹಂತದಲ್ಲೂ ಅನಿಶ್ಚತೆ! ಲಾಗುವಾಡುಗಳ ಬೆಲೆ ಏರಿಕೆಯೊಂದಿಗಿನ ಕತ್ತಿವರಸೆಯಲ್ಲಿ ಬೇಸಾಯದ ಬಂಡವಾಳಕ್ಕೆ ಪರದಾಟ ಸೃಷ್ಟಿಸುವ ಒತ್ತಡ ಒಂದೆಡೆಯಾದರೆ, ಅಸ್ಥಿರ, ಅನಿಶ್ಚಿತ ಮಾರುಕಟ್ಟೆಯೊಂದಿಗಿನ ಸರಸದಲ್ಲಿ ಬಂಡವಾಳ ವಾಪಸ್ಸಾತಿ ನಿರೀಕ್ಷೆ ಎಲ್ಲಿ ಹುಸಿಯಾಗುವುದೋ ಎಂಬ ಭಯ ಸೃಷ್ಟಿಸುವ ಒತ್ತಡ ಇನ್ನೊಂದೆಡೆ. ಹೀಗೆ ಕೃಷಿ ಒತ್ತಡದ ಆಯಾಮಗಳು ಹಲವು.

ಕೃಷಿ ಕೂಲಿಕಾರರೇನೂ ಒತ್ತಡ ಮುಕ್ತರಲ್ಲ. ಬೀಳು ಬಿಡುತ್ತಿರುವ ಸಂದರ್ಭಗಳ ಹೆಚ್ಚಳ, ಕೃಷಿ ಕೆಲಸದಲ್ಲಿ ಹೆಚ್ಚಾಗುತ್ತಿರುವ ಯಂತ್ರೋಪಕರಣ, ಕಳೆನಾಶಕಗಳ ಬಳಕೆ; ಹೀಗೆ ಹಲವು ಕಾರಣಗಳಿಂದಾಗಿ ಕೂಲಿ ಕೆಲಸದ ಲಭ್ಯತೆಯಲ್ಲಿ ತೀವ್ರವಾದ ಕಡಿತ ಉಂಟಾಗಿದೆ. ಇದರಿಂದಾಗಿ ದುಡಿಮೆ ಅವಕಾಶ ನಿಶ್ಚಿತವಾಗಿಲ್ಲ. ಅನಿಶ್ಚಿತವಾದ  ಕೂಲಿಕಾರರ ಬದುಕು, ನಿಶ್ಚಿತ ಕೆಲಸದ ಅವಕಾಶಕ್ಕಾಗಿ ಗ್ರಾಮಗಳಿಂದ ಗ್ರಾಮಗಳಿಗೆ, ಗ್ರಾಮಗಳಿಂದ ನಗರ -ಮಹಾನಗರಗಳಿಗೆ ಅಲೆದಾಡುತ್ತಿದೆ. ಈ ಅಲೆದಾಟದಲ್ಲಿ ಹಿಂದೆ ಬಿದ್ದವರು ಮಾತ್ರವೇ ಊರುಗಳಲ್ಲಿ ಇದ್ದಾರೆ. ಇತ್ತ ಕೃಷಿ ಕೆಲಸ ತೊರೆಯದೇ, ಅತ್ತ ಹೆಚ್ಚಿನ ದಿನಗೂಲಿ ನಿರೀಕ್ಷೆಯನ್ನು ಕಳೆದುಕೊಳ್ಳದೇ ಡೋಲಾಯಮಾನದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. “ಮೂವತ್ತು ವರ್ಷದ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದವರೇ ಈಗ ಕೂಲಿ ಕೆಲಸಕ್ಕೆ ಬರುತ್ತಿದ್ದಾರೆ. ಯುವಕರು ಕೃಷಿಯೇತರ ದೈಹಿಕ ದುಡಿಮೆಗೆ ಒಲವು ತೋರುತ್ತಿದ್ದಾರೆ. 45-50 ವರ್ಷಕ್ಕಿಂತ ಮೇಲಿನ ವಯಸ್ಸಿನವರು ಮಾತ್ರವೇ ಕೆಲಸಕ್ಕೆ ಬರುತ್ತಿದ್ದಾರೆ. ವಯಸ್ಸು ಮತ್ತು ಇತರೆ ಕಾರಣಗಳಿಂದಾಗಿ ದೈಹಿಕ ಸಾಮಾರ್ಥ್ಯ ದುರ್ಬಲವಾದವರನ್ನು ಆಶ್ರಯಿಸಬೇಕಿರುವುದರಿಂದ ದುಡಿಮೆ ಉತ್ಪಾದಕತೆ ಆಶಾದಾಯಕವಾಗಿಲ್ಲ” ಎನ್ನುತ್ತಾರೆ ಬನ್ನಹಳ್ಳಿ ಕೃಷಿಕ ಶಿವು.                                                          ‌‌‌‌‌‌

ಏರುತ್ತಿರುವ ಜೀವನ ವೆಚ್ಚ; ಜೀವನ ವೆಚ್ಚಕ್ಕೆ ಯಾವುದೇ ರೀತಿಯಲ್ಲೂ ಸರಿ ಹೊಂದದ ಅನಾಕರ್ಷಕ ಕೂಲಿ ದರ, ಜಾತಿ-ಅಸ್ಪೃಶ್ಯತೆ ಮುಂತಾದ ತಾರತಮ್ಯದ ಪರಿಸರ, ಯುವಕರು ಕೃಷಿ ಕೂಲಿ ಕೆಲಸದಿಂದ ಹೊರಗುಳಿಯುವಂತೆ ಮಾಡಿವೆ. ಜಾಗತೀಕರಣ ಧೋರಣೆಗಳ ಈ ಅವಧಿಯಲ್ಲಿ ಕಟ್ಟಡ ನಿರ್ಮಾಣ, ಸಾರಿಗೆ, ಹಮಾಲಿ, ಹೋಟೆಲ್-ರೆಸ್ಟೋರೆಂಟ್, ವ್ಯಾಪಾರ ಸಂಬಂಧಿ ಚಟುವಟಿಕೆ ಮುಂತಾದ ಕೃಷಿಯೇತರ ಚಟುವಟಿಕೆಗಳು ಭಾರೀ ಬೆಳವಣಿಗೆಯನ್ನು ಕಂಡಿವೆ. ಕೃಷಿ ಕೂಲಿ ಕೆಲಸದಿಂದ ದೊಡ್ಡ ಪ್ರಮಾಣದಲ್ಲಿ ಕೂಲಿಕಾರರನ್ನು ಸೆಳೆದಿರುವ ಕ್ಷೇತ್ರವೆಂದರೆ ಕಟ್ಟಡ ನಿರ್ಮಾಣ.

ಇರುವ ಕೆಲವೇ ಲಭ್ಯ ಕೃಷಿ ಕೂಲಿಕಾರರನ್ನು ನಿರ್ದಿಷ್ಟ ಅವಧಿಯಲ್ಲೇ ಕೃಷಿ ಕೆಲಸಕ್ಕೆ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ, ಕೆಲಸಕ್ಕಾಗಿ ರೈತನ ಮನೆ ಬಾಗಿಲಿಗೆ ಎಡ ತಾಕುತ್ತಿದ್ದ ಕೃಷಿ ಕೂಲಿಕಾರರ ಮನೆಗೆ ರೈತನೇ ಹೋಗುವಂತಾಗಿದೆ. ಇದೇ ಜಯಶಂಕರ್ ರವರ ಮಾತಿನಲ್ಲಿ ವ್ಯಕ್ತವಾಗಿರುವ ಅಸಮಾಧಾನದ ಒಳ ಧ್ವನಿ. ವಾಸ್ತವದಲ್ಲಿ ಬೆಳೆ ಬದಲಾವಣೆ, ಬೆಳೆ ವಿಧಾನ ಪದ್ಧತಿಯಲ್ಲಾದ ಮಾರ್ಪಾಡು, ಕಳೆ-ಕೀಟನಾಶಕಗಳ ಬಳಕೆಯಲ್ಲಿ ತೀವ್ರ ಹೆಚ್ಚಳ, ಉಳುಮೆ-ಒಕ್ಕಣೆ ಮತ್ತಿತರ ಚಟುವಟಿಕೆಗಳಿಗೆ ಯಂತ್ರೋಪಕರಣಗಳ ಪ್ರವೇಶದಿಂದಾಗಿ ವೇತನ ಶ್ರಮ ಶಕ್ತಿಯ ಅಗತ್ಯವೇ ಕಡಿಮೆ ಆಗಿದೆ.

ಉದಾಹರಣೆಗೆ ಶೇಂಗಾ (ಕಡಲೆಕಾಯಿ) ಬೆಳೆ, ಮಂಡ್ಯ ಜಿಲ್ಲೆಯ ಮಳೆಯಾಶ್ರಿತ, ಅರೆ ನೀರಾವರಿ ಪ್ರದೇಶದಲ್ಲಿ ಹಚ್ವಿನ ಭೂ ಪ್ರದೇಶವನ್ನು ಆಕ್ರಮಿಸಿತ್ತು. ಅಗ್ಗದ ತಾಳೆ ಎಣ್ಣೆ ಆಮದಿನಿಂದ ಶೇಂಗಾ ಹೊಲಗಳೆಲ್ಲಾ ಬಹುತೇಕ ಹಿಪ್ಪುನೇರಳೆ ತೋಟಗಳಾದವು. ಹಿಪ್ಪುನೇರಳೆಯ ಎಲೆ ಕೀಳುವ ಬದಲು ಕಡ್ಡಿಯನ್ನೇ ಕೂಯ್ದು ಹಾಗೇಯೇ ರೇಷ್ಮೆ ಹುಳುಗಳಿಗೆ ಮೇವು ಒದಗಿಸುವ ಕ್ರಮ ಜಾರಿಯಲ್ಲಿದೆ. ಮತ್ತೆ ಈಗ ಮರಗಡ್ಡಿ ರೇಷ್ಮೆ ಬೇಸಾಯ ಬಂದಿರುವುದರಿಂದ ತೋಟದ ಕೆಲಸಗಳ ಕೃಷಿ ಕೂಲಿಕಾರರ ಅಗತ್ಯ ಕಡಿಮೆ ಬೀಳುತ್ತಿದೆ. “ಯಂತ್ರೋಪಕರಣಗಳ ಉಳುಮೆಯಿಂದಾಗಿ ಕೋಲು ಗುದ್ದಲಿ ಹಾಗೂ ಗುದ್ದಲಿ ಬಳಸುವ ಕೆಲಸಗಳು ಬಹುತೇಕ ನಿಂತು ಹೋಗಿವೆ” ಎನ್ನುತ್ತಾರೆ ಹಾಗಲಹಳ್ಳಿ ಗ್ರಾಮದ ಜವರೇಗೌಡ.

ವರ್ಷದ ನಿರ್ದಿಷ್ಟ ಅವಧಿಯ ಕೆಲವೇ ದಿನಗಳ ಕೃಷಿ ಕೂಲಿಯನ್ನು ಮಾತ್ರ ನಂಬಿ ಬದುಕಲು ಕೃಷಿ ಕೂಲಿಕಾರರಿಗೂ ಸಾಧ್ಯವಿಲ್ಲ. ಈ ಸಾಮಾಜಿಕ-ಆರ್ಥಿಕ ಅಸಮತೋಲನವು ಗ್ರಾಮೀಣ ಭೂ ಸಂಬಂದಗಳನ್ನು ಪ್ರಭಾವಿಸುತ್ತಿದೆ ಹಾಗೂ ಪುನರ್ರೂಪಿಸುತ್ತಿದೆ. “ಬೇಸಾಯದ ನೈಜ ಆದಾಯದಲ್ಲಿ ಉಂಟಾಗುತ್ತಿರುವ ಇಳಿಕೆ ಹಾಗೂ ಕುಸಿತ, ಒಟ್ಟಾರೆ ಶ್ರಮ ಶಕ್ತಿಯಲ್ಲಿ ಕೌಟುಂಬಿಕ ಶ್ರಮವನ್ನು ಹೆಚ್ಚು ಮಾಡುವ, ವೇತನ ಶ್ರಮವನ್ನು ಕಡಿತಗೊಳಿಸುವ ಒತ್ತಡಕ್ಕೆ ಕೃಷಿಕನನ್ನು ದೂಡಿದೆ” ಎನ್ನುತ್ತಾರೆ ಸೊಳ್ಳೇಪುರ ಗ್ರಾಮದ ರೈತ ಹೋರಾಟಗಾರರಾದ ಎಸ್ ವಿಶ್ವನಾಥ್ ರವರು.

ಇವರ ಅಭಿಪ್ರಾಯಕ್ಕೆ ಕರ್ನಾಟಕ ಸರ್ಕಾರದ ಬೆಲೆ ಆಯೋಗದ ವರದಿಗಳು ಸಾಕ್ಷಿ ಒದಗಿಸಿವೆ. 2018-19 ರ ಸಾಲಿನ ಈ ವರದಿ ಪ್ರಕಾರ ಒಂದು ಕ್ವಿಂಟಾಲ್ ಭತ್ತದ (ಸಾಮಾನ್ಯ) ಉತ್ಪಾದನಾ ವೆಚ್ಚ (KAPC – ಕರ್ನಾಟಕ ಕೃಷಿ ಬೆಲೆ ಆಯೋಗ) 1841ರೂಗಳು. ಎಂ.ಎಸ್ ಸ್ವಾಮಿನಾಥನ್ ಆಯೋಗದ ಪ್ರಕಾರ (C2 (Cost of cultivation) + 50%) ನಿಗದಿಪಡಿಸಬೇಕಿದ್ದ ಬೆಂಬಲ ಬೆಲೆ 2762 ರೂ. ಆದರೆ ಬೆಂಬಲ ಬೆಲೆ ಕೇವಲ 1750 ರೂ; ಅಂದರೆ ನೈಜ ಆದಾಯ ನೆಗೆಟಿವ್. ವಾಸ್ತವದಲ್ಲಿ ಸರ್ಕಾರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಗಳು ಯಾವಾಗಲೂ ಖರೀದಿ ಶಕ್ತಿಗಳ ಗರಿಷ್ಠ ರೇಖೆಯೇ ಹೊರತು ಕನಿಷ್ಠ ರೇಖೆಗಳಲ್ಲ!

ಕೃಷಿಯೆಂದರೆ ಬೆಳೆಯ ನೈಜ ಆದಾಯದಲ್ಲಿ ನಷ್ಟ ಕಡಿಮೆ ಮಾಡಿಕೊಳ್ಳುವ ಅಥವಾ ಮಿಗತೆ ಸಾಧಿಸುವ ಉದ್ದೇಶಕ್ಕಾಗಿ ವೇತನ ಶ್ರಮದ ಪಾವತಿಯನ್ನು ಆದಷ್ಟೂ ಕಡಿಮೆ ಮಾಡುವ ಪ್ರಯತ್ನವಾಗಿದೆ. ಅಂದರೆ ವೇತನ ಶ್ರಮ ಶಕ್ತಿಗೆ ಮಾರುಕಟ್ಟೆ ಕೂಲಿ ಪಾವತಿಸುವ ಸಾಮಾರ್ಥ್ಯ ರೈತನಿಗಿಲ್ಲ ಎಂಬುದೇ ಆಗಿದೆ.                                 “ಗಂಡಾಳು ಮಾಡುತ್ತಿದ್ದ ಬಹಳಷ್ಟು ಕೆಲಸಗಳನ್ನು ಹೆಣ್ಣಾಳುಗಳ ಕೈಯಲ್ಲೇ ಮಾಡಿಸಲಾಗುತ್ತಿದೆ. ಗದ್ದೆಗೆ ರಸಗೊಬ್ಬರ ಹಾಕುವುದು, ಕಬ್ಬಿನ ಗದ್ದೆ ಪಿಗ್ಗಿ ನೆಡುವುದು; ಹೀಗೆ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಹಲವು ಕೆಲಸಗಳನ್ನು ಕೂಡ ಮಹಿಳಾ ಕೃಷಿ ಕೂಲಿಕಾರರ ಹೆಗಲಿಗೆ ಹಾಕಲಾಗಿದೆ” ಎನ್ನುತ್ತಾರೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಬಿ ಹನುಮೇಶ್.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿದ್ದರೂ ಪುರುಷ ಹಾಗೂ ಮಹಿಳೆಗೆ ಒಂದೇ ವೇತನ ಇಲ್ಲ. ಪುರುಷರಿಗೆ 300 ರೂ ರಿಂದ 350 ರೂ ಕೂಲಿ ಇದ್ದರೆ, ಅದೇ ಕಾಲಾವಧಿಯ ದುಡಿಮೆ ಮಾಡುವ ಮಹಿಳೆಯರಿಗೆ ದಕ್ಕುವುದು 130 ರೂ ರಿಂದ 150 ರೂ ಮಾತ್ರ. ಕೆಲಸದ ಅವಧಿಯಲ್ಲಿ ಪುರುಷರಿಗೆ ಮಾತ್ರ ಊಟ ಮತ್ತಿತರ ಸೌಕರ್ಯ.

ಯಾವ ಮಾನವ ಸಂಪನ್ಮೂಲ ನಿರ್ವಹಣೆಯ ತರಬೇತಿ ಇಲ್ಲದೆಯೂ ವೇತನ ಶ್ರಮ ಶಕ್ತಿಯ ಪಾವತಿಯನ್ನು ಕಡಿತಗೊಳಿಸುವ ವಿಧಾನವನ್ನು ಗ್ರಾಮ ಭಾರತವು ಅನುಸರಿಸುತ್ತಿದೆ.  ತೀವ್ರತರವಾದ ಅಸಮಾನತೆಯ ಭೂ ಸಂಬಂಧಗಳಿದ್ದ ಗ್ರಾಮ ಭಾರತದ ಮೇಲೆ ಬಂಡವಾಳಶಾಹಿ ಆಕ್ರಮಣಕಾರಿ ಪ್ರವೇಶವು ಎಲ್ಲಾ ರೀತಿಯ ಅಸಮಾನತೆಯನ್ನು ತೀವ್ರಗೊಳಿಸಿದೆ. ಇದರ ಪರಿಣಾಮವೇ ವಲಸೆ -ಆತ್ಮಹತ್ಯೆ. ಇಂತಹ ಬರ್ಬರ ಕ್ಯಾನ್ವಾಸ್ ನ ಗ್ರಾಮೀಣ ಭಾರತ ಕೋವಿಡ್ 19 ರ ಲಾಕ್ ಡೌನ್ ಗೆ ಮತ್ತಷ್ಟು ನಲುಗುತ್ತಿದೆ. “ಗಾರೆ ಕೆಲಸದವರು ನಿರುದ್ಯೋಗಿಗಳಾಗಿ ಕೃಷಿ ಕೆಲಸಕ್ಕೆ ಕರೆಯುವಂತೆ ದುಂಬಾಲು ಬೀಳುತ್ತಿದ್ದಾರೆ. ಸರ್ಕಾರಿ ಪಡಿತರ ಅಕ್ಕಿ ನಿಂತು ಹೋದರೆ ಇನ್ನೂ ಸರಿಯಾಗಿ ಬುದ್ಧಿ ಕಲಿಯುತ್ತಾರೆ” ಎಂದು ಸಾಕಷ್ಟು ಕೃಷಿಯೇತರ ಆದಾಯ ಹೊಂದಿರುವ ಐದು ಹೆಕ್ಟೇರ್ ನೀರಾವರಿ ಜಮೀನಿನ ಕೃಷಿಕರೊಬ್ಬರು ಅಭಿಪ್ರಾಯ ಪಡುತ್ತಾರೆ.

ಈ ಕೃಷಿಕರ ಅಭಿಪ್ರಾಯವನ್ನು ವಳೆಗೆರಹಳ್ಳಿ ಗ್ರಾಮದ ರಾಮಣ್ಣ ಕೂಡ ಮತ್ತೊಂದು ರೀತಿಯಲ್ಲಿ ದೃಢಪಡಿಸುತ್ತಾರೆ. “ಕರೋನಾ ಸಾಂಕ್ರಾಮಿಕ ರೋಗ ಬಂದ ಮೇಲೆ ಕೃಷಿ ಕೆಲಸಕ್ಕೆ ಕೂಲಿಕಾರರ ಲಭ್ಯತೆ ಹೆಚ್ಚಾಗಿದೆ. ಕೆಲಸಕ್ಕೆ ಬರುವವರು ಎಣ್ಣೆ – ಬೀಡಿಗೆ ಒತ್ತಡ ಹಾಕುತ್ತಿಲ್ಲ. ಕೂಲಿ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ.” ಎಣ್ಣೆ-ಬೀಡಿ ಎಂದರೆ ಕೂಲಿಕಾರರಿಗೆ ಗೌರವ ಪೂರ್ವಕ ಸತ್ಕಾರದ ಸಂಗತಿ. ಈಗ ಈ ಗೌರವಕ್ಕೆ ಧಕ್ಕೆ ಬಂದಿದೆ.

ಇಡೀ ದೇಶದಲ್ಲಿ ಸುಮಾರು 2.5 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮರು ವಲಸೆ ಆಗಿದ್ದು, ಗ್ರಾಮಗಳನ್ನು ತಲುಪಿದ್ದಾರೆ ಎನ್ನುತ್ತದೆ ಸ್ಕ್ರೊಲ್.ಇನ್ ವರದಿ. ಸಾಂಕ್ರಾಮಿಕ ತಡೆಗಟ್ಟುವ ತಳಮಟ್ಟದ ಕಾರ್ಯಪಡೆ ಒದಗಿಸುವ ಅಂಕಿ ಅಂಶಗಳು, ಮರು ವಲಸೆ ಪ್ರಮಾಣವು ಈ ವರದಿ ಅಂದಾಜಿಗಿಂತ ಹೆಚ್ಚಿರುವುದನ್ನು ಹೇಳುತ್ತವೆ. ಉದಾಹರಣೆಗೆ ಹೇಳುವುದಾದರೆ ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಅಂದಾಜಿನಲ್ಲೇ 370 ಕ್ಕೂ ಹೆಚ್ಚಿನ ಮರು ವಲಸಿಗರ ಪಟ್ಟಿ ಕಂಡು ಬಂದಿದೆ.

ಈ ಮರು ವಲಸೆಯಿಂದಾದ ಕೂಲಿಕಾರರ ಲಭ್ಯತೆಯೂ ತಳವಿಲ್ಲದ ಪಾತ್ರೆಗೆ ಹಾಲು ಸುರಿದಂತಾಗಿದ್ದು. ಇದೇ ಹನಕೆರೆ ಗ್ರಾಮದಲ್ಲಿ 150 ರೂ ಇದ್ದ ಮಹಿಳಾ ಕೂಲಿಕಾರರ ಕೂಲಿ 130 ರೂ ಗೆ ಕುಸಿದಿದೆ.                                     ನಿಸ್ತೇಜಗೊಂಡಿದ್ದ ಗ್ರಾಮ ಭಾರತಕ್ಕೆ ಕೋವಿಡ್ ಸಂಕಟವು ಅತ್ಯಂತ ದುಬಾರಿಯಾಗಲಿದ್ದು, ಗ್ರಾಮೀಣ ಭಾರತದ ಆಸ್ತಿ, ಆದಾಯ, ಸಂಪತ್ತುಗಳಲ್ಲಿ ಈಗ ಇರುವ ಅಸಮಾನತೆಯನ್ನು ಅಭೂತಪೂರ್ವ ಪ್ರಮಾಣಕ್ಕೆ ಹಿಗ್ಗಿಸಲಿದೆ. ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದಿರುವ ವಿಭಾಗಗಳು ಮತ್ತಷ್ಟು ದಮನಿಸಲ್ಪಡುತ್ತವೆ.

  • ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಮೊದಲ ಕಂತು ಬರೆದಿದ್ದಾರೆ. ಮಂಡ್ಯದ ಸೊಗಡಿನ ಕನ್ನಡ ಮಾತನಾಡುವ ಅವರು ಅದೇ ಯಾಸೆಯಲ್ಲಿ ಹಳ್ಳಿ ಕಥೆಗಳನ್ನು ಬರೆಯಲಿ ಎಂಬುದು ನಮ್ಮಾಸೆ.
  • ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ yashavantha.t@gmail.com,  ensuddii@gmail.com ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights