15 ವರ್ಷಗಳ ಬಳಿಕ ಅಂತರ್ಜಲ ಮಟ್ಟ ದಿಡೀರ್ ಏರಿಕೆ :  ಮತ್ತೆ ಬದುಕುವ ಛಲ ಮೂಡಿಸಿದ ಕಳಸಾಪುರ ಕೆರೆ

ಮಳೆ ಇಲ್ಲದೆ ಆ ಗ್ರಾಮಗಳ ಜನ ಗುಳೇ ಹೋಗಿದ್ರು. ಆ ಊರುಗಳಲ್ಲಿ ಬಾಗಿಲು ತೆರದ ಮನೆಗಳಿಗಿಂತ ಬೀಗ ಹಾಕಿದ ಮನೆಗಳೇ ಹೆಚ್ಚಿದ್ವು. ಅಲ್ಲಿ ಜನ ಸಿಗೋದೇ ಅಪರೂಪವಾಗಿತ್ತು. ಯಾಕಂದ್ರೆ, ಮಳೆ ಇಲ್ಲದೆ ಗ್ರಾಮಗಳು ಲೂಟಿ ಹೊಡೆದ ಕೋಟೆಯಂತಾಗಿ ಜನ ಪಟ್ಟಣ ಸೇರಿದ್ರು. 15 ವರ್ಷಗಳಿಂದ ಮಳೆಗಾಲದಲ್ಲೂ ಕೆರೆಗಳು ಅಕ್ಷರಶಃ ಮರುಭೂಮಿಯಾಗಿದ್ವು. ಆದ್ರೆ, ಮಲೆನಾಡಿನ ಬಯಲುಸೀಮೆಯಲ್ಲಿ ಸುರಿಯುತ್ತಿರೊ ವರುಣನ ಅಬ್ಬರ ಕೆರೆಗೆ ಮತ್ತೆ ಜೀವಕಳೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೋಡಿ ಬಿದ್ದು ಹರಿಯುತ್ತಿರೋ ನೀರು. ತುಂಬಿರೋ ಕೆರೆ ಕಂಡು ಖುಷಿ ಪಡ್ತಿರೋ ರೈತ್ರು. ಬೋರ್‍ವೆಲ್‍ಗಳಲ್ಲಿ ತನ್ನಷ್ಟಕ್ಕೇ ತಾನೇ ಉಕ್ಕಿ ಹರಿಯುತ್ತಿರೋ ಜಲಧಾರೆ. ಬಂಜರು ಭೂಮಿಯಾಗಿದ್ದ ಗ್ರಾಮಗಳಲ್ಲೀಗ ಹಚ್ಚ ಹಸಿರಿನ ವನರಾಶಿ. ಇದು ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಮಾಗಡಿ ಕೆರೆಯಲ್ಲಿ ಕಂಡುಬಂದ ಗತವೈಭವ. ಈ ಕೆರಗಳು ಬತ್ತಿ ಹೋಗಿ ವರ್ಷಗಳೇ ಉರುಳಿದ್ವು. ಮಳೆಗಾಲದಲ್ಲೂ ಈ ಕೆರೆ ಮರುಭೂಮಿ. ಆದ್ರೆ, ಮಲೆನಾಡಿಂದ ಬಯಲುಸೀಮೆಗೆ ಗುಳೇ ಬಂದಿರೋ ವರುಣದೇವನಿಂದ ಕಳಸಾಪುರ, ಮಾಗಡಿ ಸುತ್ತಮುತ್ತ ರೈತರಲ್ಲಿ ಮನೆಗಳಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದೆ. 15 ವರ್ಷದಿಂದ ತುಂಬದ ಕೆರೆಗಳು ಈ ಬಾರಿ ಅಕ್ಟೋಬರ್‍ನಲ್ಲೇ ತುಂಬಿರೋದ್ರಿಂದ ರೈತರು ತಮ್ಮ ಕಣ್ಣನ್ನ ತಾವೇ ನಂಬದಂತಾಗಿದ್ದಾರೆ. ಕಳಸಾಪುರ, ಮಾಗಡಿ ಕೆರೆಗಳು ತುಂಬಿದ್ದು ರೈತರಲ್ಲಿ ಮಂದಹಾಸ ಮೂಡಿರೋದಲ್ದೆ 1000 ಅಡಿ ಕೊರೆಸಿದ್ರು ನೀರು ಸಿಗದಿದ್ದ ಬೋರ್‍ಗಳಲ್ಲಿ ನೀರು ತನ್ನಷ್ಟಕ್ಕೇ ತಾನೇ ಉಕ್ಕಿ ಹರೀತಿದೆ. ನೂರಾರು ಬೋರ್‍ಗಳು ರಿಚಾರ್ಜ್ ಆಗಿದ್ದು ರೈತರಿಗೆ ಬದುಕುವ ಚೈತನ್ಯ ಬಂದಿದೆ.

ಕಳಸಾಪುರ, ಮಾಗಡಿ, ಬೆಳವಾಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಎರಡು ದಶಕಗಳಿಂದ ಬರ ತಾಂಡವವಾಡ್ತಿತ್ತು. ಕೃಷಿಗೆ ನೀರಿಲ್ಲದೆ 10-20 ಎಕರೆ ಭೂಮಿ ಹೊಂದಿರೋ ರೈತರು ಕೂಡ ಬದುಕಿನ ಅನಿವಾರ್ಯತೆಗೆ ಗುಳೇ ಹೋಗಿದ್ರು. ಕುಡಿಯೋಕೆ ನೀರಿಲ್ಲದೆ, ಗುಡ್ಡಕ್ಕೆ ಹೊಡೆದ ದನಕರುಗಳನ್ನ ಅಲ್ಲೇ ಬಿಟ್ಟು ಬರ್ತಿದ್ರು, ಕೆಲವರು ಖಸಾಯಿಖಾನೆಗೆ ಹೊಡೆಯುತ್ತಿದ್ರು. ಗ್ರಾಮಗಳ ಯುವಕರು ಕೆಲಸಕ್ಕಾಗಿ ಬೆಂಗಳೂರು ಸೇರಿದ್ರಿಂದ ಹಳ್ಳಿಗಳು ವೃದ್ಧಾಶ್ರಮವಾಗಿದ್ವು. ಹಾಗಾಗಿ, ಗ್ರಾಮದ ಬಹುತೇಕ ಮನೆಗಳ ಬಾಗಿಲಿಗೆ ಬೀಗ ಬಿದ್ದಿತ್ತು. ಆದ್ರೀಗ, 15 ವರ್ಷದ ಬಳಿಕ ಕೆರೆಗಳು ತುಂಬಿರೋದ್ರಿಂದ ಸುತ್ತಮುತ್ತಲಿನ ಹಳ್ಳಿಗಳ ರೈತರಲ್ಲಿ ಜೀವಕಳೆ ಬಂದಿದೆ.

ಒಟ್ಟಾರೆ, 15 ವರ್ಷಗಳ ಹಿಂದೆ ಅರೆಮಲೆನಾಡಗಿದ್ದ ಕಳಾಸಪುರ ಹೋಬಳಿ ಇತ್ತೀಚಿನ ವರ್ಷಗಳಿಂದ ಶಾಶ್ವತ ಬರಕ್ಕೆ ತುತ್ತಾಗಿತ್ತು. ಕುಡಿಯೋ ನೀರಿಗೂ ಹಾಹಾಕಾರ  ಎದುರಾಗಿ, ಜನರು ಹನಿ ನೀರಿಗೂ ಪರದಾಡುವಂತಾಗಿತ್ತು. ಆದ್ರೀಗ, ಮಳೆಯಿಂದ ಕಳಸಾಪುರ, ಮಾಗಡಿ ಕೆರಗಳು ತುಂಬಿ, ಬೋರ್ವೇಲ್ಗಳು ರಿಚಾರ್ಜ್ ಆಗಿರೋದು ಅನ್ನದಾತರಲ್ಲಿ ಹೊಸ ಚೈತನ್ಯ ತಂದಿದೆ. ಸರ್ಕಾರ ಈ ಭಾಗದ ರೈತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ರೆ ರೈತರ ಮೊಗದಲ್ಲಿನ ಈ ಮಂದಹಾಸ ಹೀಗೆ ಉಳಿಯೋದ್ರಲ್ಲಿ ಅನುಮಾನವಿಲ್ಲ.

Spread the love

Leave a Reply

Your email address will not be published. Required fields are marked *