18 ಪಕ್ಷಗಳೊಂದಿಗೆ ಸೋನಿಯಾಗಾಂಧಿ ವಿಡಿಯೋ ಸಂವಾದ: ರಾಜ್ಯವನ್ನು ಪ್ರತಿನಿಧಿಸಿದ ಹೆಚ್‌ಡಿ ದೇವೇಗೌಡ

ಕೊರೋನಾ ವೈರಸ್ ವಿರುದ್ದದ ಹೋರಾಟ, ಕೇಂದ್ರ ಸರ್ಕಾರದ ಕ್ರಮಗಳು, ವಲಸೆ ಕಾರ್ಮಿಕರ ಸಂಕಷ್ಟ, ರೈತರ ಬಿಕ್ಕಟ್ಟು ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಷ್ಟ್ರದ  ಎಲ್ಲಾ ವಿಪಕ್ಷಗಳ ಮುಖಂಡರೊಂದಿಗೆ ಇಂದು ವಿಡಿಯೋ ಸಂವಾದ ನಡೆಸಿದರು.

ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು,  ಕೊರೋನಾ ಕುರಿತಂತೆ ರಾಜ್ಯದ ಮಾಹಿತಿ ನೀಡಿದರು. ಇದೇ ವೇಳೆ ಕೊರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಸೋನಿಯಾ ಗಾಂಧಿಯ ಜೊತೆ ಸುದೀರ್ಘ ಚರ್ಚೆ ನಡೆಸಿದರು. ದೇವೇಗೌಡರ ವಿಡಿಯೋ ಕಾನ್ಫರೆನ್ಸ್​ನಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಜೊತೆಗಿದ್ದರು.

ವಿವಿಧ ರಾಜ್ಯಗಳ ಮುಖಂಡರ ಜೊತೆ ಸೋನಿಯಾ ಗಾಂಧಿಯವರ ವಿಡಿಯೋ ಕಾನ್ಫರೆನ್ಸ್​ನಲ್ಲಿ ದೇವೇಗೌಡರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಸೋನಿಯಾ ಗಾಂಧಿ ಎದುರಾಗುತ್ತಲೇ ದೇವೇಗೌಡರು ಎದ್ದು ಕೈ ಮುಗಿದರು. ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ಅವರು ಕೈ ಮುಗಿದು, ಗೌಡರ ಆರೋಗ್ಯ ವಿಚಾರಿಸಿದರು.

ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್, ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು, ವಲಸೆ ಕಾರ್ಮಿಕರ ವಿಷಯದಲ್ಲಿ ಎಸಗಿರುವ ತಪ್ಪುಗಳು,  ರಾಜ್ಯಗಳಿಗೆ ಹಣ ಬಿಡದ ಕೇಂದ್ರ ಸರ್ಕಾರದ ಕ್ರಮ, ಪ್ರಧಾನ ಮಂತ್ರಿ ಮೋದಿ ಸರ್ಕಾರದ ನಿರ್ಧಾರಗಳ ಬಗ್ಗೆ ಚರ್ಚೆ, ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಮತ್ತಿತರ ವಿಷಯಗಳ ಬಗ್ಗೆ ಯುಪಿಎ ಒಕ್ಕೂಟದ ಅಧ್ಯಕ್ಷೆಯೂ ಆಗಿರುವ ಸೋನಿಯಾ ಗಾಂಧಿ ಅವರು ಎಲ್ಲಾ ವಿರೋಧ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights