450 ಕಿ.ಮೀ. ನಡೆದ ಕಾನ್‍ಸ್ಟೇಬಲ್ : ಪತ್ನಿ ಚಿಕಿತ್ಸೆಗಾಗಿ 140 ಕಿ.ಮೀ. ಸೈಕಲ್‌ನ ತುಳಿದ ಪತಿ!
ಲಾಕ್ ಡೌನ್ ನಿಂದಾಗಿ ಎಲ್ಲೆಡೆ ಸಾರಿಗೆ ವ್ಯವಸ್ಥೆ ಬಂದ್ ಮಾಡಲಾಗಿದ್ದು, ಜೀವದ ಹಂಗು ತೊರೆದು ಕೆಲಸ ಮಾಡುವವರಿಗೆ, ಆಸ್ಪತ್ರೆಗಳಿಗೆ ಹೋಗಲು ಸಾರಿಗೆ ಅವಶ್ಯತೆ ಇರುವವರಿಗೆ ಸಾಕಷ್ಟು ತೊಂದರೆಯಾಗಿದೆ. ಇದಕ್ಕೆ ನೂರಾರು ಕಿ.ಮೀ ಗಟ್ಟಲೆ ನಡೆದು ಕಾನ್ಸ್ ಟೇಬಲ್ ಒಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದು, ಇತ್ತ ತಮಿಳುನಾಡಿನಲ್ಲಿ ಕ್ಯಾನ್ಸರ್ ರೋಗಿ ಪತ್ನಿಯನ್ನು ಚಿಕಿತ್ಸೆಗಾಗಿ ಸೈಕಲ್ ನಲ್ಲಿ ಪತಿ ಕರೆದುಕೊಂಡು ಹೋದ ಮನಕಲಕುವ ಘಟನೆ ನಡೆದಿದೆ.
450 ಕಿಲೋ ಮೀಟರ್ ನಡೆದುಕೊಂಡೇ ಬಂದು ಕರ್ತವ್ಯಕ್ಕೆ ಹಾಜರಾಗದ ಕಾನ್‍ಸ್ಟೇಬಲ್ :-
ಕಿಲ್ಲರ್ ಕೊರೊನಾ ವೈರಸ್‍ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಪೊಲೀಸರು ಮಾತ್ರ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಾನ್‍ಸ್ಟೇಬಲ್ ಬರೋಬ್ಬರಿ 450 ಕಿಲೋ ಮೀಟರ್ ನಡೆದುಕೊಂಡೇ ಬಂದು ಕರ್ತವ್ಯಕ್ಕೆ ಹಾಜರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕಾನ್‍ಸ್ಟೆಬಲ್ ಆನಂದ್ ಪಾಂಡೆ ಕರ್ತವ್ಯಕ್ಕೆ ಹಾಜರಾಗಲು ಉತ್ತರಪ್ರದೇಶದ ಕಾನ್ಪುರದಿಂದ ಜಬಲ್‍ಪುರದವರೆಗೆ ಸುಮಾರು 450 ಕಿಲೋ ಮೀಟರ್ ದೂರ ನಡೆದುಕೊಂಡು ಬಂದಿದ್ದಾರೆ. ಆನಂದ್ ಪಾಂಡೆ ಕಾನ್ಪುರದ ಭೌತಿ ನಿವಾಸಿಯಾಗಿದ್ದು, ಜಬಲ್‍ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ತಮ್ಮ ಪತ್ನಿಗೆ ಅನಾರೋಗ್ಯದ ಕಾರಣದಿಂದ ಆನಂದ್ ಪಾಂಡೆ ಫೆಬ್ರವರಿ 20ರಿಂದ ರಜೆಯಲ್ಲಿದ್ದರು. ಕೊರೊನಾದಿಂದ ಲಾಕ್‍ಡೌನ್ ಆದ ಪರಿಣಾಮ ಅವರು ಕಾನ್ಪುರದಲ್ಲಿ ಸಿಲುಕಿಕೊಂಡಿದ್ದರು. ಆದರೆ ಕಾನ್‍ಸ್ಟೇಬಲ್ ಲಾಕ್‍ಡೌನ್ ಇದ್ದರೂ ಕರ್ತವ್ಯಕ್ಕೆ ಹಾಜರಾಗಲು ದೃಢ ನಿರ್ಧಾರ ಮಾಡಿದ್ದರು. ಅದರಂತೆಯೇ ಆನಂದ್ ಪಾಂಡೆ ಮಾರ್ಚ್ 30ರಂದು ಕಾನ್ಪುರದಿಂದ ಜಬಲ್‍ಪುಕ್ಕೆ ನಡೆದುಕೊಂಡೆ ಹೋಗಲು ಶುರು ಮಾಡಿದ್ದರು. ಮಾರ್ಗ ಮಧ್ಯೆ ಕೆಲವರಿಂದ ಲಿಫ್ಟ್ ಕೂಡ ತೆಗೆದುಕೊಂಡಿದ್ದರು.

ಕ್ಯಾನ್ಸರ್ ರೋಗಿ ಪತ್ನಿ ಚಿಕಿತ್ಸೆಗಾಗಿ ಸುಮಾರು 140 ಕಿ.ಮೀ ದೂರ ಸೈಕಲ್‌ನಲ್ಲಿ ಬಂದ ಪತಿ :-
ಲಾಕ್‌ಡೌನ್‌ನಿಂದ ದೂರದ ಊರಿನಲ್ಲಿ ಸಿಲುಕಿಕೊಂಡಿದ್ದ ಮಗನನ್ನು ಕರೆದುಕೊಂಡು ಬರಲು 1400 ಕಿ.ಮಿ ಸ್ಕೂಟಿ ಬೈಕಿನಲ್ಲಿ ಪ್ರಯಾಣ ಮಾಡಿದ್ದ ತಾಯಿಯ ಕಥೆ ಇತ್ತೀಚಿಗಷ್ಟೆ ನೋಡಿದ್ವಿ. ಅದರಂತೆ ಮನಮುಟ್ಟುವ ಇನ್ನೊಂದು ಕಥೆ ತಮಿಳುನಾಡಿನಲ್ಲಿ ನಡೆದಿದೆ. 65 ವರ್ಷ ಹಿರಿಯ ವ್ಯಕ್ತಿ ತನ್ನ ಪತ್ನಿಯ ಕೀಮೋಥೆರಪಿ (ಕ್ಯಾನ್ಸರ್ ರೋಗಿ) ಚಿಕಿತ್ಸೆಗಾಗಿ ಸುಮಾರು 140 ಕಿ.ಮೀ ದೂರ ಸೈಕಲ್‌ನಲ್ಲಿ ಬಂದಿರುವುದು ನಿಜಕ್ಕೂ ಹೃದಯಸ್ಪರ್ಶಿ ಘಟನೆ. ಸಾರಿಗೆ ಸೌಲಭ್ಯ ಸಂಪೂರ್ಣ ಬಂದ್ ಆದ ಇಂತಹ ಸಂದರ್ಭದಲ್ಲಿ 65 ವರ್ಷದ ಅರಿವಳಗನ್ ಕುಂಬಕೋಣಂ ಎಂಬ ಹಳ್ಳಿಯಿಂದ ಪುದುಚೇರಿಯಲ್ಲಿರುವ ಜವಾಹರಲಾಲ್ ಆಸ್ಪತ್ರೆಗೆ ತನ್ನ ಪತ್ನಿಯಲ್ಲಿ ಸೈಕಲ್‌ನಲ್ಲಿ ಕೂರಿಸಿಕೊಂಡು ಬಂದಿದ್ದಾನೆ.


