Airline : ಕೆಂಪೇಗೌಡ ಏರ್‍ಪೋರ್ಟಿನಿಂದ ಸೋಮವಾರದಿಂದ 215 ವಿಮಾನ ಹಾರಾಟ…!
ಸುದೀರ್ಘ ಲಾಕ್‌ಡೌನ್ ನಂತರ ಕೊಂಚ ಸಡಿಲಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ವಿಮಾನಗಳ ಸದ್ದು ಮಾರ್ದನಿಸಲಿದೆ. ಸೋಮವಾರದಿಂದ ಬೆಂಗಳೂರು ಏರ್‍ಪೋರ್ಟಿನಿಂದ ಪ್ರತಿ ನಿತ್ಯ 215 ವಿಮಾನ ಹಾರಾಟ ನಡೆಸಲಿವೆ..
ದೇಶೀಯ ವಿಮಾನಯಾನ ಸೇವೆ ಪುನಾರಂಭಕ್ಕೆ ಕೇಂದ್ರ ಸರಕಾರ ಹಸಿರುವ ನಿಶಾನೆ ತೋರಿರುವ ಕಾರಣ ಸೋಮವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಹ ವಿಮಾನಗಳು ಹಾರಲಿವೆ. ಕೇಂದ್ರ ಸರಕಾರದ ಮಾರ್ಗದರ್ಶನದಂತೆ ಆರಂಭಿಕ ಹಂತದಲ್ಲಿ ಪ್ರತಿನಿತ್ಯ 215 ವಿಮಾನಗಳ ಹಾರಾಟ ನಡೆಸಲು ವಿಮಾನ ನಿಲ್ದಾಣ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕೆಂಪೇಗೌಡ ವಾಯು ನಿಲ್ದಾಣದಿಂದ ಬೇರೆ ಊರುಗಳಿಗೆ 108 ವಿಮಾನಗಳು ಹಾರಿದರೇ ಬೇರೆ ಊರುಗಳಿಂದ 107 ವಿಮಾನಗಳು ಇಲ್ಲಿಗೆ ಬಂದಿಳಿಯಲಿವೆ ಎಂದು ಕೆಐಎಎಲ್ ಪ್ರಕಟಣೆ ತಿಳಿಸಿದೆ. ಇದು ವಿಮಾನ ನಿಲ್ದಾಣದ ಎಂದಿನ ಹಾರಾಟ ಪ್ರಮಾಣದ ಶೇಕಡ 32 ಮಾತ್ರ ಆಗಿರುತ್ತದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ದೇಶೀಯ ವಿಮಾನ ಯಾನ ಸೇವಾದಾರರ ಪೈಕಿ ಇಂಡಿಗೋ ಶೇ. 47 ಪ್ರಯಾಣಿಕರ ಸುಗಮ ಸಂವಾರಕ್ಕೆ ಸಿದ್ಧವಾಗಿದೆ. ಉಳಿದಂತೆ ಸ್ಪೈಸ್‌ಜೆಟ್ ಮತ್ತು ಏರ್ ಏಷ್ಯಾ ವಿಮಾಗಳು ಹಾರಾಟ ನಡೆಸಲಿವೆ. ಈ ಮಧ್ಯೆ ಕೋರೋನಾ ಕಾರಣ ಸಾಮಾಜಿಕ ಅಂತರ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳ ಅನ್ವಯ ಬೆಂಗಳೂರು ಏರ್‍ಪೋರ್ಟ್‌ನಲ್ಲಿ ಶೂನ್ಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಹನ ನಿಲುಗಡೆಯಿಂದ ಹಿಡಿದು ವಿಮಾನ ಹತ್ತುವವರೆಗಿನ ನಾನಾ ಪ್ರಕ್ರಿಯೆಗಳನ್ನು ಶೂನ್ಯ/ಕನಿಷ್ಟ ಸಂಪರ್ಕದಲ್ಲಿ ನಿರ್ವಹಿಸಲು ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್‌ಗೆಳ ಪ್ರವೇಶ, ಬೋರ್ಡಿಂಗ್ ಪಾಸ್, ಲಗೇಜ್, ಸೆಕ್ಯೂರಿಟಿ ತಪಾಸಣೆ ಹೀಗೆ ಎಲ್ಲ ಕೆಲಸಗಳನ್ನೂ ಕನಿಷ್ಟ/ಶೂನ್ಯ ಸಂಪರ್ಕದಲ್ಲಿ ನಡೆಸಲು ಸಿದ್ಧತೆ ಆಗಿದೆ.