Fail ಆದ ಗುಜರಾತ್ ಮಾಡೆಲ್: ಅಹಮದಾಬಾದ್‌ನಲ್ಲಿ ಒಂದೊತ್ತಿನ ಊಟಕ್ಕೂ ಪರದಾಟ

ಗುಜರಾತ್ ರಾಜಧಾನಿ ಅಹಮದಾಬಾದ್ ನಗರದಲ್ಲಿ ಹಲವಾರು ನಿವಾಸಿಗಳು ಕೊರೊನ ಲಾಕ್ ಡೌನ್ ಸಂಕಷ್ಟದಿಂದ ಊಟವನ್ನು ಕಡಿಮೆ ಮಾಡಿರುವ ಆತಂಕಕಾರಿ ಅಂಶ ಐಐಎಂಎ ನಡೆಸಿರುವ ಸರ್ವೇಯೊಂದರಿಂದ ಹೊರ ಬಿದ್ದಿದೆ.

ಇಂಡಿಯನ್ ಇನ್ಸ್ಟಿಟೂಟ್ ಆಫ್ ಮ್ಯಾನೇಜ್ಮೆಂಟ್ ಅಹಮದಾಬಾದ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಏಪ್ರಿಲ್ 23 ರಿಂದ ಮೇ 2ರವರೆಗೆ 130 ನಿವಾಸಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸರ್ವೇ ನಡೆಸಿದ್ದು ಶೇಕಡ 60ರಷ್ಟು ನಿವಾಸಿಳಿಗೆ ಆಹಾರ ಪೂರೈಕೆ ಸಮರ್ಪಕವಾಗಿ ಆಗಿಲ್ಲ ಎಂದು ಸರ್ವೇ ಹೇಳಿದೆ.

ಸ್ಯಾಂಪಲ್‌ ಸರ್ವೇಯಲ್ಲಿ ಪಾಲ್ಗೊಂಡ 130 ಜನರಲ್ಲಿ ಶೇಕಡ 54ರಷ್ಟು ನಿವಾಸಿಗಳು ಎರಡು ಹೊತ್ತು ಊಟವನ್ನು ಬಿಡಬೇಕಾಗಿ ಬಂದಿದೆ. ಒಂದು ದಿನದಲ್ಲಿ ಒಂದು ಹೊತ್ತು ಅದು ಮಧ್ಯಾಹ್ನದ ವೇಳೆ ಮಾತ್ರ ಊಟ ಮಾಡುತ್ತಿರುವುದಾಗಿ ಸರ್ವೇಯಲ್ಲಿ ಬಹಿರಂಗವಾಗಿದೆ.

ನಗರದಲ್ಲಿ ಶೇಕಡ 90ರಷ್ಟು ಜನರ ತಿಂಗಳ ಆದಾಯ 19,500 ರೂ ಒಳಗಿದೆ. ಶೇಕಡ 85ರಷ್ಟು ನಿವಾಸಿಗಳಿಗೆ ನಿರಂತರ ಗಳಿಕೆಯೂ ಇಲ್ಲ. ನಿರಂತರ ಆದಾಯವೂ ಇಲ್ಲ. ಅವರ ತಿಂಗಳ ಆದಾಯ 10 ಸಾವಿರ, 15 ಸಾವಿರ ಇದೆ ಎಂದು ವರದಿ ಹೇಳಿದೆ.

ಬಹುತೇಕ ನಿವಾಸಿಗಳು ಬಾಡಿಗೆ, ಶಾಲಾ ಶುಲ್ಕ, ದೂರವಾಣಿ ಶುಲ್ಕ ಮತ್ತು ವಿದ್ಯುತ್ ಶುಲ್ಕ ಪಾವತಿಸುವುದು ಕಷ್ಟವಾಗಿದೆ. ಅಷ್ಟೇ ಅಲ್ಲ ಆಹಾರ ಪದಾರ್ಥಗಳು, ಹಾಲು ತರಕಾರಿ ಸಂಗ್ರಹವೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ವೇ ತಿಳಿಸಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಶೇಕಡ 64ರಷ್ಟು ಆಹಾರ ಧಾನ್ಯಗಳ ಪೂರೈಕೆಯಾಗಿದ್ದರೂ ಅವರೂ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ನೆರವಿಗೆ ಯಾರೂ ಬಂದಿಲ್ಲ ಎಂಬುದನ್ನು ಸರ್ವೆ ಬೆಟ್ಟು ಮಾಡಿ ತೋರಿಸಿದೆ.

ಕಳೆದ 8 ವರ್ಷಗಳ ಹಿಂದೆ ಇಡೀ ದೇಶ ಗುಜರಾತ್ ಮಾದರಿ ಅನುಸರಿಸಬೇಕು. ಅಭಿವೃದ್ಧಿಯಲ್ಲಿ ಗುಜರಾತ್ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಬಿಂಬಿಸಲಾಗಿತ್ತು. ಆಗ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಈಗ ಗುಜರಾತ್ ರಾಜಧಾನಿಯಲ್ಲೇ ಸಮಸ್ಯೆಗಳು ಇರುವುದನ್ನು ಸರ್ವೇ ಬಹಿರಂಗಪಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights