Good News : ಅತ್ಯಾಚಾರ ತಡೆಗಟ್ಟಲು ಪೊಲೀಸ್ ರ ಹೊಸ ಐಡಿಯಾ….
ದೇಶದಲ್ಲೆಡೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ವಿವಿಧ ಕ್ರಮಗಳನ್ನು ಕೈಗೊಳ್ತಿವೆ. ಇವು ಸಮರ್ಪಕವಾಗಿ ಜಾರಿಯಾದಾಗ ಮಾತ್ರ ಅತ್ಯಾಚಾರ ಪ್ರಕರಣಗಳಂಥ ಹೇಯ ಕೃತ್ಯಗಳಿಗೆ ಕಡಿವಾಣ ಬೀಳುತ್ತೆ. ಇದರ ಮಧ್ಯೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಹೊಸದೊಂದು ಐಡಿಯಾ ಮಾಡಿದ್ದಾರೆ. ಈ ಐಡಿಯಾ ಏನಾದ್ರೂ ಪರಿಪೂರ್ಣವಾಗಿ ಕ್ಲಿಕ್ ಆದ್ರೆ ಹೆಣ್ಮಗಳೊಬ್ಬಳು ಮಧ್ಯರಾತ್ರಿ ಸ್ವತಂತ್ರವಾಗಿ ಹೊರಗಡೆ ಬರುವ ಧೈರ್ಯ ತೋರೋದಂತು ಗ್ಯಾರಂಟಿ..
ಹೆಣ್ಣು ಮಗಳೊಬ್ಬಳು ಮಧ್ಯರಾತ್ರಿ ಸ್ವತಂತ್ರವಾಗಿ ಓಡಾಡೋ ಹಾಗಾದಾಗ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಹಾಗೆ ಅಂತ ಮಹಾತ್ಮ ಗಾಂಧೀಜಿ ಕನಸು ಕಂಡಿದ್ರು. ಆದ್ರೆ ವಿಪರ್ಯಾಸ ಅಂದ್ರೆ ಹಗಲಿನಲ್ಲಿಯೇ ನಮ್ಮ ಹೆಣ್ಣುಮಕ್ಕಳು ಹೊರಬರೋಕೆ ಭಯ ಪಡುವಂಥಾ ಕೆಟ್ಟ ಪರಿಸ್ಥಿತಿ ಸದ್ಯ ದೇಶದಲ್ಲಿ ನಿರ್ಮಾಣವಾಗಿದೆ. ಹೌದು..ಇದಕ್ಕೆ ಸಾಕ್ಷಿ ಎನ್ನುವಂತೆ ದೆಹಲಿ ನಿರ್ಭಯಾ ಪ್ರಕರಣ ಹಾಗೂ ಹೈದರಾಬಾದ್ ನ ಪಶು ವೈದ್ಯೆ ದಿಶಾ ಪ್ರಕರಣ ನಮ್ಮ ಮುಂದಿದೆ. ಒಂದಿಲ್ಲೊಂದು ರೀತಿಯಲ್ಲಿ ಕಾಮಪಿಶಾಚಿಗಳು ಹೆಣ್ಣಿನ ಮೇಲೆ ತಮ್ಮ ದುಷ್ಕ್ರತ್ಯವನ್ನು ಮೆರೀತಾನೆ ಇದ್ದಾರೆ. ಹೀಗಾಗಿ ಸದ್ಯ ಪೊಲೀಸ್ ಇಲಾಖೆ ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದು ಹೆಣ್ಣುಮಕ್ಕಳ ರಕ್ಷಣೆಗೆ ಹಲವು ನೂತನ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ. ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ನೇತೃತ್ವದ ತಂಡ ಜಿಲ್ಲೆಯಲ್ಲಿನ ಹೆಣ್ಣುಮಕ್ಕಳು ರಾತ್ರಿ ವೇಳೆ ಯಾವುದೇ ಅಪಾಯವಿಲ್ಲದಂತೆ ಸುರಕ್ಷಿತವಾಗಿ ಮನೆ ಮುಟ್ಟಿಸುವ ಮಹತ್ತರ ಜವಾಬ್ದಾರಿಯ ನಿರ್ಧಾರವನ್ನು ತೆಗೆದುಕೊಂಡಿದ್ದು ಅದನ್ನು ಯಶಸ್ವಿಯಾಗಿ ಜಾರಿ ಮಾಡ್ತಿದ್ದಾರೆ..
ಹೌದು ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆಯ ನಡುವೆ ರಾತ್ರಿ ಮನೆಗೆ ಹೋಗೋ ಮಹಿಳೆಯರು ಇನ್ಮುಂದೆ ಚಿಂತೆ ಪಡಬೇಕಾಗಿಲ್ಲ. ಅಷ್ಟೊತ್ತಿನಲ್ಲಿ ಒಬ್ಬೊಂಟಿ ಮಹಿಳೆಯರು ವಾಹನಗಳ ಹುಡುಕಾಟ ಮಾಡೋ ಅವಶ್ಯವಿಲ್ಲ. ಯಾಕಂದ್ರೆ ಒಂದು ಕರೆ ಮಾಡಿದ್ರೆ ಸಾಕು ಸ್ವತಃ ಪೊಲೀಸ್ ಸಿಬ್ಬಂದಿಯೇ ಅವರಿದ್ದಲ್ಲಿಗೆ ವಾಹನ ತೆಗೆದುಕೊಂಡು ಆಟೋ ವ್ಯವಸ್ಯೆ ಮಾಡಿ ಕಳಿಸುತ್ತಾರೆ. ಜೊತೆಗೆ ಮಧ್ಯ ರಾತ್ರಿ ಆಟೋ ಇಲ್ದೆ ಇರುವ ಸಂದರ್ಭದಲ್ಲಿ ಪೋಲಿಸ್ ವಾಹನದ ಮೂಲಕ ಅವರ ಮನೆಗೆ ಬಿಟ್ಟುಬರ್ತಾರೆ. ಏಕಾಂಗಿಯಾಗಿರೋ ಯಾವುದೇ ಮಹಿಳೆಯರು,ವೃದ್ಧರು, ಮಕ್ಕಳು ಪೊಲೀಸ್ ಸಹಾಯವಾಣಿ ಸಂಖ್ಯೆ 9480804400 ಅಥವಾ 100 ಅಥವಾ 112 ಗೆ ಕರೆ ಮಾಡಿ ಸಹಾಯಕ್ಕಾಗಿ ವಿನಂತಿಸಿದ್ರೆ ಸಾಕು ಹೆಣ್ಣುಮಕ್ಕಳ ರಕ್ಷಣೆಗೆಂದೇ 24×7 ಕೆಲಸ ಮಾಡೋ ಪೊಲೀಸ್ರು ಅವ್ರನ್ನು ಅವರ ಮನೆಗೆ ತಲುಪಿಸ್ತಾರೆ. ಈ ವೇಳೆ ಕಂಟ್ರೋಲ್ ರೂಮ್ ನ ನೈಟ್ ಡ್ಯೂಟಿ ಅಧಿಕಾರಿಗಳೇ ಹೆಣ್ಣುಮಕ್ಕಳ ಜೊತೆಗೆ ಸಂವಹನ ಮಾಡಿ ವಾಹನದ ವ್ಯವಸ್ಥೆ ಮಾಡ್ತಾರೆ. ಈ ಮೂಲಕ ರಾತ್ರಿ ವೇಳೆ ಹೆಣ್ಣುಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದ ಹಾಗೆ ಪ್ಲ್ಯಾನ್ ಮಾಡಿದ್ದಾರೆ ಜಿಲ್ಲೆಯ ಎಸ್ಪಿ. ಸದ್ಯ ಈ ನಿರ್ಧಾರ ಹೆಣ್ಣು ಹೆತ್ತ ತಂದೆ ತಾಯಂದಿರು ನೆಮ್ಮದಿಯಿಂದ ನಿದ್ರೆ ಮಾಡುವಂತೆ ಮಾಡಿದ್ದು ಜಿಲ್ಲೆಯ ಮಹಿಳಾ ಸಮೂಹ ಪೊಲೀಸ್ ಇಲಾಖೆಯ ನೂತನ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದೆ.
ಹೈದರಾಬಾದ್ ನ ಅತ್ಯಾಚಾರದ ಆರೋಪಿಗಳನ್ನು ವಿಶ್ವನಾಥ ಸಜ್ಜನರ್ ನೇತೃತ್ವದ ತಂಡ ಎನ್ಕೌಂಟರ್ ಮಾಡಿದ್ದು ಇಡೀ ದೇಶಕ್ಕೆ ವಿಜಯ ದಶಮಿ ಆಚರಿಸಿದಷ್ಟೇ ಖುಷಿ ತಂದಿದೆ. ಜೊತೆಗೆ ಪೊಲಿಸ್ರೂ ಸಹ ಅತ್ಯಾಚಾರಿಗಳ ಪಾಲಿಗೆ ಸಿಂಗಂ ಆಗಿ ಪರಿವರ್ತನೆಗೊಂಡಿದ್ದಾರೆ. ಸದ್ಯ ಗದಗ ಜಿಲ್ಲೆಯ ಎಸ್ಪಿ ಶ್ರೀನಾಥ್ ಜೋಶಿ ಅವರು ಮಾಡಿರೋ ಪ್ಲ್ಯಾನ್ ನಿಂದ ಒಂಟಿ ಹೆಣ್ಮಗಳೊಬ್ಬಳು ಮಧ್ಯರಾತ್ರಿ ಧೈರ್ಯದಿಂದ ಸುರಕ್ಷಿತವಾಗಿ ಮನೆ ಸೇರುವಂತಾಗಿರೋದು ಸಾರ್ವಜನಿಕರಲ್ಲಿ ನೆಮ್ಮದಿ ತಂದಿದ್ದು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ..