Lockdown: ಬೆಳೆಗಳ ಮಾರಟವಾಗದೆ ರೈತ ಬೆಳೆಗಾರರ ಕತೆ ಚಿಂತಾಜನಕ!

ಲಾಕ್‍ಡೌನ್ ಸಡಿಲವಾದರೂ ಸಹ ಹೂ, ಹಣ್ಣು, ತರಕಾರಿ ಬೆಳೆದ ರೈತರು ಹಾಗೂ ಮಾರಾಟಗಾರರ ಬದುಕು ಮಾತ್ರ ಚೇತರಿಸಿಕೊಳ್ಳದೆ ದಿನಗಳನ್ನು ಮುಂದೆ ನೂಕುವಂತಿದೆ.
ಕಳೆದ ಎರಡು ತಿಂಗಳಿನಿಂದ ಲಾಕ್‍ಡೌನ್ ಪರಿಣಾಮವಾಗಿ ಕೈಗೆ ಬಂದ ಫಸಲನ್ನು ಮಾರಾಟ ಮಾಡಲು ಆಗದೆ ಅನೇಕ ಮಂದಿ ಫಸಲು ನೀಡಿದ ಹೂ, ತರಕಾರಿ ಬೆಳೆಗಳನ್ನು ಉಳಿಮೆ ಮಾಡಿದ್ದಾರೆ. ಇನ್ನೂ ಕೆಲವರು ಆಶಾಭಾವನೆಯಿಂದ ಬೆಳೆಯನ್ನು ಉಳಿಸಿಕೊಂಡಿದ್ದರು. ಈಗ ಸ್ವಲ್ವ ಲಾಕ್‍ಡೌನ್ ಸಡಿಲಗೊಂಡಿದೆ. ಆದರೂ ಸಹ ಮಾರುಕಟ್ಟೆಗಳ ಬಾಗಿಲ ತೆರೆಯದೆ ಇರುವ ಕಾರಣದಿಂದಾಗಿ ಅನೇಕ ರೈತರ ಕುತ್ತಿಗೆಗೆ ಚೂರಿ ಹಾಕಿದಂತಾಗಿದೆ.

ಕೆ.ಆರ್.ಮಾರುಕಟ್ಟೆಗೆ ಸುಮಾರು 150-200 ಲಾರಿ ಲೋಡ್‍ಗಳಷ್ಟು ಬರುತ್ತಿದ್ದ ಹೂ, ಲಾಕ್‍ಡೌನ್ ಪರಿಣಾಮ ಸಂಪೂರ್ಣ ನಿಂತುಹೋಗಿತ್ತು. ಅನೇಕ ಹೂ ಬೆಳೆಗಾರರ ಬದುಕು ಛಿದ್ರವಾಗಿದೆ. ಜೊತೆಗೆ ತಮ್ಮ ಸುತ್ತಲಿನ ಪ್ರದೇಶದಲ್ಲೂ ವ್ಯಾಪಾರ ಮಾಡೋಣವೆಂದರೆ ದೇವಸ್ಥಾನಗಳು ಬಾಗಿಲು ಮುಚ್ಚಿವೆ ಹಾಗೂ ಎಲ್ಲಾ ಕಡೆಯು ಹೂಗಳನ್ನು ಬೆಳೆದಿರುವ ರೈತರು ಯಾರಾದರೂ ಬಿಡಿಸಿಕೊಂಡು ಹೋಗಲಿ ಎಂದು ಬಿಟ್ಟುಬಿಟ್ಟಿದ್ದಾರೆ. ಇದರಿಂದ ಯಾರೂ ಸಹ ಹೂಗಳನ್ನು ಕೊಂಡುಕೊಳ್ಳುತ್ತಿಲ್ಲ. ಹಾಗಾಗಿ ಹೂಗಳು ಗಿಡದಲ್ಲೇ ಬಾಡುವಂತಾಗಿದೆ. ಜೊತೆಗೆ ಹೂವಿನ ವ್ಯಾಪಾರಿಗಳು ಮಾರುಕಟ್ಟೆಯಲ್ಲೂ ಹೂಗಳು ಸಿಗದೆ ಅಲ್ಲಲ್ಲಿ ಹೊಲದ ಹತ್ತಿರ ಹೋಗಿ ಬಿಡಿಸಿಕೊಂಡು ಬಂದರೂ ಸಹ ಹೂ ಕೊಳ್ಳುವವರೇ ಇಲ್ಲದಂತಾಗಿದೆ. ಈ ಸಮಯದಲ್ಲಿ ಯಾವಾಗಲೂ ಮಲ್ಲಿಗೆ ಮಾರು 40 ರಿಂದ 50 ರೂಗಳಿದ್ದದ್ದು ಈಗ 20 ರೂಗಳಿಗೆ ನೀಡುವಂತಿದ್ದಾರೆ. ಇನ್ನೂ ಸಂಜೆ ಆಗುತ್ತಿದ್ದಂತೆ ಎಷ್ಟೋ ಕೊಟ್ಟು ತೆಗೆದುಕೊಂಡು ಹೋಗಿ ಎನ್ನುವಂತಾಗಿದೆ.
ಇನ್ನೂ ನಗರದಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ತರಕಾರಿ, ಹೂ ಮತ್ತು ಹಣ್ಣಿನ ವ್ಯಾಪಾರಕ್ಕೆ ಹೊಸೂರು ರಸ್ತೆಯಲ್ಲಿರುವ ಸಿಂಗೇನಹಳ್ಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಲ್ಲಿಗೆ ದಿನಕ್ಕೆ ಸುಮಾರು 150 ರಿಂದ 200 ಟನ್ ತರಕಾರಿ ಬರುತ್ತಿದ್ದು, ಅದರಲ್ಲಿ ಶೇ. 60 ರಿಂದ 70 ರಷ್ಟು ತರಕಾರಿ ಮಾತ್ರ ವ್ಯಾಪಾರವಾಗುತ್ತಿದೆ. ಜೊತೆಗೆ ಇಲ್ಲಿ ನೆಲದ ಮೇಲೆ ಮಾರಾಟ ಮಾಡಬೇಕಿದ್ದು, ಮಳೆ ಬಂದರೆ ತರಕಾರಿಗೆಲ್ಲಾ ಮಣ್ಣು ಬೀಳುತ್ತದೆ ಹಾಗಾಗಿ ಯಾವುದೇ ಒಂದೇ ಬೆಲೆ ನಿಗದಿ ಮಾಡದೆ ಸಿಕ್ಕ ಸಿಕ್ಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ತರಕಾರಿ ಮಾರ್ಚೆಂಟ್‍ರ ಮಾತಾಗಿದೆ.
ತಮ್ಮ ಫಸಲನ್ನೇ ನಂಬಿ ಜೀವನ ನಡೆಸುತ್ತಿದ್ದ ಅನೇಕ ಮಂದಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಇನ್ನೂ ಸ್ವಲ್ಪ ರೈತರು ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಗಿಡದಲ್ಲಿ ಬಾಡುವುದನ್ನು ನೋಡಲಾಗದೆ ಆಟೋಗಳನ್ನು ಮಾಡಿಕೊಂಡು ಕಡಿಮೆ ಬೆಲೆಗೆ ಆದರೂ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಯಾವುದೇ ವ್ಯವಸ್ಥೆ ಇಲ್ಲದವರು ಹೊಲದಲ್ಲೇ ಕೊಳೆಯಲಿ ಎಂದು ಬಿಟ್ಟು ಬಿಟ್ಟಿದ್ದಾರೆ.
ಇನ್ನೂ ಬೀದಿ ಬದಿ ಹಣ್ಣು, ತರಕಾರಿ ವ್ಯಾಪಾರಿಗಳು ಇಷ್ಟೂ ದಿನ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿದ್ದು, ಲಾಕ್ ಡೌನ್ ಸಡಿಲಗೊಂಡ ನಂತರ ದಿನಗಳಿಂದ ಅಲ್ಲಲ್ಲಿ ಕೆಲವರು ವ್ಯಾಪಾರ ಆರಂಭಿಸಿದ್ದಾರೆ ಹಾಗಾಗಿ ಎಲ್ಲಾ ರೈತರು ಮತ್ತು ವ್ಯಾಪಾರಿಗಳ ಬದುಕು ಛಿದ್ರವಾಗಿದೆ.

ರಾಜ್ಯ ಸರ್ಕಾರ ಹೂಬೆಳೆಗಾರರಿಗೆ, ರೈತರಿಗೆ ಪರಿಹಾರದ ನೆರವು ನೀಡುವುದಾಗಿ ಹೇಳಿದ್ದರೂ, ಆ ಪರಿಹಾರದ ಹಣ ಯಾವಾಗ ಬರುತ್ತದೆ ಎಂಬ ಅರಿವೂ ಇಲ್ಲದ ರೈತ ಬೆಳೆಗಾರರು ಕಂಗಾಲಾಗಿದ್ದಾರೆ.

ಒಂದು ಎಕರೆ ಕ್ಯಾರೆಟ್ ಬೆಳೆಯು ಉತ್ತಮ ಫಸಲು ನೀಡಿದೆ. ಆದರೆ ಲಾಕ್‍ಡೌನ್ ಪರಿಣಾಮವಾಗಿ ಬೆಲೆಯು ಕುಸಿತ ಕಂಡಿದ್ದು, ಸ್ಥಳೀಯ ಮಾರುಕಟ್ಟೆಗೆ ತರಕಾರಿಯನ್ನು ಹಾಕಿದರೂ ಅದರಿಂದ ಸಾರಿಗೆ ವೆಚ್ಚಬರಿಸಲು ಆಗುತ್ತಿಲ್ಲ.
– ಮಂಜುನಾಥ್, ರೈತ

ಹೂ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆವು, ಲಾಕ್‍ಡೌನ್ ಪರಿಣಾಮವಾಗಿ ದುಡಿಮೆಯೂ ಇಲ್ಲ, ಕೈಯಲ್ಲಿ ಕಾಸೂ ಇಲ್ಲದೆ ಇರುವುದರಲ್ಲೇ ಜೀವನದ ಬಂಡಿ ಎಳೆಯುತ್ತಿದ್ದೇವೆ.
– ಲಕ್ಷ್ಮಮ್ಮ, ಹೂವಿನ ವ್ಯಾಪಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights