Lockdown: ವಿದ್ಯುತ್ ದರ ಪರಿಷ್ಕರಣೆ ಸದ್ಯಕ್ಕಿಲ್ಲ, ರಾಜ್ಯದ ಜನರು ನಿರಾಳ
ಕೊರೊನಾ ಭೀತಿಯಿಂದ ದೇಶದಲ್ಲಿ ಲಾಕ್ಡೌನ್ ಆಗಿರುವುದರಿಂದಾಗಿ ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಿಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂತೆಯೇ ಕೊರೋನಾ ಪರಿಣಾಮದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ರಾಜ್ಯ ಸರ್ಕಾರ ಹೊರೆ ಹೇರಲು ಮುಂದಾಗುತ್ತಿಲ್ಲ. ಸದ್ಯ ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಯನ್ನು ಮುಂದೂಡಿದ್ದು, ವಿದ್ಯುತ್ ಗ್ರಾಹಕರಿಗೆ ನಿರಾಳವಾಗಿದೆ.
ಪ್ರತಿ ವರ್ಷ ಏಪ್ರಿಲ್ ಒಂದರಿಂದ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ಎಫೆಕ್ಟ್ನಿಂದಾಗಿ ವಿದ್ಯುತ್ ದರ ಏರಿಕೆ ಮಾಡಲ್ಲ ಎಂದು ಕೆಇಆರ್ಸಿ(ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ) ಆದೇಶ ಹೊರಡಿಸಿದೆ. ಹೀಗಾಗಿ ರಾಜ್ಯದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಕೆಇಆರ್ಸಿ ಮುಂದಿನ ಆದೇಶ ನೀಡುವವರೆಗೆ ವಿದ್ಯುತ್ ದರ ಏರಿಕೆಯಾಗಿಲ್ಲ.
ಪ್ರತಿ ಯೂನಿಟ್ಗೂ ದರ ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆ ಮೇರೆಗೆ ಕೆಇಆರ್ಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ದರ ಹೆಚ್ಚಳ ಮಾಡಲು ಸಿದ್ಧವಾಗಿತ್ತು. ಕೆಇಆರ್ಸಿ ಪ್ರತಿ ವರ್ಷ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡುತ್ತಿತ್ತು.
ಆದರೆ ಈಗ ಭಾರತ ಲಾಕ್ ಡೌನ್ ಹಿನ್ನಲೆ ವಿದ್ಯುತ್ ದರ ಪರಿಷ್ಕರಣೆಯನ್ನು ಮುಂದೂಡಲಾಗಿದ್ದು, ಕೆಇಆರ್ಸಿ ಅಧಿಕೃತ ಆದೇಶ ಹೊರಡಿಸಿದೆ. ಕೊರೋನಾ ಭೀತಿಯಲ್ಲಿರುವ ರಾಜ್ಯದ ಜನತೆಗೆ ಈಗ ರಿಲೀಫ್ ಸಿಕ್ಕಿದೆ.

