ಆಧುನಿಕ ಮಹಿಳೆಯರು ಮಕ್ಕಳನ್ನು ಹೆರಲು ಬಯಸುತ್ತಿಲ್ಲ ಎಂದ ಸುಧಾಕರ್; ಸಚಿವರಿಗೆ ಚಿಕಿತ್ಸೆ ಅಗತ್ಯವಿದೆ ಎಂದ ನೆಟ್ಟಿಗರು

‘‘ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆಯಾದ ನಂತರ ಕೂಡಾ ಅವರು ಜನ್ಮ ನೀಡಲು ಇಷ್ಟಪಡುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಾರೆ, ಇದು ಸರಿಯಲ್ಲ’’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದು, ವಿವಾದ ಸೃಷ್ಟಿಸಿದ್ದಾರೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ಸಂಸ್ಥೆ(ನಿಮ್ಹಾನ್ಸ್) ಭಾನುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ, “ಇಂದು ಇದನ್ನು ಹೇಳಲು ನನಗೆ ಬೇಸರವಾಗುತ್ತಿದೆ. ಭಾರತದ ಬಹಳಷ್ಟು ಆಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಅವರು ಮದುವೆಯಾಗಿದ್ದರೂ ಜನ್ಮ ನೀಡಲು ಬಯಸುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಿದ್ದಾರೆ. ನಮ್ಮ ಆಲೋಚನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ಇದು ಒಳ್ಳೆಯದಲ್ಲ” ಎಂದು ಹೇಳಿದ್ದಾರೆ.

ಭಾರತೀಯ ಸಮಾಜದ ಮೇಲೆ “ಪಾಶ್ಚಿಮಾತ್ಯ ಪ್ರಭಾವ” ಹೆಚ್ಚಾಗಿದೆ ಎಂದು ವಿಷಾದಿಸಿದ ಸಚಿವ ಸುಧಾಕರ್‌, ಜನರು ತಮ್ಮ ಹೆತ್ತವರು ತಮ್ಮೊಂದಿಗೆ ಇರಲು ಇಷ್ಟಪಡುತ್ತಿಲ್ಲ ಎಂದು ಹೇಳಿದ್ದಾರೆ.

“ದುರದೃಷ್ಟವಶಾತ್, ಇಂದು ನಾವು ಪಾಶ್ಚಿಮಾತ್ಯ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಅಜ್ಜ-ಅಜ್ಜಿಯರು ನಮ್ಮೊಂದಿಗೆ ಇರುವುದನ್ನು ಬಿಡಿ, ಹೆತ್ತವರೇ ನಮ್ಮೊಂದಿಗೆ ಇರುವುದನ್ನು ನಾವು ಬಯಸುತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಲ್ಲಿ 1.36 ಲಕ್ಷ ಜನರು ಆತ್ಮಹತ್ಯೆ; ಮಾನಸಿಕ ಒತ್ತಡವೇ ಮೂಲ ಕಾರಣ

ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಸುಧಾಕರ್‌, “ಪ್ರತಿ ಏಳು ಭಾರತೀಯರಲ್ಲಿ ಒಬ್ಬರು ಒಂದು ರೀತಿಯ ಮಾನಸಿಕ ಸಮಸ್ಯೆ ಹೊಂದಿದ್ದಾರೆ. ಅದು ಸೌಮ್ಯ, ಮಧ್ಯಮ ಮತ್ತು ತೀವ್ರವಾಗಿರಬಹುದು. ಒತ್ತಡ ನಿರ್ವಹಣೆ ಒಂದು ಕಲೆಯಾಗಿದ್ದು, ಈ ಕಲೆಯನ್ನು ಭಾರತೀಯರಾದ ನಾವು ಕಲಿಯಬೇಕಾಗಿಲ್ಲ. ನಾವು ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಜಗತ್ತಿಗೆ ಬೋಧಿಸಬೇಕಾಗಿದೆ. ಯಾಕೆಂದರೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಜಗತ್ತಿಗೆ ಕಲಿಸಿದ ಅದ್ಭುತ ಸಾಧನಗಳಾಗಿವೆ” ಎಂದು ಅವರು ಹೇಳಿದ್ದಾರೆ.

ಸುಧಾಕರ್‌ ಅವರು ಮಹಿಳೆಯರ ವಿರುದ್ದ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಕಾರ್ಯಕರ್ತೆ ಸಂಜ್ಯೋತಿ ಅವರು, “ಮಾನ್ಯ ಆರೋಗ್ಯ ಸಚಿವರೇ ನಿಮಗೆ ಉತ್ತಮವಾದ ಗಂಭೀರ ಚಿಕಿತ್ಸೆಯ ಅಗತ್ಯವಿದೆ. ಅದೃಷ್ಟವಶಾತ್ ನಮ್ಮಲ್ಲಿ ವಿಶ್ವದ ಅತ್ಯುತ್ತಮ ಮಾನಸಿಕ ಆರೋಗ್ಯ ವ್ಯವಸ್ಥೆಯಾಗಿರುವ ಬೆಂಗಳೂರಿನ ನಿಮ್ಹಾನ್ಸ್ ಇದೆ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಮಕ್ಕಳ ಮಾನಸಿಕ ಆರೋಗ್ಯ ಹದಗೆಟ್ಟಿದ್ದರೆ ಪೋಷಕರು ಮಾಡಬೇಕಾದ ಪ್ರಮುಖ ಕೆಲಸವಿದು…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights