SSLC ಪರೀಕ್ಷೆ: ಏನುಮಾಡಬೇಕು? ಶಿಕ್ಷಣ ತಜ್ಞರು ಮತ್ತು ಹೋರಾಟಗಾರರಿಂದ ಸರ್ಕಾರಕ್ಕೆ ಪತ್ರ
ಕೊರೊನಾ ವೈರಸ್ ದೇಶಾದ್ಯಂತ ಹರಡಲು ಆರಂಭಿಸುತ್ತಿದ್ದಂತೆಯೇ, ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ದೇಶದ ವ್ಯವಹಾರಗಳೇ ಸ್ಥಬ್ಧವಾಗಿ ನಿಂತುಹೋಗಿವೆ. ಲಾಕ್‌ಡೌನ್ ಘೋಷಣೆಗೂ ಮುನ್ನವೇ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಿಗೆ ರಜೆಯನ್ನೂ ಘೋಷಿಸಲಾಗಿತ್ತು. ದ್ವಿತೀಯ ಪಿಯುಸಿ ಪರೀಕ್ಷೆ ಅದಕ್ಕೂ ಮುಂಚೆಯೇ ಆರಂಭಗೊಂಡಿದ್ದರಿಂದ ಕೊನೆಯ ಇಂಗ್ಲೀಷ್ ವಿಷಯದ ಪರೀಕ್ಷಯೊಂದು ಮಾತ್ರ ಬಾಕಿ ಉಳಿದಿತ್ತು ಹಾಗೂ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ಆರಂಭವಾಗುವ ತಯಾರಿಯಲ್ಲಿ ಪರೀಕ್ಷಾ ಬೋರ್ಡ್ ಮತ್ತು ವಿದ್ಯಾರ್ಥಿಗಳು ನಿರತರಾಗಿದ್ದರು. ಆದರೆ, ಕೊರೊನಾ ನಿಯಂತ್ರಿಣಕ್ಕೆ ಮುಂದಾದ ಸರ್ಕಾರ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯನ್ನೂ, ಎಸ್‌ಎಸ್‌ಎಲ್ ಪರೀಕ್ಷೆಗಳನ್ನು ಮುಂದೂಡಿತ್ತು.
ಏಪ್ರಿಲ್ 14ರಂದು ಲಾಕ್‌ಡೌನ್ ಮುಗಿದ ನಂತರ ಪರೀಕ್ಷೆಗಳ ವೇಳಾ ಪಟ್ಟಿಗಳನ್ನು ಬಿಡುಗಡೆ ಮಾಡುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು. ಆದರೆ, ಈಗ ಲಾಕ್‌ಡೌನ್ ಇನ್ನೂ ಮುಂದುವರೆಯುವ ಸಾಧ್ಯತೆಗಳು ಹೆಚ್ಚಗಿವೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ತಯಾರಿಯಲ್ಲಿದ್ದ ವಿದ್ಯಾರ್ಥಿಗಳು ಪರೀಕ್ಷೆಗಳು ಯಾವಾಗ ಆರಂಭವಾಗುತ್ತವೆ ಎಂಬ ಸುಳಿವೂ ಇಲ್ಲದೆ, ಒಂದೆಡೆ ಆರೋಗ್ಯ- ಮತ್ತೊಂದೆಡೆ ಪರೀಕ್ಷೆಗಳನ್ನು ಎದುರಿಸುತ್ತಿದ್ದು, ಅಕ್ಷರಸಹ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಆತಂಕವನ್ನು ಹೋಗಲಾಡಿಸಿ, ಪರೀಕ್ಷೆಗಳನ್ನು ಯಾವ ರೀತಿಯಲ್ಲಿ ನಡೆಸಬಹುದು. ಮುಂದೇನು ಮಾಡಬೇಕು ಎಂಬುದರ ಕುರಿತು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ, ಶಿಕ್ಷಣ ತಜ್ಞರು ಮತ್ತು ಹೋರಾಟಗಾರರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಪತ್ರದಲ್ಲಿನ ವಿಷಯ ಕೆಳಕಂಡಂತಿದೆ:
ಕೊರೋನಾ ವೈರಸ್ ಅತ್ಯಂತ ವೇಗವಾಗಿ ಹಬ್ಬುತ್ತಿದೆ . ಲಾಕ್ ಡೌನ್ ನನ್ನು ವಿಸ್ತರಿಸಬೇಕೇ ಬೇಡವೇ ಎಂಬ ಚರ್ಚೆಗಳು ನಡೆಯುತ್ತಿವೆ . ಈ ಸಂದರ್ಭದಲ್ಲಿ ಸೋಂಕಿತರು , ಭಾದಿತರು , ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದವರು ಹಾಗು ಕ್ವಾರಂಟೈನ್ (ಮೂಲೆ ಗುಂಪಾದವರು)ಗೆ ಒಳಪಟ್ಟವರು ಸಾವಿರಾರು ಜನರು ಆತಂಕದಲ್ಲಿದ್ದಾರೆ . ಇನ್ನು ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.
ಹೀಗಿರುವಾಗ ಎಸ್ ಎಸ್ಎಲ್ ಸಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ನಾವಾಗಿ ನಾವೇ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ. ಮನುಷ್ಯನ ಜೀವಕ್ಕಿಂತ ಅಮೂಲ್ಯವಾದದು ಬೇರೊಂದಿಲ್ಲ. ಆದ್ದರಿಂದ ಪರೀಕ್ಷೆ ನಡೆಸಲು ಪರ್ಯಾಯ ಮಾರ್ಗವನ್ನು ಯೋಚಿಸಿವುದು ಮುಖ್ಯವಾಗುತ್ತದೆ.
ಈ ಬಾರಿ ಸುಮಾರು ಎಂಟು ಲಕ್ಷ ಮಕ್ಕಳು ಪರೀಕ್ಷೆ ಬರೆಯಲ್ಲಿದ್ದಾರೆ. ಒಂದೊಂದು ಪರೀಕ್ಷಾ ಕೇಂದ್ರದಲ್ಲಿ 250-300 ಮಕ್ಕಳು ಎಂದರೂ, ಅವರನ್ನು ಬಿಡಲು ಬರುವ ಅಷ್ಟೇ ಸಂಖ್ಯೆಯ ಪೋಷಕರು, 25-30 ಸಿಬ್ಬಂದಿ ಸುಲಭವಾಗಿ ಒಂದು ಕೇಂದ್ರದಲ್ಲಿ ಸೇರುತ್ತಾರೆ. ಇಷ್ಟು ದೊಡ್ಡ ಸಂಖ್ಯೆ ಬಹಳ ಸುಲಭವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಅಂತರ ಎಂದರೂ , ಮಕ್ಕಳ ಹಾಗು ಪಾಲಕರ ಕೌತುಕ ಅವರು ಹತ್ತಿರವಾಗುವಂತೆ ಮಾಡುತ್ತದೆ .
ಕರ್ನಾಟಕದ ಮೂಲೆಮೂಲೆಗಳಲ್ಲಿ ಸುಮಾರು 3000-3200 ಕ್ಕೂ ಹೆಚ್ಚು ಕೇಂದ್ರ ಗಳಲ್ಲಿ ಮಕ್ಕಳು ಪರೀಕ್ಷೆ ಬರೆಯುವುದಾದರೆ ಇದು ಎಂಥಹ ಆತಂಕವನ್ನು ಸೃಷ್ಟಿಸಬಲ್ಲದು ಎಂಬುದನ್ನು ಸುಲಭವಾಗಿ ಊಹಿಸಬಹುದು.
ಇಲ್ಲಿ ನಾವು ಎಷ್ಟೇ ಸುರಕ್ಷತಾ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡರೂ ಅದರ ಅನುಷ್ಠಾನದ ಕಾರ್ಯದಲ್ಲಿ ಆಗುವ ತೊಂದರೆ ಗಳನ್ನು ನಿಜವಾಗಿಯೂ ಗಮನಿಸಬೇಕಾಗಿದೆ. ಇಷ್ಟೆಲ್ಲ ಮುಂಜಾಗರೂಕತೆ ಇದ್ದರೂ ನಾವು ಪ್ರತೀ ವಿದ್ಯಾರ್ಥಿಯನ್ನು ಪರೀಕ್ಷೆಗೆ ಒಳಪಡಿಸದ ಕಾರಣ ಸೋಂಕು ತಗುಲಿದರೂ ಅದನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಿದ್ದು ಸೋಂಕು ಕಣ್ಣಿಗೆ ಕಾಣದ ರೀತಿಯಲ್ಲಿ ಹರಡುವ ಸಂಭವನೀಯತೆ ಹೆಚ್ಚಿರುತ್ತದೆ .
ಪರೀಕ್ಷಾ ನಂತರದಲ್ಲಿ ಮೌಲ್ಯ ಮಾಪನ ಕೇಂದ್ರಕ್ಕೆ ಉತ್ತರ ಪತ್ರಿಕೆಯ ಸಾಗಾಟ ನಂತರ ಮೌಲ್ಯ ಮಾಪನಕೇಂದ್ರದಲ್ಲಿ ಸುಮಾರು 400 ರಿಂದ 600 ಶಿಕ್ಷಕರು ಗುಂಪು ಸೇರಿದಾಗ ಸರಿ ಸುಮಾರು 174 ರಿಂದ 250 ಮೌಲ್ಯಮಾಪನ ಕೇಂದ್ರಗಳಲ್ಲಿ ಶಿಕ್ಷಕರ ಸುರಕ್ಷತೆ ಮತ್ತು ಮುಂಜಾಗ್ರತೆಯ ಕ್ರಮಗಳು ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸುತ್ತವೆ .
ಹೀಗೆ ಪರೀಕ್ಷೆಯ ಪ್ರಾರಂಭದಿಂದ ಮೌಲ್ಯಮಾಪನದ ಅಂತ್ಯದವರೆಗೆ ಮಕ್ಕಳ -ಶಿಕ್ಷಕರ ಜೀವವನ್ನು ಪಣಕ್ಕಿಟ್ಟು ಪಬ್ಲಿಕ್ ಪರೀಕ್ಷೆ ನಡೆಸುವುದು ನನಗೆ ವೈಯುಕ್ತಿಕವಾಗಿ ಜೀವಗಳ ಜೊತೆಗಿನ ಚೆಲ್ಲಾಟವೆನಿಸುತ್ತದೆ.
ಇದಕ್ಕೆ ಬದಲಾಗಿ , ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಈಗಾಗಲೇ ಸಿದ್ದವಾಗಿರುವ ಪ್ರಶ್ನೆ ಪತ್ರಿಕೆಗಳನ್ನು ಬಳಸಿ ಆಯಾ ಶಾಲಾ ಮಟ್ಟ ದಲ್ಲಿಯೇ ನಡೆಸಲು ತೀರ್ಮಾನಿಸುವುದು ಸಾಂದರ್ಭಿಕ ಮತ್ತು ಸಕಾಲಿಕ ತೀರ್ಮಾನವಾಗುತ್ತದೆ . ಪರೀಕ್ಷೆ ನಂತರ ಆಯಾ ವಿಷಯದ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಮೌಲ್ಯ ಮಾಪನ ಮಾಡಿ ಅಂಕಗಳನ್ನು ಮಂಡಳಿಗೆ ಕಳಿಸುವುದು ಅತ್ಯಂತ ಪ್ರಾಯೋಗಿಕ ಮತ್ತು ಮುಂಜಾಗರೂಕತೆಯ ತೀರ್ಮಾನವಾಗುತ್ತದೆ.
ಬರಬಹುದಾದ ಒಂದು ತಗಾದೆ ಎಂದರೆ ಅದೇ ಶಾಲೆಯ ಹಂತದಲ್ಲಿ ಪರೀಕ್ಷೆ ಹಾಗು ಅದೇ ಶಾಲೆಯ ಶಿಕ್ಷಕರೇ ಮೌಲ್ಯಮಾಪನ ಮಾಡುವುದರಿಂದ , ವಸ್ತುನಿಷ್ಠತೆ ಪ್ರಾಮಾಣಿಕತೆಯ ಪ್ರಶ್ನೆ ಬರಬಹುದು.
ಆದರೆ , ಮಕ್ಕಳ ಜೀವಕ್ಕಿಂತ ವಸ್ತುನಿಷ್ಠತೆ ಪಬ್ಲಿಕ್ ಪರೀಕ್ಷೆ ದೊಡ್ಡದಲ್ಲ. ಜೊತೆಗೆ, ಸಂಕಷ್ಟದ ಕಾಲದಲ್ಲಿ ಶಿಕ್ಷಕರ ಮೇಲೆ ನಂಬಿಕೆ ಇಟ್ಟು ಪರೀಕ್ಷೆ ನಡೆಸುವುದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪುನರುಚ್ಚರಿಸಿದಂತಾಗುತ್ತದೆ.
ಇದು ದೊಡ್ಡ ಅಪರಾಧ ಅಥವಾ ಎಲ್ಲಿಯೂ ನಡೆಯದೆ ಇರುವ ಪ್ರಕ್ರಿಯೇನು ಅಲ್ಲ. ದೇಶದ ಪ್ರತಿಷ್ಠಿತ ಸ್ವಾಯತ್ತತೆ ಸಂಸ್ಥೆಗಳಾದ ಐಐಟಿ, ಐಐಎಂ, ಕಾನೂನು ಶಾಲೆಗಳು ,ಐಎಸ್ ಬಿ ಹಲವು ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯಗಳು ಅವರೇ ಪಠ್ಯಕ್ರಮ ರೂಪಿಸಿ , ಪರೀಕ್ಷೆ ನಡೆಸಿ , ಮೌಲ್ಯಮಾಪನ ಮಾಡಿ ಫಲಿತಾಂಶ ನೀಡುತ್ತಾರೆ. ಇವುಗಳ ಮುಂದೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ನಡೆಸಿ ಫಲಿತಾಂಶ ನೀಡುವುದು ದೊಡ್ಡ ಏರುಪೇರೇನು ಆಗುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ , ಮಕ್ಕಳ- ಶಿಕ್ಷಕರ ಜೀವಗಳನ್ನು ರಕ್ಷಿಸುವ ಕಾಪಾಡುವ ದೃಷ್ಟಿಯಿಂದ ಒಂದು ಮಹತ್ವದ ತೀರ್ಮಾನವಾಗಲಿದೆ.
ಮಕ್ಕಳ ಜೀವ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಈ ಬಾರಿ ಶಿಕ್ಷಕರ ಮೇಲೆ ನಂಬಿಕೆ ಇಟ್ಟು ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸುವುದು ಸಮಯೋಚಿತ ತೀರ್ಮಾನವಾಗಲಿದೆ.
– ನಿರಂಜನಾರಾಧ್ಯ .ವಿ.ಪಿ – ಅಭಿವೃದ್ಧಿ ಶಿಕ್ಷಣ ತಜ್ಞ,
ಬಿ. ಶ್ರೀಪಾದ ಭಟ್, ಮುತ್ತುರಾಜ್ – ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ