ಕಾಫಿ ತೋಟದ ರಕ್ಷಣೆಗಾಗಿ ಆನೆಗಳಿಗೆ ಸಾವಿರಾರು ಕೆಜಿ ಹಲಸಿನಹಣ್ಣು ನೀಡುತ್ತಿರುವ ರೈತ!
ಕಾಫಿ ಎಸ್ಟೇಟ್‌ನ ಮಾಲೀಕರೊಬ್ಬರು ಆನೆಗಳಿಂದ ತನ್ನ ಜಮೀನಿನಲ್ಲಿರುವ ಕಾಫಿಗಿಡಗಳಿಗೆ ಹಾನಿಯಾಗುತ್ತಿರುವುದನ್ನು ಗಮನಿಸಿ ಅವುಗಳ ರಕ್ಷಣೆಗಾಗಿ ತಾನು ಬೆಳೆದ ಹಲಸಿನಹಣ್ಣುಗಳನ್ನು ಆನೆಗಳಿಗೆ ನೀಡುತ್ತಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಕಿರೆಹಳ್ಳಿಯಲ್ಲಿರುವ ಎಸ್ಟೇಟ್ ಮಾಲೀಕರಾದ ಕೃಷ್ಣೇಗೌಡ ಎಂಬುವವರು ಹಳ್ಳಿಯ ಸುತ್ತ ಆನೆಗಳು ಓಡಾಡುವ ಹಾದಿಯಲ್ಲಿ ಹಲಸಿನಹಣ್ಣುಗಳನ್ನು ಸುರಿಯುತ್ತಿದ್ದಾರೆ. ಸುರಿಯಲಾಗಿರುವ ಹಣ್ಣುಗಳನ್ನು ಆನೆಗಳು ತಿಂದು ಹಿಂದಿರುಗುತ್ತವೆ. ಇದರಿಂದಾಗಿ ತಮ್ಮ ಎಸ್ಟೇಟ್‌ನಲ್ಲಿರುವ ಕಾಫಿಗಿಡಗಳಿಗೆ ತೊಂದರೆಯಾಗುವುದಿಲ್ಲ ಎಂಬ ಭರವಸೆಯಿಂದ ಹೀಗೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಕೃಷ್ಣೇಗೌಡ ಎಂಬುವವರು 30 ಎಕರೆ ಕಾಫಿ ಎಸ್ಟೇಟ್ ಹೊಂದಿದ್ದು, ಕಳೆದ ಕೆಲವು ದಿನಗಳಿಂದ 20 ಕ್ಕೂ ಹೆಚ್ಚು ಆನೆಗಳ ಹಿಂಡು ಹಳ್ಳಿಯ ಸುತ್ತಮುತ್ತ ಅಲೆದಾಡುತ್ತಿವೆ. ಯಾವ ಸಂದರ್ಭದಲ್ಲಾದರೂ ಆನೆಗಳು ತೋಟಗಳಿಗೆ ನುಗ್ಗಬಹುದು. ಅವುಗಳನ್ನು ಎದುರಿಸಲು ತೋಟಗಾರರು ಮತ್ತು ಕಾರ್ಮಿಕರಿಂದ ಸಾಧ್ಯವಿಲ್ಲ.
“ಆನೆಗಳು ನಮ್ಮ ಎಸ್ಟೇಟ್ ಪ್ರವೇಶಿಸಿದರೆ ಕಾಫಿ ಗಿಡಗಳಿಗೆ ಹಾನಿಯಾಗುವುದರ ಜೊತೆಗೆ ಹಲಸಿನಹಣ್ಣುಗಳನ್ನೂ ತಿನ್ನುತ್ತವೆ. ಹಾಗಾಗಿ ಕಾಫಿಯನ್ನಾದರೂ ಉಳಿಸಿಕೊಳ್ಳುವುದಕ್ಕಾಗಿ, ಅವುಗಳ ಎಸ್ಟೇಟ್ ಪ್ರವೇಶಿಸದಂತೆ ದಾರಿಯಲ್ಲಿಯೇ ಹಣ್ಣುಗಳನ್ನು ಅವುಗಳಿಗಾಗಿ ಸುರಿಯಲು ಯೋಚಿಸಿದೆ” ಎಂದು ಅವರು ಹೇಳಿದ್ದಾರೆ.
ಸಕಲೇಶಪುರ, ಯೆಸ್ಲೂರ್ ಮತ್ತು ಆಲೂರು ಅರಣ್ಯ ಭಾಗಗಳಲ್ಲಿ 60ಕ್ಕೂ ಹೆಚ್ಚು ಆನೆಗಳು ಪ್ರತಿನಿತ್ಯ ಸಂಚರಿಸುತ್ತಿವೆ. ಅರಣ್ಯ ಇಲಾಖೆಯು ಪ್ರತಿದಿನ ಹಿಂಡುಗಳಿಂದ ಉಂಟಾಗುವ ಬೆಳೆ ಹಾನಿಯ ವರದಿಗಳನ್ನು ಪಡೆಯುತ್ತದೆ. ಜನರು ಮತ್ತು ಆನೆಗಳ ಮುಖಾಮುಖಿಯನ್ನು ತಪ್ಪಿಸಲು ಸ್ಥಳೀಯ ಯುವಕರನ್ನು ಒಳಗೊಂಡ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಇಲಾಖೆ ಕಳುಹಿಸುತ್ತದೆ. “ನಾವು ನಮ್ಮ ವಾಹನಗಳನ್ನು ರಸ್ತೆಯ ಕಡೆಗೆ ನಿಲ್ಲಿಸುತ್ತೇವೆ. ಆನೆಗಳು ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು. ನಾವು ಆಗ ವಾಹನಗಳಲ್ಲಿ ಪಲಾಯನ ಮಾಡುತ್ತೇವೆ” ಎಂದು ಅವರು ಹೇಳಿದರು.
ಆನೆಗಳ ಚಲನವಲನ ಕುರಿತು ಇಲಾಖೆಯು ಮೊಬೈಲ್ ಫೋನ್‌ಗಳ ಮೂಲಕ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸುತ್ತದೆ. ಆನೆಗಳ ಹಿಂಡುಗಳನ್ನು ಪತ್ತೆಹಚ್ಚಲು ಇಲಾಖೆ ಕೆಲವು ಆನೆಗಳನ್ನು ರೇಡಿಯೊ-ಕಾಲರ್ ಮಾಡಿದೆ. ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಸ್ಥಳೀಯ ಜನರನ್ನು ಎಚ್ಚರಿಸುತ್ತವೆ. ಆನೆಗಳು ಇರುವುದರಿಂದಾಗಿ ಅನೇಕ ತೋಟಗಾರರು ತಮ್ಮ ತೋಟಗಳಲ್ಲಿ ಯಾವುದೇ ಕೆಲಸವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

